)
Tata Sierra car for women cricketers: 2025ರ ಮಹಿಳಾ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ಮೂಲಕ ಭಾರತೀಯ ಮಹಿಳಾ ತಂಡ ಇತಿಹಾಸ ಸೃಷ್ಟಿಸಿದೆ. ನವೆಂಬರ್ 2ರಂದು ನವಿ ಮುಂಬೈನ ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್ಗಳಿಂದ ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿತು. ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತೀಯ ತಂಡ ಈ ಐತಿಹಾಸಿಕ ಸಾಧನೆ ಮಾಡಿದೆ. ಇದಕ್ಕಾಗಿ ಅವರಿಗೆ 39.55 ಕೋಟಿ ರೂ. ಬಹುಮಾನ ನೀಡಲಾಯಿತು. ಇದರ ಜೊತೆಗೆ ಬಿಸಿಸಿಐ ಭಾರತೀಯ ಮಹಿಳಾ ತಂಡಕ್ಕೆ 51 ಕೋಟಿ ರೂ. ಪ್ರಶಸ್ತಿ ಘೋಷಿಸಿದೆ. ಈಗ ಭಾರತೀಯ ತಂಡದ ಮನೋಸ್ಥೈರ್ಯವನ್ನ ಹೆಚ್ಚಿಸಲು ಟಾಟಾ ಮೋಟಾರ್ಸ್ ಕೂಡ ಒಂದು ದೊಡ್ಡ ಘೋಷಣೆ ಮಾಡಿದೆ.
ಪ್ರತಿಯೊಬ್ಬ ಮಹಿಳಾ ಕ್ರೀಡಾಪಟುವಿಗೆ ಕಾರು ಗಿಫ್ಟ್
ಮಹಿಳಾ ವಿಶ್ವಕಪ್ ಗೆದ್ದ ನಂತರ ಭಾರತೀಯ ಮಹಿಳಾ ತಂಡಕ್ಕೆ ಉಡುಗೊರೆಗಳ ಸುರಿಮಳೆಯೇ ಹರಿದು ಬಂದಿದೆ. ಈ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ತನ್ನ ಮುಂಬರುವ ಟಾಟಾ ಸಿಯೆರಾ ಕಾರನ್ನ ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೂ ನೀಡುವುದಾಗಿ ಘೋಷಿಸಿದೆ. ಈ ಕಾರಿನ ಆರಂಭಿಕ ಬೆಲೆ 12.5 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ. ಭಾರತೀಯ ತಂಡವು ತನ್ನ ಅಸಾಧಾರಣ ಪ್ರದರ್ಶನ ಮತ್ತು ಅದ್ಭುತ ಗೆಲುವಿನಿಂದ ಇಡೀ ದೇಶವನ್ನೇ ಹೆಮ್ಮೆಪಡುವಂತೆ ಮಾಡಿದೆ ಎಂದು ಟಾಟಾ ಮೋಟಾರ್ಸ್ ಸಿಇಒ ಶೈಲೇಂದ್ರ ಚಂದ್ರ ಹೇಳಿದ್ದಾರೆ. ಮಹಿಳಾ ತಂಡದ ಸಾಧನೆಯು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುವ ದೃಢನಿಶ್ಚಯ ಮತ್ತು ಬೆಳವಣಿಗೆಯ ಶಕ್ತಿಯಾಗಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಸಿಯೆರಾವನ್ನ ಭಾರತೀಯ ತಂಡದ ಪ್ರತಿಯೊಬ್ಬ ಆಟಗಾರ್ತಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿಯಾದ ಟೀಂ ಇಂಡಿಯಾ
ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಎಲ್ಲಾ ಆಟಗಾರ್ತಿಯರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾದರು. ಈ ವೇಳೆ ಪ್ರಧಾನಿಯವರಿಗೆ 'ನಮೋ 1' ಹೆಸರಿನ ಜೆರ್ಸಿಯನ್ನ ಸಹ ಉಡುಗೊರೆಯಾಗಿ ನೀಡಿದರು. ಎಲ್ಲರೂ ಪ್ರಧಾನಿ ಮೋದಿಯವರೊಂದಿಗೆ ದೀರ್ಘ ಸಂಭಾಷಣೆ ನಡೆಸಿದರು. ಇದಲ್ಲದೆ ಭಾರತೀಯ ತಂಡಕ್ಕೆ ಬಿಸಿಸಿಐ 51 ಕೋಟಿ ರೂ. ಬಹುಮಾನದ ಹಣ ನೀಡಿದೆ. ಅದೇ ರೀತಿ ಅವರಿಗೆ ಐಸಿಸಿ 39.55 ಕೋಟಿ ರೂ. ಬಹುಮಾನದ ಹಣ ನೀಡಿದೆ. ಇದಲ್ಲದೆ ಭಾರತೀಯ ತಂಡದ ಪ್ರತಿಯೊಬ್ಬ ಆಟಗಾರರನ್ನ ಅನೇಕ ಸ್ಥಳಗಳಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗುತ್ತಿದೆ.
ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ಮಣಿಸಿದ ಭಾರತ
2025ರ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 52 ರನ್ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 298 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 45.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನ ಕಳೆದುಕೊಂಡು ಕೇವಲ 246 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ ತಂಡವು ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿಹಿಡಿದು ಐತಿಹಾಸಿಕ ಸಾಧನೆ ಮಾಡಿತು.