)
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಅವರ ಪತಿ, ಸಹ ಬ್ಯಾಡ್ಮಿಂಟನ್ ಆಟಗಾರ ಪರುಪಲ್ಲಿ ಕಶ್ಯಪ್ ದಾಂಪತ್ಯ ಜೀವನದಲ್ಲಿ ಇತ್ತೀಚೆಗೆ ಉಂಟಾದ ಗೊಂದಲಗಳು ಇದೀಗ ಹೊಸ ತಿರುವು ಪಡೆದಿವೆ.
ಜುಲೈ 14, 2025 ರಂದು ದಂಪತಿಯು ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನದ ಘೋಷಣೆ ಮಾಡಿದ್ದು, ಕ್ರೀಡಾ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ, ಕೇವಲ 19 ದಿನಗಳ ನಂತರ, ಸೈನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದಿಗೆ ಪತಿಯೊಂದಿಗಿನ ಫೋಟೋ ಹಂಚಿಕೊಂಡು, "ಕೆಲವೊಮ್ಮೆ ದೂರವಾದಾಗಲೇ ಸಾಮೀಪ್ಯದ ಮೌಲ್ಯ ತಿಳಿಯುತ್ತದೆ. ಇಲ್ಲಿರುವೆವು - ಮತ್ತೆ ಪ್ರಯತ್ನಿಸುತ್ತಿದ್ದೇವೆ" ಎಂದು ಬರೆದಿದ್ದಾರೆ.
ಈ ಹೇಳಿಕೆಯು ಅವರ ವಿಚ್ಛೇದನದ ನಿರ್ಧಾರವನ್ನು ಹಿಂದಕ್ಕೆ ಪಡೆದು ಸಂಬಂಧವನ್ನು ಮರುಕಟ್ಟಲು ಪ್ರಯತ್ನಿಸುವ ಸೂಚನೆ ನೀಡಿದೆ.ಸೈನಾ ನೆಹ್ವಾಲ್, ವಿಶ್ವದ ನಂ.1 ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದವರು, 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದವರು. 2018ರಲ್ಲಿ ಪರುಪಲ್ಲಿ ಕಶ್ಯಪ್ ಅವರನ್ನು ವಿವಾಹವಾದ ನಂತರ, ಈ ಜೋಡಿಯು ಕ್ರೀಡಾ ಜಗತ್ತಿನಲ್ಲಿ ಆದರ್ಶ ದಂಪತಿಯಾಗಿ ಮೆರೆದಿದ್ದರು. ಆದರೆ, ಇತ್ತೀಚಿನ ವಿಚ್ಛೇದನದ ಘೋಷಣೆಯು ಅಭಿಮಾನಿಗಳಲ್ಲಿ ಆಘಾತ ಮೂಡಿಸಿತ್ತು.
Saina Nehwal & Parupalli Kashyap are back ?✨ pic.twitter.com/fsp6LNqu1c
— The Khel India (@TheKhelIndia) August 3, 2025
ಸೈನಾ ಮತ್ತು ಕಶ್ಯಪ್ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಒತ್ತಡಗಳನ್ನು ಎದುರಿಸಿದ್ದರಿಂದ, ವೈಯಕ್ತಿಕ ಜೀವನದಲ್ಲಿ ಸವಾಲುಗಳು ಎದುರಾಗಿರಬಹುದು ಎಂದು ಊಹಾಪೋಹಗಳು ಕೇಳಿಬಂದಿದ್ದವು.ಈಗ, ಸೈನಾಳ ಇತ್ತೀಚಿನ ಪೋಸ್ಟ್ ಸಂಬಂಧವನ್ನು ಉಳಿಸಿಕೊಳ್ಳುವ ಆಶಾದಾಯಕ ಸಂದೇಶವನ್ನು ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳು ಸೈನಾಳ ಈ ನಿರ್ಧಾರವನ್ನು ಸ್ವಾಗತಿಸಿವೆ. ಕೆಲವರು ಇದನ್ನು ದಾಂಪತ್ಯದಲ್ಲಿ ಎರಡನೇ ಅವಕಾಶದ ಪ್ರಯತ್ನವೆಂದು ಕರೆದರೆ, ಇನ್ನು ಕೆಲವರು ಇದು ಸೈನಾಳ ಧೈರ್ಯ ಮತ್ತು ಭಾವನಾತ್ಮಕ ಪರಿಪಕ್ವತೆಯ ಸಂಕೇತವೆಂದು ಶ್ಲಾಘಿಸಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ಸೈನಾ ನೆಹ್ವಾಲ್ರ ಸಾಧನೆಗಳು ದೇಶಕ್ಕೆ ಸ್ಫೂರ್ತಿಯಾಗಿವೆ. ಈಗ, ಅವರ ವೈಯಕ್ತಿಕ ಜೀವನದ ಈ ಧನಾತ್ಮಕ ಬದಲಾವಣೆಯು ಅವರ ಅಭಿಮಾನಿಗಳಿಗೆ ಆಶಾಕಿರಣವಾಗಿದೆ. ದಂಪತಿಯ ಈ ಹೊಸ ಆರಂಭವು ಯಶಸ್ವಿಯಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