)
ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಪ್ರತಿ ಟೂರ್ನಿಯಲ್ಲೂ ಶತಕಗಳನ್ನು ದಾಖಲೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶತಕ ಬಾರಿಸಿದ್ದರು. ಇದರ ಬೆನ್ನಲ್ಲೇ ಇದೀಗ ಯುಎಇ ವಿರುದ್ಧ ನಡೆಯುತ್ತಿರುವ ಅಂಡರ್-19 ಏಷ್ಯಾ ಕಪ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಬರೋಬ್ಬರಿ 171 ರನ್ಗಳನ್ನು ಬಾರಿಸಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾ ಕಪ್ 50 ಓವರ್ಗಳ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡದ ಕ್ಯಾಪ್ಟನ್ ಫೀಲ್ಡಿಂಗ್ ಆಯ್ಕೆ ಮಾಡಿದರು. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡೋ ಅವಕಾಶ ಪಡೆಯಿತು. ತಂಡದ ಪರವಾಗಿ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಒಳ್ಳೆಯ ಆರಂಭ ಪಡೆಯಲಿಲ್ಲ. ಏಕೆಂದರೆ ಆಯುಷ್ ಕೇವಲ 4 ರನ್ಗೆ ವಿಕೆಟ್ ಒಪ್ಪಿಸಿದರು.
ಆಯುಷ್ ಬಳಿಕ ಕ್ರೀಸ್ಗೆ ಬಂದ ಆರನ್ ಜಾರ್ಜ್, ಸೂರ್ಯವಂಶಿಗೆ ಒಳ್ಳೆಯ ಜೋಡಿಯಾದರು. ಈ ಇಬ್ಬರ ಪಾರ್ಟನರ್ಶಿಪ್ನಲ್ಲಿ ಯುವ ಭಾರತ ತಂಡಕ್ಕೆ ಒಟ್ಟು 220 ರನ್ಗಳು ಹರಿದು ಬಂದವು. ಈ ವೇಳೆ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ ಯುಎಇ ಬೌಲರ್ಗಳ ಬಿಸಿ ಮುಟ್ಟಿಸಿದರು. ವೈಭವ್ ಕ್ರೀಸ್ನಲ್ಲಿ ಇರೋವರಿಗೆ ಒಳ್ಳೆ ಟಿ20 ಮ್ಯಾಚ್ ನೋಡಿದಾಗೆ ಇತ್ತು. ಪ್ರತಿ ಬಾಲ್ ಅನ್ನು ಟಾರ್ಗೆಟ್ ಮಾಡುತ್ತಿದ್ದ ವೈಭವ್ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದರು.
ಮೊದಲ ಪಂದ್ಯದಲ್ಲೇ ಎದುರಾಳಿ ಬೌಲರ್ಗಳನ್ನ ಚಚ್ಚಿದ ಸೂರ್ಯವಂಶಿ ಕೇವಲ 56 ಬಾಲ್ಗಳಲ್ಲಿ 5 ಬೌಂಡರಿ ಹಾಗೂ 12 ಆಕಾಶದೆತ್ತರದ ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಸೆಂಚುರಿ ಸಿಡಿಸಿದರು. ಹಂಡ್ರೆಡ್ ಆದ ಮೇಲೂ ಬ್ಯಾಟಿಂಗ್ ಮುಂದುವರೆಸಿದ ಯಂಗ್ ಬ್ಯಾಟರ್ 95 ಎಸೆತಗಳಲ್ಲಿ 9 ಬೌಂಡರಿ ಹಾಗೂ 14 ಸಿಕ್ಸರ್ಗಳಿಂದ ಒಟ್ಟು 171 ರನ್ ಸಿಡಿಸಿದರು. ಇನ್ನು ಓವರ್ಗಳು ಇದ್ದರೂ ದ್ವಿಶತಕ ಮಾಡಿಕೊಳ್ಳಬಹುದಿತ್ತು.
ಆದರೆ ಈ ನಡುವೆ ಸೂರಿ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದ 14 ವರ್ಷದ ಸೂರ್ಯವಂಶಿ ನಿರಾಸೆಯಿಂದ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. ಸದ್ಯ ಅಂಡರ್-19 ಭಾರತ ತಂಡ 3 ವಿಕೆಟ್ಗೆ 277 ರನ್ ಗಳಿಂದ ಬ್ಯಾಟಿಂಗ್ ಮುಂದುವರೆಸಿದೆ. ಐಪಿಎಲ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿ, ರೈಸಿಂಗ್ ಸ್ಟಾರ್ ಏಷ್ಯಾ ಕಪ್, ಈಗ ಅಂಡರ್-19 ಏಷ್ಯಾ ಕಪ್ನ ಆರಂಭದ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ.