)
Dope Test: ಐಪಿಎಲ್ 2026 ಬಹುದೊಡ್ಡ ವಿವಾದಕ್ಕೆ ಸಾಕ್ಷಿಯಾಗಿದೆ. ಈ ಘಟನೆ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಇದರ ಮಧ್ಯೆ ಮತ್ತೆ ಡೋಪಿಂಗ್ ವಿವಾದ ಭುಗಿಲೆದ್ದಿದ್ದು, ಇಬ್ಬರು ಸ್ಟಾರ್ ಕ್ರಿಕೆಟಿಗರಿಗೆ ನೋಟಿಸ್ ಜಾರಿ ಮಾಡಿರುವುದು ಈಗ ಪ್ರಮುಖ ಚರ್ಚಾಸ್ಪದ ವಿಷಯವಾಗಿದೆ. ಕಳೆದ ವರ್ಷ ಡೋಪಿಂಗ್ ಪರೀಕ್ಷೆಗಳಿಗೆ ಹಾಜರಾಗಲು ವಿಫಲವಾದ ಕಾರಣ ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಮಹಿಳಾ ಕ್ರಿಕೆಟರ್ ಶಫಾಲಿ ವರ್ಮಾ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಜೈಸ್ವಾಲ್ ಮತ್ತು ಶಫಾಲಿ ಇಬ್ಬರೂ ಡೋಪಿಂಗ್ ಪರೀಕ್ಷೆಗಳಿಗೆ ಒಳಗಾಗಲು ವಿಫಲರಾಗಿರುವುದನ್ನು ನಾಡಾ ಗಂಭೀರವಾಗಿ ಪರಿಗಣಿಸಿದೆ. ಪರೀಕ್ಷೆಗಳಿಗೆ ಹಾಜರಾಗಲು ವಿಫಲರಾಗಿರುವುದು ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಿ, ನಾಡಾ ತನ್ನ ಅಸಮಾಧಾನ ವ್ಯಕ್ತಪಡಿಸಿ ನೋಟಿಸ್ ನೀಡಿದೆ.
ಭಾರತೀಯ ಕ್ರಿಕೆಟ್ನ ಉದಯೋನ್ಮುಖ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ದೀಪನ ಮದ್ದು ಸೇವನೆ ತಡೆ ಘಟಕದ (NADA) ಅಧಿಕಾರಿಗಳು ನಡೆಸುವ ಡೋಪಿಂಗ್ ಪರೀಕ್ಷೆಗೆ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ಗೈರಾಗಿರುವ ಕಾರಣ, ಈ ಇಬ್ಬರಿಗೆ ನಾಡಾ ನೋಟಿಸ್ ಜಾರಿ ಮಾಡಿದ್ದು, ಉತ್ತರಿಸಲು 7 ದಿನಗಳ ಗಡುವು ಕೊಟ್ಟಿದೆ. ನಾಡಾ ನಿಯಮಗಳ ಪ್ರಕಾರ, 'ನೋಂದಾಯಿತ ಪರೀಕ್ಷಾ ಪೂಲ್' (ಆರ್ಟಿಪಿ) ಯಲ್ಲಿ ಸೇರಿಸಲಾದ ಆಟಗಾರರು ತಮ್ಮ ಭಾಗವಹಿಸುವಿಕೆಯ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
