ಕೇವಲ 3 ಗಂಟೆಗಳಲ್ಲಿ ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದ 'ಪೃಥ್ವಿ ಶಾ'

18ರ ಹರೆಯದ ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಪದಾರ್ಪಣೆ ಮಾಡಿದ್ದು, ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಅಮೋಘ ಶತಕ ಸಿಡಿಸುವ ಮೂಲಕ ಸಾಧನೆ ಮಾಡಿದ್ದಾರೆ.

Last Updated : Oct 4, 2018, 04:21 PM IST
ಕೇವಲ 3 ಗಂಟೆಗಳಲ್ಲಿ ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದ 'ಪೃಥ್ವಿ ಶಾ' title=
Pic: IANS

ರಾಜ್‌ಕೋಟ್‌: ಅಂತರರಾಷ್ಟ್ರೀಯ ಮಟ್ಟದ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಪದಾರ್ಪಣೆ ಮಾಡಿರುವ ಪೃಥ್ವಿ ಶಾ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಪೃಥ್ವಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಕೇವಲ 3 ಗಂಟೆಗಳಲ್ಲಿ ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದಿದ್ದಾರೆ. ಇವುಗಳಲ್ಲಿ ಸಚಿನ್ ತಂಡೂಲ್ಕರ್ ರಂತಹ ದಿಗ್ಗಜರ ದಾಖಲೆಗಳೂ ಸೇರಿವೆ. 

ರಾಜ್‌ಕೋಟ್ನಲ್ಲಿ  ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ತಮ್ಮ ಚೊಚ್ಚಲ ಪಂದ್ಯದಲ್ಲಿ ಮುಂಬೈ ಬ್ಯಾಟ್ಸ್ಮನ್ 154 ಎಸೆತಗಳಲ್ಲಿ 134 ರನ್ ಗಳಿಸಿದರು. ಅವರು ಈಗಾಗಲೇ ಟೆಸ್ಟ್ ಶತಕವನ್ನು ದಾಖಲಿಸಿದ 15 ನೇ ಭಾರತೀಯರಾಗಿ ಹೊರಹೊಮ್ಮಿದ್ದಾರೆ. 

'ಪೃಥ್ವಿ ಶಾ' ಪ್ರಮುಖ ದಾಖಲೆಗಳು:
ಗುರುವಾರ ಬೆಳಿಗ್ಗೆ 09:30ಕ್ಕೆ ತನ್ನ ಟೆಸ್ಟ್ ವೃತ್ತಿ ಜೀವನವನ್ನು ಆರಂಭಿಸಿದ 'ಪೃಥ್ವಿ ಶಾ' ಒಂದೂವರೆ ಗಂಟೆಯೊಳಗೆ ಅರ್ಧಶತಕವನ್ನು ಪೂರ್ಣಗೊಳಿಸಿದರು. ವೆಸ್ಟ್‌ಇಂಡೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಪೃಥ್ವಿ 56 ಎಸೆತಗಳಲ್ಲಿ ಅರ್ಧಶತಕ ತಲುಪಿದ್ದರು. ಎರಡು ಗಂಟೆಗಳ ಆಟದ ಬಳಿಕ ಊಟದ ವಿರಾಮಕ್ಕಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಆ ಸಮಯದಲ್ಲಿ ಪೃಥ್ವಿ 75 ರನ್ ಗಳಿಸಿದ್ದರು. 40 ನಿಮಿಷಗಳ ವಿರಾಮದ ನಂತರ ಆಟವು ಪ್ರಾರಂಭವಾಯಿತು, ಆದರೆ ಮತ್ತೆ ಅದೇ ಲಯದಲ್ಲಿ ಕಾಣಿಸಿಕೊಂಡ ಪೃಥ್ವಿ ಮುಂದಿನ 45 ನಿಮಿಷಗಳಲ್ಲಿ ಶತಕ ಪೂರೈಸಿದರು. ಪೃಥ್ವಿ 99 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಡೆಬ್ಯು ಪಂದ್ಯದಲ್ಲೇ ಶತಕ ಬಾರಿಸಿದ 15ನೇ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪ್ರಥಮ ಟೆಸ್ಟ್ ಪಂದ್ಯಗಳಲ್ಲಿ ಕಿರಿಯ ವಯಸ್ಸಿನಲ್ಲಿ ಶತಕ:
ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ 'ಪೃಥ್ವಿ ಶಾ'. 18 ವರ್ಷ 329 ದಿನಗಳ ಪೃಥ್ವಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಆಟಗಾರರಲ್ಲಿ ನಾಲ್ಕನೇಯವರಾಗಿದ್ದಾರೆ. 

