MS Dhoni ಭವಿಷ್ಯದ ಬಗ್ಗೆ ಸೌರವ್ ಗಂಗೂಲಿ ಏನ್ ಹೇಳಿದ್ರು?

ಗಮನಾರ್ಹವಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಪಂದ್ಯಾವಳಿಯ ನಂತರ ತಂಡದಿಂದ ಹೊರಗುಳಿದಿದ್ದಾರೆ.

Yashaswini V Yashaswini V | Updated: Nov 30, 2019 , 09:04 AM IST
MS Dhoni ಭವಿಷ್ಯದ ಬಗ್ಗೆ ಸೌರವ್ ಗಂಗೂಲಿ ಏನ್ ಹೇಳಿದ್ರು?

ಭಾರತದ ಮಾಜಿ ಕ್ರಿಕೆಟ್ ದಂತಕಥೆ,  ಬಿಸಿಸಿಐ ಅಧ್ಯಕ್ಷ  ಸೌರವ್ ಗಂಗೂಲಿಯವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ  ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ನಿವೃತ್ತಿಯ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ಧೋನಿಯ ಭವಿಷ್ಯದ ಬಗ್ಗೆ ಮುಂದಿನ ಕೆಲವು ದಿನಗಳಲ್ಲಿ ಎಲ್ಲವೂ ತಿಳಿಯಲಿದೆ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಎಂ.ಎಸ್. ಧೋನಿ (MS Dhoni) ಕ್ರಿಕೆಟ್ ನಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಊಹಾಪೋಹಗಳು ಮನೆಮಾಡಿವೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly),  "ಏನಾಗುತ್ತದೆ ಎಂದು ನಾವು ನೋಡುತ್ತೇವೆ. ಅದಕ್ಕಾಗಿ ಇನ್ನೂ ಸಾಕಷ್ಟು ಸಮಯವಿದೆ. ಖಂಡಿತವಾಗಿ (ಕೆಲವೇ ತಿಂಗಳುಗಳಲ್ಲಿ) ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ" ಎಂದು ತಿಳಿಸಿದ್ದಾರೆ.

ಸೌರವ್ ಗಂಗೂಲಿ ಅವರ ಪ್ರತಿಕ್ರಿಯೆಗೂ ಮೊದಲೇ ಪ್ರತಿಕ್ರಿಯಿಸಿದ್ದ ಕೋಚ್ ರವಿಶಾಸ್ತ್ರಿ (Ravi Shastri) ತಾವು ಧೋನಿಯ ಭವಿಷ್ಯದ ಬಗ್ಗೆ ಊಹಿಸುವ ಮೊದಲು ಐಪಿಎಲ್‌ನ 12 ನೇ ಋತುವಿಗೆ ಕಾಯುತ್ತಿರುವುದಾಗಿ ಹೇಳಿಕೆ ನೀಡಿದ್ದರು. ಇದರ ನಂತರ, ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಧೋನಿ ಅವರನ್ನು ಈ ಬಗ್ಗೆ ಕೇಳಿದಾಗ, ಜನವರಿಯವರೆಗೆ ಇದರ ಬಗ್ಗೆ ಏನನ್ನೂ ಕೇಳಬಾರದು ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ನಲ್ಲಿ ಆಡಿದ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ ಸೋತ ನಂತರ ಧೋನಿ ತಂಡದಿಂದ ಹೊರಗುಳಿದಿದ್ದಾರೆ. ವಿಶ್ವಕಪ್ ಪಂದ್ಯದ ಬಳಿಕ ವಿರಾಮಕ್ಕೆ ಹೋದ ಧೋನಿ, ವೆಸ್ಟ್ ಇಂಡೀಸ್ ಪ್ರವಾಸ ಮತ್ತು ನಂತರ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧದ ತವರು ಸರಣಿಯನ್ನು ತಪ್ಪಿಸಿಕೊಂಡರು. ಅದೇ ಸಮಯದಲ್ಲಿ, ವಿಂಡೀಸ್ ತಂಡದ ಭಾರತ ಪ್ರವಾಸದಲ್ಲಿ ಆಯ್ಕೆಯಾದ ಏಕದಿನ-ಟಿ 20 ತಂಡದಲ್ಲಿ ಕೂಡ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿಲ್ಲ.