ವರದಿಗಳ ಪ್ರಕಾರ, ಡಿಸೆಂಬರ್ 17, 2025 ರಂದು ಡೋಪ್ ಕಂಟ್ರೋಲ್ ಅಧಿಕಾರಿಗಳು (DCO ಗಳು) ಮಾದರಿಗಳನ್ನು ಸಂಗ್ರಹಿಸಲು ಬಂದಾಗ ಯಶಸ್ವಿ ಜೈಸ್ವಾಲ್ ಅವರು ನೀಡಿದ ವಿಳಾಸದಲ್ಲಿ ಇರಲಿಲ್ಲ. ಇದೇ ರೀತಿ ನವೆಂಬರ್ 7, 2025 ರಂದು ಶಫಾಲಿ ವರ್ಮಾ ಅವರ ಮಾದರಿಯನ್ನು ಸಂಗ್ರಹಿಸಲು ಅಧಿಕಾರಿಗಳು ಬಂದಾಗ ಅವರೂ ಸಹ ಲಭ್ಯವಿರಲಿಲ್ಲ. ಪರಿಣಾಮವಾಗಿ ಈ ಘಟನೆಗಳ ಕುರಿತು ವಿವರಣೆಯನ್ನು ಕೋರಿ NADA ಇಬ್ಬರೂ ಆಟಗಾರರಿಗೆ ನೋಟಿಸ್ ಕಳುಹಿಸಿತು. ಆದರೆ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ಅವರಿಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
BCCI ಈ ಬೆಳವಣಿಗೆಗಳನ್ನು ಸಹ ದೃಢಪಡಿಸಿದೆ. ಈ ಪರೀಕ್ಷೆಗೆ ಅವರು ಏಕೆ ಗೈರುಹಾಜರಾಗಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಲು ಆಟಗಾರರೊಂದಿಗೆ ಮಾತನಾಡುವುದಾಗಿ ಅದು ಹೇಳಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಈಗ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ಇಬ್ಬರಿಗೂ ಡೋಪಿಂಗ್ ಪರೀಕ್ಷೆಗಳಿಗೆ ಹಾಜರಾಗಲು ಏಕೆ ವಿಫಲರಾಗಿದ್ದಾರೆ ಎಂಬುದಕ್ಕೆ ವಿವರಣೆ ನೀಡಲು ಏಳು ದಿನಗಳ ಕಾಲಾವಕಾಶ ನೀಡಿ ನೋಡಿಸ್ ಜಾರಿ ಮಾಡಲಾಗಿದೆ.
ಡೋಪಿಂಗ್ ಪರೀಕ್ಷೆಗೆ ಗೈರು ಹಾಜರಾಗುವುದರ ಪರಿಣಾಮ ಏನು?
ಬಿಸಿಸಿಐ ಮತ್ತು ಐಸಿಸಿ ಎರಡೂ ಕಠಿಣ ಡೋಪಿಂಗ್ ವಿರೋಧಿ ನಿಯಮಗಳನ್ನು ಜಾರಿ ಮಾಡಿವೆ. ಇದಲ್ಲದೆ NADA ನಿಯಮಗಳಿಗೆ ಅನುಸಾರವಾಗಿ ಕ್ರೀಡಾಪಟುಗಳು ತಮ್ಮ ಸ್ಥಳದ ಮಾಹಿತಿಯನ್ನು ಏಜೆನ್ಸಿಯೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ನಿಗದಿತ ಸಮಯದಲ್ಲಿ ಪರೀಕ್ಷೆಗೆ ಲಭ್ಯವಿರಬೇಕು. ಒಬ್ಬ ಕ್ರೀಡಾಪಟು ಸತತ ಮೂರು ಬಾರಿ ಪರೀಕ್ಷೆಗೆ ಹಾಜರಾಗಲು ವಿಫಲವಾದರೆ ಅದನ್ನು ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಉಲ್ಲಂಘನೆಯು ನಿಷೇಧಕ್ಕೆ ಕಾರಣವಾಗಬಹುದು. 2019 ರಲ್ಲಿ ಹಿಂದಿನ ಪ್ರಕರಣವೊಂದರಲ್ಲಿ ಪೃಥ್ವಿ ಶಾ ನಿಷೇಧಿತ ವಸ್ತುವನ್ನು ಹೊಂದಿರುವ ಕೆಮ್ಮಿನ ಸಿರಪ್ ಅನ್ನು ಅಜಾಗರೂಕತೆಯಿಂದ ಸೇವಿಸಿದ ನಂತರ ನಾಡಾ ಎಂಟು ತಿಂಗಳ ನಿಷೇಧವನ್ನು ವಿಧಿಸಿತು.
ವಾಡಾ (WADA) ಮತ್ತು ನಾಡಾ (NADA) ನಿಯಮಗಳ ಪ್ರಕಾರ, ಯಾವುದೇ ಕ್ರೀಡಾಪಟು 12 ತಿಂಗಳ ಅವಧಿಯಲ್ಲಿ ಸತತ ಮೂರು ಬಾರಿ ಡೋಪಿಂಗ್ ಪರೀಕ್ಷೆಗೆ ಗೈರಾದರೆ ಅದನ್ನು ಉದ್ದೀಪನ ಮದ್ದು ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಆಟಗಾರರಿಗೆ 2 ವರ್ಷಗಳವರೆಗೆ ನಿಷೇಧ ಹೇರುವ ಸಾಧ್ಯತೆ ಕೂಡ ನಿಯಮದಲ್ಲಿದೆ.
ನಾಡಾ (NADA) ಎಂದರೆ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆ (National Anti-Doping Agency) ಆಗಿದೆ. ಇದು ಭಾರತ ಸರ್ಕಾರ ಸ್ಥಾಪಿಸಿದ ಒಂದು ಸ್ವಾಯತ್ತ ಸಂಸ್ಥೆ. ಕ್ರೀಡಾಪಟುಗಳು ಯಾವುದೇ ನಿಷೇಧಿತ ಮದ್ದುಗಳನ್ನು ಬಳಸದಂತೆ ತಡೆಯುವುದು ನಾಡಾ ಮುಖ್ಯ ಉದ್ದೇಶವಾಗಿದೆ.
ನಾಡಾ ಕುರಿತ ಮುಖ್ಯ ಅಂಶಗಳು:
ಕ್ರೀಡಾಪಟುಗಳ ರಕ್ತ ಮತ್ತು ಮೂತ್ರದ ಮಾದರಿ ಸಂಗ್ರಹಿಸಿ ಡೋಪಿಂಗ್ ಪರೀಕ್ಷೆ ಮಾಡುವುದು.
ವಿಶ್ವ ಉದ್ದೀಪನ ಮದ್ದು ವಿರೋಧಿ ಸಂಸ್ಥೆ (WADA) ಹಾಕಿಕೊಟ್ಟ ನಿಯಮಗಳನ್ನು ಭಾರತದಲ್ಲಿ ಜಾರಿಗೆ ತರುವುದು ಇದರ ಮುಖ್ಯ ಉದ್ದೇಶ.
ಉದ್ದೀಪನ ಮದ್ದುಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಕ್ರೀಡಾಪಟುಗಳಿಗೆ ಜಾಗೃತಿ ನೀಡುವುದು.
ವೇರ್ ಎಬೌಟ್ಸ್ (Whereabouts) ನಿಯಮವನ್ನು ಜಾರಿಗೊಳಿಸುವುದು. ಅಂದರೆ ಪ್ರಮುಖ ಕ್ರೀಡಾಪಟುಗಳು ತಾವು ಎಲ್ಲಿದ್ದೇವೆ ಎಂಬ ಮಾಹಿತಿಯನ್ನು ಪ್ರತಿದಿನ ನಾಡಾ ಗೆ ತಪ್ಪದೇ ನೀಡಲೇ ಬೇಕಾಗುತ್ತದೆ. ಪರೀಕ್ಷೆಗಾಗಿ ಅಧಿಕಾರಿಗಳು ಬಂದಾಗ ಆ ಸ್ಥಳದಲ್ಲಿ ಇಲ್ಲದಿದ್ದರೆ ಅದನ್ನು ‘ಮಿಸ್ಡ್ ಟೆಸ್ಟ್’ (Missed Test) ಎಂದು ನಾಡಾ ಪರಿಗಣಿಸಲಾಗುತ್ತದೆ.
ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಅಥವಾ ನಿಯಮ ಉಲ್ಲಂಘಿಸಿದ ಆಟಗಾರರಿಗೆ ಆಟದಿಂದ ನಿಷೇಧ ಹೇರುವ ಅಧಿಕಾರ ಈ ಸಂಸ್ಥೆಗಿದೆ.