)
Ben Austin: ಚೆಂಡು ಬಡಿದು ಆಸ್ಟ್ರೇಲಿಯಾದ ಯುವ ಕ್ರಿಕೆಟಿಗನೊಬ್ಬ ಸಾವನ್ನಪ್ಪಿದ ಆಘಾತಕಾರಿ ಘಟನೆ ಆಸ್ಟ್ರೇಲಿಯಾದ ಮೆಲ್ಬರ್ನ್ಲ್ಲಿ ನಡೆದಿದೆ. ಮಂಗಳವಾರ ಮೆಲ್ಲೋರ್ನಲ್ಲಿ ನಡೆದ ಟಿ20 ಪಂದ್ಯಕ್ಕೂ ಮುನ್ನ ಹೆಲ್ಮಟ್ ಧರಿಸಿ ನೆಟ್ನಲ್ಲಿ ಸ್ವಯಂಚಾಲಿತ ಬೌಲಿಂಗ್ ಯಂತ್ರ (Automatic bowling machine)ವನ್ನ ಬಳಸಿಕೊಂಡು ಅಭ್ಯಾಸ ಮಾಡುತ್ತಿದ್ದಾಗ 17 ವರ್ಷದ ಬೆನ್ ಆಸ್ಟಿನ್ (Ben Austin) ತಲೆ ಮತ್ತು ಕುತ್ತಿಗೆಗೆ ಗಂಭೀರ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ.
ಆರಂಭದಲ್ಲಿ ಆಸ್ಟಿನ್ಗೆ ಗಾಯವಾಗುತ್ತಲೇ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ʼಆಸ್ಟಿನ್ ನಿಧನದಿಂದ ನಾವು ಸಂಪೂರ್ಣವಾಗಿ ದಿಗ್ಭ್ರಮೆಗೊಳಗಾಗಿದ್ದೇವೆ. ಅವರ ಸಾವಿನಿಂದ ಕ್ರಿಕೆಟ್ ಸಮುದಾಯದ ಎಲ್ಲರಿಗೂ ತುಂಬಾ ನೋವಾಗಿದೆ ಎಂದು ಫರ್ನ್ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್ ಹೇಳಿಕೆಯಲ್ಲಿ ತಿಳಿಸಿದೆ.
ಆಸ್ಟಿನ್ ಒಬ್ಬ ಪ್ರಭಾವಶಾಲಿ ಬೌಲರ್ ಮತ್ತು ಬ್ಯಾಟ್ಸ್ಮನ್ ಆಗಿದ್ದರು. ಅವರನ್ನ ಸ್ಟಾರ್ ಕ್ರಿಕೆಟಿಗ, ಮಹಾನ್ ನಾಯಕ ಮತ್ತು ಅದ್ಭುತ ಯುವಕ ಎಂದು ಕ್ರಿಕೆಟ್ ಕ್ಲಬ್ ಎಂದು ಹೇಳಿದೆ. ಕ್ರಿಕೆಟ್ ಅಭ್ಯಾಸ ಅಥವಾ ಪಂದ್ಯದ ವೇಳೆ ಆಟಗಾರರ ಸಾವು ಅತ್ಯಂತ ಅಪರೂಪ. ಇದಕ್ಕೂ ಮೊದಲು ಆಸ್ಟ್ರೇಲಿಯಾದಲ್ಲಿ ಅತ್ಯಂತ ಸುದ್ದಿಯಾದ ಆಟಗಾರನ ಸಾವು ಎಂದರೆ 2014ರಲ್ಲಿ ನಡೆದ ದೇಶೀಯ ಶೆಫೀಲ್ಡ್ ಶೀಲ್ಡ್ ಪಂದ್ಯದ ಸಮಯದಲ್ಲಿ ಟೆಸ್ಟ್ ತಾರೆ ಫಿಲಿಪ್ ಹ್ಯೂಸ್ ಅವರ ಸಾವು.
ಫಿಲಿಪ್ ಹ್ಯೂಸ್ ಕುತ್ತಿಗೆಗೆ ಚೆಂಡು ಬಡಿದ ಹಿನ್ನೆಲೆ ಸಾವನ್ನಪ್ಪಿದರು. ಹ್ಯೂಸ್ ಅವರ ಸಾವು ಆಸ್ಟ್ರೇಲಿಯಾ ಮತ್ತು ವಿಶ್ವ ಕ್ರಿಕೆಟ್ ಸಮುದಾಯವನ್ನೇ ದಿಗ್ಭ್ರಮೆಗೊಳಿಸಿತ್ತು. ಆ ಘಟನೆಯ ಬಳಿಕ ಆಟದಲ್ಲಿ ಕಟ್ಟುನಿಟ್ಟಿನ ಪ್ರೋಟೋಕಾಲ್ಗಳನ್ನ ಜಾರಿಗೆ ತರಲಾಗಿತ್ತು. ಪಂದ್ಯದ ವೇಳೆ ಆಟಗಾರರು ಸುರಕ್ಷತಾ ಸಾಧನಗಳನ್ನ ಬಳಸುವಂತೆ ಸೂಚಿಸಲಾಗಿತ್ತು.