)
Reason for R Ashwin Retirement Announcement: ಭಾರತದ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮಧ್ಯದಲ್ಲಿ ನಿವೃತ್ತಿ ಘೋಷಿಸಿದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ನಡೆದ ಸಂಭಾಷಣೆಯಲ್ಲಿ ಅಶ್ವಿನ್ ಈ ವಿಷಯವನ್ನು ತಿಳಿಸಿದ್ದಾರೆ. ವಿದೇಶಿ ಪ್ರವಾಸಗಳಲ್ಲಿ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವುದರ ಬಗ್ಗೆ ನನಗೆ ತುಂಬಾ ಬೇಸರವಾಯಿತು. ಇದು ನನ್ನ ಹಠಾತ್ ಅಂತರರಾಷ್ಟ್ರೀಯ ನಿವೃತ್ತಿಗೆ ಕಾರಣ ಎಂದು ಅಶ್ವಿನ್ ಹೇಳಿದ್ದಾರೆ.
ಅನಿಲ್ ಕುಂಬ್ಳೆ ನಂತರ 500 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಪಡೆದ ಎರಡನೇ ಭಾರತೀಯ ಬೌಲರ್ ಅಶ್ವಿನ್, ಕಳೆದ ಡಿಸೆಂಬರ್ನಲ್ಲಿ ಬ್ರಿಸ್ಬೇನ್ನಲ್ಲಿ ನಡೆದ ಮೂರನೇ ಟೆಸ್ಟ್ ನಂತರ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅಶ್ವಿನ್, ರಾಹುಲ್ ದ್ರಾವಿಡ್ಗೆ ಹೀಗೆ ಹೇಳಿದರು - "ನನಗೆ ವಯಸ್ಸಾಗಿದೆ, ಒಪ್ಪುತ್ತೇನೆ. ಆದರೆ ಮತ್ತೆ ಮತ್ತೆ ತಂಡದೊಂದಿಗೆ ಪ್ರವಾಸಕ್ಕೆ ಹೋದಾಗ ನನಗೆ ಅವಕಾಶ ಸಿಗದೆ ಹೆಚ್ಚಾಗಿ ಹೊರಗೆ ಕುಳಿತುಕೊಳ್ಳುವಂತಾಗುತ್ತಿತ್ತು"
"ತಂಡಕ್ಕೆ ಕೊಡುಗೆ ನೀಡಲು ನಾನು ಬಯಸಲಿಲ್ಲ ಎಂದಲ್ಲ, ಆದರೆ ನಂತರ ನೀವು ಮನೆಯಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವುದು ಉತ್ತಮವೇ ಎಂದು ಯೋಚಿಸಲು ಪ್ರಾರಂಭಿಸುತ್ತೀರಿ. ಅವರು ಕೂಡ ಬೆಳೆಯುತ್ತಿದ್ದಾರೆ. ನಾನು ಇಲ್ಲಿ ಕುಳಿತು ಏನು ಮಾಡುತ್ತಿದ್ದೇನೆ? ಎಂದು ಆಗ ನನಗೆ ಅನಿಸಿತು. ನಾನು 34-35 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕು ಎಂದು ನನ್ನ ಮನಸ್ಸಿನಲ್ಲಿ ಯಾವಾಗಲೂ ಇತ್ತು. ಆದರೆ ನಡುವೆ ನಿರಂತರವಾಗಿ ಆಡಲು ಸಾಧ್ಯವಾಗದ ಕಾರಣ, ನಾನು ನಿರ್ಧರಿಸಿದೆ" ಎಂದಿದ್ದಾರೆ.
ಅಶ್ವಿನ್ ನವೆಂಬರ್ 2011ರಲ್ಲಿ ತಮ್ಮ ಟೆಸ್ಟ್ಗೆ ಪಾದಾರ್ಪಣೆ ಮಾಡಿದರು. ಭಾರತದಲ್ಲಿ ಆಡಿದ 65 ಟೆಸ್ಟ್ಗಳಲ್ಲಿ 383 ವಿಕೆಟ್ಗಳನ್ನು ಮತ್ತು 40 ವಿದೇಶಿ ಟೆಸ್ಟ್ಗಳಲ್ಲಿ 150 ವಿಕೆಟ್ಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಅವರು ತಟಸ್ಥ ಸ್ಥಳದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ (ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ) 4 ವಿಕೆಟ್ಗಳನ್ನು ಕಬಳಿಸಿದರು.
ಸಂದರ್ಶನದಲ್ಲಿ ರೋಹಿತ್ ಶರ್ಮಾ ಬಗ್ಗೆ ದ್ರಾವಿಡ್, "ರೋಹಿತ್ ಶರ್ಮಾ ಅವರ ಶಾಂತತೆ, ತಂಡದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಮತ್ತು ಅವರ ಆಲೋಚನೆಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳುವುದು ಅವರಿಗೆ ಅತ್ಯಂತ ವಿಶೇಷವಾಗಿತ್ತು" ಎಂದಿದ್ದಾರೆ. ಅಂದಹಾಗೆ ಈ ಇಬ್ಬರ ಜೋಡಿಯನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ-ತರಬೇತುದಾರ ಜೋಡಿಗಳಲ್ಲಿ ಎಣಿಸಲಾಗಿದೆ.