)
ಟೀಮ್ ಇಂಡಿಯಾದ ನಾಯಕ ಶುಭ್ಮನ್ ಗಿಲ್ ಹಾಗೂ ಉಪನಾಯಕ ಶ್ರೇಯಸ್ ಅಯ್ಯರ್ ಅವರು ತಂಡಕ್ಕೆ ಅಲಭ್ಯರಾದ ಹಿನ್ನೆಲೆಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ತಂಡದ ಸಾರಥಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಒಡಿಐ ಮ್ಯಾಚ್ ಜಾರ್ಖಂಡ್ನ ರಾಂಚಿಯಲ್ಲಿ ನಾಳೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕ್ಯಾಪ್ಟನ್ ಕೆ.ಎಲ್ ರಾಹುಲ್ ಅವರು ಯಾವ ಹಂತದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಭಾರತ ತಂಡದ ಭರವಸೆಯ ಬ್ಯಾಟರ್, ವಿಕೆಟ್ ಕೀಪರ್ ಕಮ್ ಕ್ಯಾಪ್ಟನ್ ಆಗಿರುವ ಕೆ.ಎಲ್ ರಾಹುಲ್ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದಿಲ್ಲ. ಇದರ ಬದಲಿಗೆ ಕಳೆದ ಚಾಂಪಿಯನ್ ಟ್ರೋಫಿಯಲ್ಲಿ ಬ್ಯಾಟಿಂಗ್ ಮಾಡಿದ ಸ್ಲಾಟ್ ಅನ್ನೇ ಇಲ್ಲಿಯೂ ಮುಂದುವರೆಸುತ್ತೇನೆ ಎಂದಿದ್ದಾರೆ. ಅಂದರೆ ಕೆ.ಎಲ್ ರಾಹುಲ್ ಅವರು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಆಗಮಿಸಲಿದ್ದಾರೆ. ಮ್ಯಾನೇಜ್ಮೆಟ್ನ ಆಸೆಯೂ ಇದೇ ಅಗಿದೆ ಎಂದು ಹೇಳಲಾಗುತ್ತಿದೆ.
ಕೆ.ಎಲ್ ರಾಹುಲ್ ಅವ್ರು 2024 ರಲ್ಲಿ 11 ಒಡಿಐ ಪಂದ್ಯಗಳ ಪೈಕಿ ಹತ್ತು ಮ್ಯಾಚ್ಗಳಲ್ಲಿ ಆರನೇ ಸ್ಥಾನದಲ್ಲಿ ಕ್ರೀಸ್ಗೆ ಅಗಮಿಸಿ ಬ್ಯಾಟ್ ಬೀಸಿದ್ದರು. 40.50 ಸರಾಸರಿಯೊಂದಿಗೆ 94.18 ಸ್ಟ್ರೈಕ್ರೇಟ್ನಲ್ಲಿ 243 ರನ್ಗಳನ್ನು ಗಳಿಸಿದ್ದರು. ಕೆ.ಎಲ್ ರಾಹುಲ್ ಐದನೇ ಹಾಗೂ ಆರನೇ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ತಂಡದ ಮ್ಯಾನೇಜ್ಮೆಂಟ್, ಆರನೇ ಕ್ರಮಾಂಕದಲ್ಲಿ ಫಿನೀಶರ್ ಆಗಿ ಆಡಲಿ ಎನ್ನುವುದು ಬಯಕೆ ಆಗಿದೆ. ಹೀಗಾಗಿ ಕನ್ನಡಿಗ ಫಿನೀಶರ್ ಆಗಿ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಭಾರತ ತಂಡದ ಪ್ಲೇಯಿಂಗ್- 11 ಇನ್ನು ನಿರ್ಧಾರವಾಗಿಲ್ಲ. ಆದರೂ ಕ್ಯಾಪ್ಟನ್ ಕೆ.ಎಲ್ ರಾಹುಲ್ ಬ್ಯಾಟಿಂಗ್ ಮಾಡುವ ಸ್ಲಾಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ಲೇಯಿಂಗ್- 11 ಅಲ್ಲಿ ಯಾವ ಯಾವ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎನ್ನುವುದು ನಾಳೆ ಗೊತ್ತಾಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸೌತ್ ಆಫ್ರಿಕಾ ಜೊತೆ ಟೆಸ್ಟ್ ಸರಣಿ ಸೋತಿರುವ ಭಾರತ, ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.