)
Nisar Mission: ಹವಾಮಾನ ಬದಲಾವಣೆ, ಭೂಕಂಪನ, ಭೂಸ್ಥಿತಿಗತಿಗಳಂತಹ ಭೂವೈಜ್ಞಾನಿಕ ಅಧ್ಯಯನಕ್ಕೆ ಮೈಲುಗಲ್ಲು ಸೃಷ್ಟಿಸಲು ಸಜ್ಜಾಗಿರುವ 'ನಿಸಾರ್ ಉಪಗ್ರಹ' ಹೊಸ ಇತಿಹಾಸವನ್ನೇ ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಉಪಗ್ರಹದ ಮೂಲಕ ಭೂ ವೀಕ್ಷಣೆಗಾಗಿ ನಾಸಾ ಮತ್ತು ಇಸ್ರೋ ಸಹಭಾಗಿತ್ವ ವಹಿಸಿದ್ದು ಒಂದು ಐತಿಹಾಸಿಕ ಸಾಧನೆಯಾಗಿದೆ. ನಿಸಾರ್ ಉಪಗ್ರಹದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಈ ನಿಸಾರ್ ಉಪಗ್ರಹ ಅಂದರೆ ಏನು ಗೊತ್ತಾ?
ನಿಸಾರ್ ಅನ್ನೋದು ನಾಸಾ ಮತ್ತು ಇಸ್ರೋ ಸೇರಿ ಮಾಡಿರುವ ಒಂದು ವಿಶೇಷ ಉಪಗ್ರಹ. "NASA-ISRO Synthetic Aperture Radar" ಎನ್ನುವುದು ನಿಸಾರ್ನ ಪೂರ್ಣ ಹೆಸರು. ಇದು ಭೂಮಿಯ ಮೇಲೆ ನಡೆಯೋ ಬದಲಾವಣೆಗಳನ್ನು ಗಮನಿಸುತ್ತೆ. ಉದಾಹರಣೆಗೆ ಭೂಕಂಪ, ಹಿಮನದಿಗಳು ಕರಗೋದು, ಅರಣ್ಯ ನಾಶ, ಕೃಷಿ ಬೆಳೆಗಳಲ್ಲಿ ಏನೇನಾದ್ರೂ ಬದಲಾವಣೆ ಆದ್ರೆ ಅದನ್ನು ತೋರಿಸುತ್ತೆ.
ನಿಸಾರ್ ನಿರ್ಮಾಣವಾಗಿದ್ದು ಹೇಗೆ?
- ಇದನ್ನು ಇಸ್ರೋದ I-3K ಎಂಬ ಉಪಗ್ರಹ ಸ್ಟ್ರಕ್ಚರ್ನಲ್ಲಿ ತಯಾರಿಸಲಾಗಿದೆ. ಇದೊಂದು ಬಲಿಷ್ಠವಾದ ಸ್ಯಾಟಲೈಟ್ ಬಸ್.
- ನಿಸಾರ್ ಉಪಗ್ರಹದ ಮುಖ್ಯ ಆಕರ್ಷಣೆ ಎಂದರೆ 12 ಮೀಟರ್ನಷ್ಟು ದೊಡ್ಡದಾದ ರೇಡಾರ್ ಆಂಟೆನಾ – ಇದನ್ನು ಬಾಹ್ಯಾಕಾಶದಲ್ಲಿ ಓಪನ್ ಮಾಡ್ತಾರೆ.
- ಈ ಆಂಟೆನಾಗೆ ಮಡಿಚಬಹುದಾದ ಕೈಯಂತಹ, 9 ಮೀಟರ್ನಷ್ಟು ದೊಡ್ಡದಾದ ಬೂಮ್ ಒಂದನ್ನು ಅಳವಡಿಸಲಾಗಿದ್ದು, ಈ ಬೂಮನ್ನು ನಾಸಾ ತಯಾರಿಸಿದೆ.
ಉಪಗ್ರಹಕ್ಕೆ ಎಷ್ಟು ಹಣ ಖರ್ಚಾಯ್ತು ಗೊತ್ತಾ?
ನಿಸಾರ್ ಉಪಗ್ರಹಕ್ಕೆ ಒಟ್ಟು 1.5 ಬಿಲಿಯನ್ ಡಾಲರ್ ಖರ್ಚಾಯ್ತು! ಅಂದರೆ, ಸುಮಾರು 12,500 ಕೋಟಿ ರೂಪಾಯಿ!
ನಿಸಾರ್ಗೆ ನಾಸಾ ಮತ್ತು ಇಸ್ರೋಗಳ ಕೊಡುಗೆಗಳೇನು?
