)
ದಕ್ಷಿಣ ಆಫ್ರಿಕಾ ಜೊತೆ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಸೆಂಚುರಿ ಸಿಡಿಸಿದ್ದಾರೆ. ರಾಂಚಿ ಮೈದಾನದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದ ವಿರಾಟ್, ರಾಯ್ಪುರದಲ್ಲಿ ಅಮೋಘವಾದ ಹಂಡ್ರೆಡ್ ರನ್ ಗಳಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಎರಡು ಸೆಂಚುರಿಗಳು ಸೇರಿದಂತೆ ಒಟ್ಟು ಎಷ್ಟು ಶತಕಗಳನ್ನು ವಿರಾಟ್ ಕೊಹ್ಲಿ ಗಳಿಸಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ರಾಯ್ಪುರದ ಮೈದಾನದಲ್ಲಿ ನಡೆದ ಆಫ್ರಿಕಾ ವಿರುದ್ಧದ ಎರಡನೇ ಮ್ಯಾಚ್ನಲ್ಲಿ ತಾಳ್ಮೆಯ ಬ್ಯಾಟಿಂಗ್ ಮಾಡಿದ ಕಿಂಗ್ ಕೊಹ್ಲಿ, ಭಾರತ ತಂಡಕ್ಕೆ ರನ್ಗಳ ಕೊಡುಗೆ ನೀಡಿದರು. ಜೊತೆಗೆ ಗ್ಯಾಲರಿಯಲ್ಲಿ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ನೀಡಿದರು. ಪಂದ್ಯದಲ್ಲಿ ಒಟ್ಟು 93 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ, 7 ಸೊಗಸಾದ ಫೋರ್ ಹಾಗೂ ಎರಡು ಬಿಗ್ ಸಿಕ್ಸರ್ಗಳಿಂದ 102 ರನ್ ಗಳಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ಸರಣಿಯಲ್ಲಿ ಇದು ಕೊಹ್ಲಿಯ ಎರಡನೇ ಸೆಂಚುರಿಯಾಗಿದ್ದು ಇನ್ನೊಂದು ಪಂದ್ಯ ಬಾಕಿ ಇದೆ.
ಕೊಹ್ಲಿಯ ಒಟ್ಟು ಶತಕಗಳ ಪಟ್ಟಿಯ ಬಗ್ಗೆ ಹೇಳುವುದಾದರೆ, 307 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, 295 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 14,492 ರನ್ಗಳನ್ನು ಗಳಿಸಿದ್ದಾರೆ. ವೈಯಕ್ತಿಕ ಅತ್ಯಧಿಕ ರನ್ ಎಂದರೆ 183 ರನ್ ಆಗಿವೆ. ಅಂದರೆ ಕೊಹ್ಲಿ ಇದುವರೆಗೂ ದ್ವಿಶತಕವನ್ನು ಗಳಿಸಿಲ್ಲ. 1,350 ಫೋರ್ಗಳು ಹಾಗೂ 162 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಇನ್ನು ಒಡಿಐನಲ್ಲಿ ಒಟ್ಟು 75 ಅರ್ಧಶತಕಗಳನ್ನು ಗಳಿಸಿದ್ರೆ 53 ಶತಕಗಳನ್ನು ಬಾರಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಒಡಿಐ ಶತಕಗಳನ್ನು ಗಳಿಸಿದವರ ಪೈಕಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿ ಇದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆದರೂ ಟೆಸ್ಟ್ನಲ್ಲಿನ ಸಾಧನೆಗಳ ಬಗ್ಗೆ ನೋಡುವುದಾದರೆ, 123 ಟೆಸ್ಟ್ನಲ್ಲಿ 210 ಇನ್ನಿಂಗ್ಸ್ಗಳನ್ನು ಆಡಿರುವ ಅವರು, 9230 ರನ್ ಗಳಿಸಿದ್ದಾರೆ. 254 ರನ್ ಬಾರಿಸಿರುವುದು ಕೊಹ್ಲಿಯ ವೈಯಕ್ತಿಕ ಅತ್ಯಧಿಕ ರನ್ ಆಗಿವೆ. 1027 ಫೋರ್ಗಳನ್ನು ಹೊಡೆದಿದ್ದು 30 ಸಿಕ್ಸರ್ಗಳನ್ನು ಬಾರಿಸಿದ್ದಾರೆ. 31 ಅರ್ಧಶತಕ ಹಾಗೂ 30 ಸೆಂಚುರಿಗಳನ್ನ ದಾಖಲು ಮಾಡಿದ್ದಾರೆ. ಜೊತೆಗೆ ಏಳು ದ್ವಿಶತಕಗಳು ಟೆಸ್ಟ್ನಲ್ಲಿ ಮೂಡಿ ಬಂದಿವೆ.
ಟಿ20 ಅಲ್ಲೂ ಮಹತ್ತರ ಬ್ಯಾಟಿಂಗ್ ಮಾಡಿರುವ ವಿರಾಟ್ ಕೊಹ್ಲಿ, 125 ಪಂದ್ಯಗಳಲ್ಲಿ 117 ಇನ್ನಿಂಗ್ಸ್ನಲ್ಲಿ ಆಡಿದ್ದಾರೆ. 4188 ರನ್ ಗಳಿಸಿದ್ದು 122 ರನ್ ಬಾರಿಸಿರುವುದು ಟಿ20ಯಲ್ಲಿ ಅತ್ಯಧಿಕ ರನ್ ಆಗಿವೆ. 369 ಬೌಂಡರಿಗಳನ್ನು ಗಳಿಸಿದ್ದು 124 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. 38 ಹಾಫ್ಸೆಂಚುರಿಗಳು ಇದ್ದು 1 ಸೆಂಚುರಿನ ಬಾರಿಸಿದ್ದಾರೆ. ಈ ಮೂರು ಫಾರ್ಮೆಟ್ಗಳು ಸೇರಿದಂತೆ ವಿರಾಟ್ ಕೊಹ್ಲಿ ಅವರು ಒಟ್ಟು 144 ಅರ್ಧಶತಕಗಳು ಹಾಗೂ 84 ಸೆಂಚುರಿಗಳನ್ನು ಬಾರಿಸಿದ್ದಾರೆ. ಇದರಲ್ಲಿ ಎಂಟು ಐಪಿಎಲ್ ಸೆಂಚುರಿಗಳು ಸೇರಿಸಿದರೆ ಒಟ್ಟು 92 ಸೆಂಚುರಿಗಳನ್ನು ಗಳಿಸಿದ್ದಾರೆ.