)
Team India injury update: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಪ್ರಸ್ತುತ ಆಸ್ಟ್ರೇಲಿಯಾದ ಸಿಡ್ನಿ ಆಸ್ಪತ್ರೆಯಲ್ಲಿ ಪಕ್ಕೆಲುಬಿನ (ಎಡ ಪಕ್ಕೆಲುಬು) ಗಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಗಾಯದ ಸ್ಥಿತಿಯನ್ನು ಇನ್ನೂ ಸಂಪೂರ್ಣವಾಗಿ ನಿರ್ಣಯಿಸಲಾಗಿಲ್ಲವಾದರೂ, ವೈದ್ಯರ ಆರಂಭಿಕ ವರದಿಗಳು ಅವರು ಮೈದಾನಕ್ಕೆ ಮರಳಲು ಕನಿಷ್ಠ ಕೆಲವು ವಾರಗಳು ತೆಗೆದುಕೊಳ್ಳಬಹುದು ಎಂದು ಸೂಚಿಸುತ್ತವೆ.
ಸಿಡ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಶ್ರೇಯಸ್ ಅಯ್ಯರ್ ಅವರನ್ನ ಪ್ರಸ್ತುತ ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅವರನ್ನ ಮೇಲ್ವಿಚಾರಣೆ ಮಾಡಲು ವಿಶೇಷ ವೈದ್ಯರನ್ನ ನೇಮಿಸಿದೆ. ಅವರೊಂದಿಗೆ ತಂಡದ ವೈದ್ಯರು ಮತ್ತು ಆಸ್ಟ್ರೇಲಿಯಾದಲ್ಲಿರುವ ಕೆಲವು ಸ್ನೇಹಿತರಿದ್ದಾರೆಂದು ತಿಳಿದುಬಂದಿದೆ. ಅವರು ಯಾವಾಗ ಭಾರತಕ್ಕೆ ಹಿಂತಿರುಗುತ್ತಾರೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಆದರೆ ಅವರು ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರುತ್ತಾರೆ. ಭಾರತವನ್ನ ತಲುಪಿದ ನಂತರ, ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಾಗಬಹುದು.
ಇದನ್ನೂ ಓದಿ: ಮಹಿಳಾ ವಿಶ್ವಕಪ್ನಲ್ಲಿ ಹರ್ಮನ್ ಪಡೆ ಕಮಾಲ್
ಅಯ್ಯರ್ ಗಾಯಕ್ಕೆ ಕಾರಣವೇನು?
ಮೂರನೇ ಏಕದಿನ ಪಂದ್ಯದಲ್ಲಿ ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ಅಲೆಕ್ಸ್ ಕ್ಯಾರಿ ಅವರ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಅಯ್ಯರ್ ಗಾಯಗೊಂಡರು. ಅವರು ಹಿಂದಕ್ಕೆ ಓಡಿ ಡೈವ್ ಮಾಡಿ ಅದ್ಭುತ ಕ್ಯಾಚ್ ಪಡೆದರು, ಆದರೆ ಆ ಕ್ಷಣದಲ್ಲಿ ಅವರ ಪಕ್ಕೆಲುಬಿನಲ್ಲಿ ತೀವ್ರ ನೋವು ಅನುಭವಿಸಿದರು. ಅವರನ್ನ ತಕ್ಷಣವೇ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಬಿಸಿಸಿಐ ಹೇಳಿಕೆಯ ಪ್ರಕಾರ, ʼಶ್ರೇಯಸ್ ಅಯ್ಯರ್ ಅವರ ಎಡ ಪಕ್ಕೆಲುಬಿಗೆ ಗಾಯವಾಗಿದೆ. ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾರೆʼ ಎಂದು ಹೇಳಿದೆ.
ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಚೇತರಿಕೆಯ ಸಾಧ್ಯತೆ
ಭಾರತ ತಂಡದ ಮುಂದಿನ ಏಕದಿನ ಪಂದ್ಯ ನವೆಂಬರ್ 30ರಂದು ನಡೆಯಲಿದೆ. ಅಂದರೆ ಇನ್ನೂ ಒಂದು ತಿಂಗಳು ಬಾಕಿ ಇದೆ. ವೈದ್ಯರ ಪ್ರಕಾರ, ಅಯ್ಯರ್ ಆ ಹೊತ್ತಿಗೆ ಫಿಟ್ ಆಗಿರುತ್ತಾರೆ ಮತ್ತು ತಂಡಕ್ಕೆ ಮರಳಲು ಸಾಧ್ಯವಾಗಲಿದೆ.
ಮತ್ತೊಬ್ಬ ಆಟಗಾರನಿಗೂ ಗಾಯ!
ಆಸ್ಟ್ರೇಲಿಯಾ ಪ್ರವಾಸದ ವೇಳೆ ಮತ್ತೊಬ್ಬ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಕೂಡ ಗಾಯಗೊಂಡಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಅವರಿಗೆ ಕ್ವಾಡ್ರೈಸ್ಪ್ಸ್ (ತೊಡೆಯ ಸ್ನಾಯು) ಗಾಯವಾಗಿತ್ತು. ಇದರಿಂದ ಅವರು ಮೂರನೇ ಏಕದಿನ ಪಂದ್ಯವನ್ನ ತಪ್ಪಿಸಿಕೊಂಡಿದ್ದರು. ಬಿಸಿಸಿಐ ಪ್ರಕಾರ, ʼಎರಡನೇ ಏಕದಿನ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರ ಎಡ ತೊಡೆಯ ಸ್ನಾಯುವಿಗೆ ಗಾಯವಾಗಿತ್ತು. ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡವು ಅವರ ಆರೋಗ್ಯ ಸ್ಥಿತಿಯನ್ನ ಪ್ರತಿದಿನವೂ ಮೇಲ್ವಿಚಾರಣೆ ಮಾಡುತ್ತಿದೆʼ ಎಂದು ಹೇಳಿದೆ. ನಿತೀಶ್ ಅವರ ಗಾಯವು ಗಂಭೀರವಾಗಿಲ್ಲ ಮತ್ತು ಅವರು ಟಿ20 ಸರಣಿಗೆ ಲಭ್ಯವಿರುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 29ರಂದು ಕ್ಯಾನ್ಬೆರಾದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ನಿತೀಶ್ ಆಡುವ ಸಾಧ್ಯತೆಯ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಮುಂದಿನ ಪಂದ್ಯಗಳಿಗೆ ಅವರು ಫಿಟ್ ಆಗುವ ಸಾಧ್ಯತೆಯಿದೆ ಎಂದು ತಂಡದ ಮೂಲಗಳು ತಿಳಿಸಿವೆ.