)
Amit Shah Zoho ID: ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸ್ವದೇಶಿ ಸಾಫ್ಟ್ವೇರ್ ಸೂಟ್ ʼಜೊಹೊʼಗೆ ತಮ್ಮ ಮೇಲ್ ಐಡಿಯನ್ನು ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಅಮೆರಿಕದ ಸುಂಕದ ಒತ್ತಡಕ್ಕೆ ಮತ್ತು ಯುಎಸ್ ಅಧ್ಯಕ್ಷ ಟ್ರಂಪ್ ದುರಹಂಕಾರಕ್ಕೆ ಬಹುದೊಡ್ಡ ಪೆಟ್ಟನ್ನೇ ನೀಡಿದ್ದಾರೆ. ಈ ಪೋಸ್ಟ್ ಸುಖಾಸುಮ್ಮನೆ ವೈರಲ್ ಆಗಿಲ್ಲ, ಇದರ ಜೊತೆಗೆ ಶಾ ಒಂದು ವಾಕ್ಯವನ್ನು ಸೇರಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
"ಎಲ್ಲರಿಗೂ ನಮಸ್ಕಾರ, ನಾನು ಜೊಹೊ ಮೇಲ್ಗೆ ಬದಲಾಯಿಸಿದ್ದೇನೆ. ದಯವಿಟ್ಟು ನನ್ನ ಇಮೇಲ್ ವಿಳಾಸದಲ್ಲಿನ ಬದಲಾವಣೆಯನ್ನು ಗಮನಿಸಿ. ನನ್ನ ಹೊಸ ಇಮೇಲ್ ವಿಳಾಸ amitshah.bjp@zohomail.in. ಮೇಲ್ ಮೂಲಕ ಭವಿಷ್ಯದ ಪತ್ರವ್ಯವಹಾರಕ್ಕಾಗಿ, ದಯವಿಟ್ಟು ಈ ವಿಳಾಸವನ್ನು ಬಳಸಿ" ಎಂದು ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಜೊಹೊ ಮೇಲ್ ಅನ್ನು ಜಿಮೇಲ್ ಮತ್ತು ಮೈಕ್ರೋಸಾಫ್ಟ್ ಔಟ್ಲುಕ್ಗೆ ಭಾರತದ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿದೆ. ಇದರ ಜೊತೆಗೆ ಟ್ರಂಪ್ಗೆ ಅವರದ್ದೇ ಸ್ಟೈಲ್ನಲ್ಲಿ ತಿರುಗೇಟು ಸಹ ನೀಡಿದ್ದಾರೆ.
ಅಮಿತ್ ಶಾ ತಮ್ಮ ಪೋಸ್ಟ್ನ ಕೊನೆಯಲ್ಲಿ 'Thank you for your kind attention to this matter' ಎಂದು ಬರೆದಿದ್ದಾರೆ. ಇದು ಸುಮ್ಮನೆ ಬರೆದಿರುವುದಲ್ಲ, ಇದರ ಹಿಂದಿನ ವಾಸ್ತವತೆ ಬೇರೆಯೇ ಇದೆ. ಈ ವಾಕ್ಯವನ್ನು ಸಾಮಾನ್ಯವಾಗಿ ಟ್ರಂಪ್ ತಮ್ಮ ಭಾಷಣದ ಕೊನೆಯಲ್ಲಿ ಉಲ್ಲೇಖಿಸುತ್ತಾರೆ. ಆದರೆ ಇದೀಗ ಸ್ವದೇಶಿ ನಿರ್ಮಿತ ಮೇಲ್ಗೆ ತಮ್ಮ ಐಡಿಯನ್ನು ಬದಲಾಯಿಸಿಕೊಂಡಿರುವ ಅಮಿತ್ ಶಾ ಅವರು, ಟ್ರಂಪ್ಗೆ ಟಕ್ಕರ್ ಕೊಟ್ಟಿದ್ದಾರೆ ಎಂದೆನಿಸುತ್ತಿದೆ. ಅಂತೆಯೇ ಮುಂಬರುವ ದಿನಗಳಲ್ಲಿ ಭಾರತದಿಂದ ಜಿಮೇಲ್ ಮತ್ತು ಮೈಕ್ರೋಸಾಫ್ಟ್ ಔಟ್ಲುಕ್ನಂತಹ ಸಾಫ್ಟ್ವೇರ್ಗಳೇ ಮಾಯವಾಗಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಜೊಹೊ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಸ್ವದೇಶಿ ಸಾಫ್ಟ್ವೇರ್ ಪ್ಲಾಟ್ಫಾರ್ಮ್ ಅನ್ನು ಅಳವಡಿಸಿಕೊಂಡಿದ್ದಕ್ಕಾಗಿ ಶಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. "20 ವರ್ಷಗಳಿಗೂ ಹೆಚ್ಚು ಕಾಲ ಜೊಹೊದಲ್ಲಿ ಶ್ರಮಿಸಿದ ನಮ್ಮ ಶ್ರಮಶೀಲ ಎಂಜಿನಿಯರ್ಗಳಿಗೆ ನಾನು ಈ ಕ್ಷಣವನ್ನು ಅರ್ಪಿಸುತ್ತೇನೆ. ಅವರೆಲ್ಲರೂ ಭಾರತದಲ್ಲಿಯೇ ಇದ್ದು, ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದು ನಂಬಿಕೆಯಿಂದಲೇ. ಅವರ ನಂಬಿಕೆ ಸಮರ್ಥಿಸಲ್ಪಟ್ಟಿದೆ" ಎಂದು ವೆಂಬು ಟ್ವೀಟ್ ಮಾಡಿದ್ದಾರೆ.