  • ಬಾಂಗ್ಲಾದೇಶದ ಮೊಹಮ್ಮದ್ ಅಶ್ರಫುಲ್ (17 ವರ್ಷ ಮತ್ತು 61 ದಿನಗಳು), 
  • ಜಿಂಬಾಬ್ವೆಯಿಂದ ಎಚ್. ಮಸಕಾಡ್ಜಾ (17 ವರ್ಷ 352 ದಿನಗಳು) ಮತ್ತು 
  • ಪಾಕಿಸ್ತಾನದ ಸಲೀಂ ಮಲಿಕ್ (18 ವರ್ಷ 323 ದಿನಗಳು) ಚಿಕ್ಕ ವಯಸ್ಸಿನಲ್ಲಿ ಶತಕ ಗಳಿಸಿರುವ ಇತರ ಆಟಗಾರರು.

ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಟೆಸ್ಟ್ ಕ್ರಿಕೆಟ್ ಚೊಚ್ಚಲ ಪಂದ್ಯಗಳಲ್ಲಿ ಶತಕ:
ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಟೆಸ್ಟ್ ಕ್ರಿಕೆಟ್ ಚೊಚ್ಚಲ ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲ ಕ್ರಿಕೆಟಿಗ ಪೃಥ್ವಿ ಶಾ. ಮೊದಲ ರಣಜಿ ಪಂದ್ಯದಲ್ಲಿ 120 ರನ್ಗಳನ್ನು ಮತ್ತು ಮೊದಲ ದುಲೀಪ್ ಟ್ರೋಫಿಯಲ್ಲಿ 154 ರನ್ ಗಳಿಸಿದರು. ಅದೇ ಸಮಯದಲ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ರಣಜಿ ಮತ್ತು ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಸಚಿನ್ ಶತಕ ಬಾರಿಸಿದರು, ಆದರೆ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಅವರು ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ.

ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮೂರನೇ ಅತಿ ವೇಗದ ಶತಕ:
ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅತಿ ವೇಗದ ಶತಕ ಸಿಡಿಸಿದ ಮೂರನೆಯ ವೇಗದ ಕ್ರಿಕೆಟಿಗ ಪೃಥ್ವಿ ಶಾ. ಇವರು 99 ಎಸೆತಗಳಲ್ಲಿ ಶತಕ ಸಿಡಿಸಿದರು. ಡೆಬ್ಯೂ ಟೆಸ್ಟ್ ಪಂದ್ಯದಲ್ಲಿ ವೇಗದ ಶತಕ ಗಳಿಸುವ ವಿಶ್ವ ದಾಖಲೆ ಶಿಖರ್ ಧವನ್ ಅವರದ್ದು. ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ 85 ಎಸೆತಗಳಲ್ಲಿ ಶತಕ ಗಳಿಸಿದರು. ಎರಡನೇ ಅತ್ಯಂತ ವೇಗದ ಶತಕವೆಂದರೆ ವೆಸ್ಟ್ ಇಂಡಿಯನ್ ಡ್ವೇನ್ ಸ್ಮಿತ್. ಅವರು ದಕ್ಷಿಣ ಆಫ್ರಿಕಾ ವಿರುದ್ಧ 93 ಎಸೆತಗಳಲ್ಲಿ ಶತಕ ಬಾರಿಸಿದರು.

ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ ಏಳನೇ ಆಟಗಾರ:
ಕಿರಿಯ ವಯಸ್ಸಿನ ಶತಕ ಸಿಡಿಸಿದವರಲ್ಲಿ ಪೃಥ್ವಿ ಏಳನೇ ಸ್ಥಾನದಲ್ಲಿದ್ದಾರೆ. ವಿಶ್ವ ದಾಖಲೆಯಲ್ಲಿ ಮೊಹಮ್ಮದ್ ಅಶರಫುಲ್ (17 ವರ್ಷ 61 ದಿನಗಳ) ಎಂದು ಹೆಸರು ಮೊದಲಿದೆ. ಮುಷಕ್ತಾ ಮೊಹಮ್ಮದ್ (17 ವರ್ಷ, 78 ದಿನಗಳು), ಸಚಿನ್ ತೆಂಡುಲ್ಕರ್ (17 ವರ್ಷ 107 ದಿನಗಳು), ಮಸಾಕಾಡ್ಜಾ (17 ವರ್ಷ 352 ದಿನಗಳು), ಸಲೀಂ ಮಲಿಕ್ (18 ವರ್ಷ 323 ದಿನಗಳು) ಮತ್ತು ಇಮ್ರಾನ್ ನಝೀರ್ (18 ವರ್ಷ 154 ದಿನಗಳು) ಇವರ ನಂತರದ ಸ್ಥಾನದಲ್ಲಿ ಪೃಥ್ವಿ ಸ್ಥಾನ ಪಡೆದಿದ್ದಾರೆ.
 

Trending News