)
ಸೈಯದ್ ಮುಷ್ತಾಕ್ ಅಲಿ T20 ಟ್ರೋಫಿಯಲ್ಲಿ ಯಂಗ್ ಬ್ಯಾಟರ್ಸ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದು ಶತಕದ ಬಳಿಕ ಶತಕ ಮೂಡಿ ಬರುತ್ತಿವೆ. ಬೆಳಗ್ಗೆ ಅಷ್ಟೇ ಕನ್ನಡಿಗ ದೇವದತ್ ಪಡಿಕಲ್ ಹಂಡ್ರೆಡ್ ಮಾಡಿದ್ದರು. ಇದರ ಬೆನ್ನಲ್ಲೇ ಮಹಾರಾಷ್ಟ್ರ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ 14 ವರ್ಷದ ವೈಭವ್ ಸೂರ್ಯವಂಶಿ ಶತಕ ಗಳಿಸಿ ಸಂಭ್ರಮಿಸಿದ್ದಾರೆ.
ಕೇವಲ 14 ವರ್ಷಕ್ಕೆ ಸನ್ಷೆಷನ್ ಮೂಡಿಸಿರುವ ವೈಭವ್ ಸೂರ್ಯವಂಶಿ ಮಹಾರಾಷ್ಟ್ರ ವಿರುದ್ಧ ನಡೆದ ಸೈಯದ್ ಮುಷ್ತಾಕ್ ಅಲಿ T20 ಪಂದ್ಯದಲ್ಲಿ ಶತಕ ಗಳಿಸಿದ್ದಾರೆ. ಪಂದ್ಯದಲ್ಲಿ ಬಿಹಾರ ಪರವಾಗಿ ಬ್ಯಾಟ್ ಬೀಸಿದ ವೈಭವ್ ಸೂರ್ಯವಂಶಿ, ಕೇವಲ 58 ಎಸೆತಗಳಲ್ಲಿ ಅಮೋಘವಾದ 7 ಪೋರ್ ಹಾಗೂ ಭರ್ಜರಿಯಾದ 7 ಸಿಕ್ಸರ್ಗಳಿಂದ ಶತಕ ಗಳಿಸಿದರು. ಸೂರ್ಯವಂಶಿ ಲೆಫ್ಟ್-ರೈಟ್ ಎಂದು ಬಾರಿಸಿದ ಬೌಂಡರಿ, ಸಿಕ್ಸರ್ಗಳಿಂದ ಚೆಂಡು ಕೋಲ್ಕತ್ತಾದ ಈಡನ್ ಗಾರ್ಡನ್ನ ಮೂಲೆ ಮೂಲೆಗೂ ಕಳಿಸಿದರು. ಪಂದ್ಯದಲ್ಲಿ ಒಟ್ಟು 61 ಬಾಲ್ಗಳನ್ನು ಆಡಿದ ಸೂರ್ಯವಂಶಿ 108 ರನ್ ಗಳಿಸಿ ಅಜೇಯರಾಗಿ ಉಳಿದರು.
ವೈಭವ್ ಸೂರ್ಯವಂಶಿ ಕೇವಲ 14 ವರ್ಷಗಳಲ್ಲೇ T20ಯಲ್ಲಿ ಒಟ್ಟು ಮೂರು ಸೆಂಚುರಿಗಳನ್ನು ಬಾರಿಸಿರುವುದು ಐತಿಹಾಸಿಕ ದಾಖಲೆ ಆಗಿದೆ. ಸೈಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನ್ನುವ ಹೆಗ್ಗಳಿಕೆಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025 ಟೂರ್ನ್ಮೆಂಟ್ನಲ್ಲಿ ಯುಎಇ ವಿರುದ್ಧ ಹೊಡಿಬಡಿ ಬ್ಯಾಟಿಂಗ್ ಮಾಡಿ ಕೇವಲ 42 ಬಾಲ್ಗಳಲ್ಲಿ 144 ಚಚ್ಚಿದ್ದರು.
ಇದು ಮುಗಿದು ಇನ್ನು ಒಂದು ತಿಂಗಳು ಕಳೆದಿಲ್ಲ ಇದೀಗ ಮಹಾರಾಷ್ಟ್ರದ ವಿರುದ್ಧ ಮತ್ತೊಂದು ಸೆಂಚುರಿ ಬಾರಿಸಿದ್ದಾರೆ. 2025ರ ಐಪಿಎಲ್ನಲ್ಲಿ ರಾಜಸ್ತಾನ್ ಪರ ಬ್ಯಾಟಿಂಗ್ ಮಾಡಿದ್ದ ವೈಭವ್ ಸೂರ್ಯವಂಶಿ, ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಬಾಲ್ಗೆ ಶತಕ ಸಿಡಿಸಿದ್ದರು. ಇದು ಐಪಿಎಲ್ನಲ್ಲಿ ಅತ್ಯಂತ ಕಿರಿಯ ಬ್ಯಾಟರ್, ಅತಿ ವೇಗವಾಗಿ ಶತಕ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇನ್ನು ಇಂದಿನ ಪಂದ್ಯದಲ್ಲಿ ವೈಭವ್ ಶತಕ ಸಿಡಿಸಿದರೂ ಮಹಾರಾಷ್ಟ್ರ ವಿರುದ್ಧ ಬಿಹಾರ ಸೋತು ನಿರಾಸೆ ಅನುಭವಿಸಿತು.