)
Washington Sundar Viral Video: ಇಂಗ್ಲೆಂಡ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಬಂದಿರುವ ಟೀಮ್ ಇಂಡಿಯಾದ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಕೌಂಟಿ ಚಾಂಪಿಯನ್ಶಿಪ್ಗೆ ತೆರಳುವ ಮೊದಲು ಕರ್ನಾಟಕದ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ಸುಂದರ ಕ್ಷಣದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸುಂದರ್ ನಂದಿ ಹಿಲ್ಸ್ನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡು ಮರುಳಾಗಿದ್ದಾರೆ. ಅಲ್ಲದೆ, ದಾರಿಯಲ್ಲಿ ಸಿಗುವ ಚಿಕ್ಕ ಅಂಗಡಿಯಲ್ಲಿ ಬೇಯಿಸಿದ ಜೋಳ ಖರೀದಿ ಮಾಡಿ ತಿನ್ನುವ ಮೂಲಕ ಗ್ರಾಮೀಣ ಸವಿನೆನಪಿಗೂ ಮುತ್ತಿಟ್ಟಿದ್ದಾರೆ.
ಜೋಳ ಬೇಯಿಸುತ್ತಿದ್ದ ಮಹಿಳೆಯ ಜೊತೆ ಮಾತನಾಡಿದ ಸುಂದರ್ – ‘ಅಕ್ಕಾ ಕ್ರಿಕೆಟ್ ನೋಡ್ತೀರಾ?’ ಎಂದು ಕೇಳಿದಾಗ, ಆ ಮಹಿಳೆ ‘ಇಲ್ಲ, ನಾನು ನೋಡುವುದಿಲ್ಲ’ ಎಂದು ಉತ್ತರಿಸಿದ ಹಾಸ್ಯಾಸ್ಪದ ಸಂಭಾಷಣೆಯೂ ಕ್ಯಾಮೆರಾಕ್ಕೆ ಸಿಕ್ಕಿದೆ.
ನಂದಿಹಿಲ್ಸ್ ಸೌಂದರ್ಯವನ್ನು ಮೆಚ್ಚಿಕೊಂಡ ಸುಂದರ್, ತಮ್ಮ ಸ್ನೇಹಿತ ಹಾಗೂ ಕನ್ನಡಿಗ ಆಟಗಾರ ಕೆಎಲ್ ರಾಹುಲ್ ಅವರನ್ನು ಸ್ಮರಿಸಿದ್ದಾರೆ. ‘ಬೆಂಗಳೂರು ಚೆನ್ನೈಗಿಂತ ಸುಂದರವಾಗಿದೆ ಎಂದು ರಾಹುಲ್ ಹೇಳಿದರೂ, ಆಗ ನಾನು ನಂಬಿರಲಿಲ್ಲ. ಆದರೆ ಈಗ ಬಂದು ನೋಡಿದ ಮೇಲೆ ನನಗೂ ಅನ್ನಿಸುತ್ತಿದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಂದರ್ ಅವರ ಈ ವೀಡಿಯೋದಲ್ಲೇ ಮತ್ತೊಂದು ವಿಶೇಷ – ರವಿಚಂದ್ರನ್ ಅಭಿನಯದ ಪ್ರೇಮಲೋಕ ಚಿತ್ರದ ಟೈಟಲ್ ಹಾಡು ಹಿನ್ನೆಲೆ ಸಂಗೀತವಾಗಿ ಕೇಳಿ ಹರಟೆ ವಾತಾವರಣವನ್ನು ಇನ್ನಷ್ಟು ಮನರಂಜನೀಯಗೊಳಿಸಿದೆ. ಈ ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...
ಕ್ರಿಕೆಟ್ ಸ್ಟಾರ್ ಸುಂದರ್ ಅವರ ನಂದಿಹಿಲ್ಸ್ ಪ್ರವಾಸ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಸರಳ ಜೀವನಶೈಲಿ ಮತ್ತು ನೆಚ್ಚಿನ ನುಡಿಗಳಿಗೆ ಮೆಚ್ಚುಗೆ ವ್ಯಕ್ತಪಡತ್ತಿದ್ದಾರೆ."