ನಾಸಾ ಸುಮಾರು 950 ಮಿಲಿಯನ್ ಡಾಲರ್ ಮೌಲ್ಯದ ಸಾಧನಗಳನ್ನ ಕೊಟ್ಟಿದೆ. ನಾಸಾದ ಉಪಕರಣಗಳಲ್ಲಿ, ದಟ್ಟ ಮರಗಳು, ಮಂಜುಗಡ್ಡೆಗಳನ್ನೂ ದಾಟಿ ನೋಡಬಲ್ಲ ಎಲ್ ಬ್ಯಾಂಡ್ ರೇಡಾರ್, 9 ಮೀಟರ್ ಬೂಮ್, 12 ಮೀಟರ್ ಆಂಟೆನಾ, ಜಿಪಿಎಸ್, ಡೇಟಾ ರೆಕಾರ್ಡರ್ ಇತ್ಯಾದಿಗಳು ಸೇರಿವೆ. ಇದರ ಜೊತೆಗೆ, ನಿಸಾರ್ ಉಪಗ್ರಹದಲ್ಲಿರುವ ರೇಡಾರ್ಗಳ ಕಾರ್ಯಾಚರಣೆ ಮತ್ತು ಉಪಗ್ರಹದ ಚಲನೆಯನ್ನೂ ನಾಸಾ ನಿರ್ವಹಿಸುತ್ತದೆ.
ಇಸ್ರೋ 788 ಕೋಟಿ ರೂಪಾಯಿಗಳ ಮೌಲ್ಯದ ಕೊಡುಗೆ ನೀಡಿದ್ದು, ಇದರಲ್ಲಿ ಬೆಳೆಗಳು ಮತ್ತು ಮಣ್ಣಿನ ವ್ಯತ್ಯಾಸಗಳನ್ನು ಗುರುತಿಸುವ ಎಸ್ ಬ್ಯಾಂಡ್ ರೇಡಾರ್, ಉಪಗ್ರಹದ ಮೂಲ ರಚನೆಯಾದ ಐ-3ಕೆ ಬಸ್, ಇತ್ಯಾದಿಗಳು ಸೇರಿವೆ. ಜಿಎಸ್ಎಲ್ವಿ–ಎಫ್16 ಮೂಲಕ ಇಸ್ರೋ ಉಪಗ್ರಹದ ಉಡಾವಣೆ ನಡೆಸಿದ್ದು, ಆಮೇಲೆ ಉಪಗ್ರಹ ನಿಯಂತ್ರಣ ಮತ್ತು ಭೂಮಿಗೆ ಡೇಟಾ ಪಡೆಯುವ ವ್ಯವಸ್ಥೆಗಳನ್ನು ಮಾಡ್ತಿದೆ.
ನಿಸಾರ್ ಉಪಗ್ರಹದ ಕಾರ್ಯಗಳೇನು?
ಈ ಉಪಗ್ರಹದ ಕೆಲಸದ ಬಗ್ಗೆ ಹೇಳ್ಬೇಕಂದ್ರೆ:
>> ಭೂಕಂಪ, ಭೂಕುಸಿತ, ಜ್ವಾಲಾಮುಖಿ – ಇವನ್ನೆಲ್ಲ ಟ್ರ್ಯಾಕ್ ಮಾಡುತ್ತೆ.
>> ಹಿಮನದಿಗಳು ಕರಗೋದು, ಸಮುದ್ರದ ಮಟ್ಟ ಏರೋದು ಗಮನಿಸುತ್ತೆ.
>> ಅರಣ್ಯ ನಾಶ, ಬೆಳೆ ಬದಲಾವಣೆ, ಮಣ್ಣಿನ ತೇವಾಂಶ ವೀಕ್ಷಿಸುತ್ತೆ.
>> ಜವುಗು ನೆಲ, ಧ್ರುವ ಪ್ರದೇಶಗಳ ಮಂಜುಗಡ್ಡೆಯನ್ನೂ ನೋಡುತ್ತೆ.
>> ಪ್ರತಿ 12 ದಿನಕ್ಕೆ ಒಮ್ಮೆ ಭೂಮಿಯ ಡೀಟೇಲ್ಡ್ ಮ್ಯಾಪ್ ಕೊಡತ್ತೆ.
ಯೋಜನೆಯ ಹಂತಗಳು ಹೇಗಿವೆ?
* ಉಡಾವಣೆ ಹಂತ: 2025ರ ಜುಲೈ 30ರಂದು ಶ್ರೀಹರಿಕೋಟಾದಿಂದ ಜಿಎಸ್ಎಲ್ವಿ ಎಫ್16 ರಾಕೆಟ್ ಮೂಲಕ ನಿಸಾರ್ ಉಡಾವಣೆ ಆಯ್ತು.
* ನಿಯೋಜನಾ ಹಂತ: ಬಾಹ್ಯಾಕಾಶ ತಲುಪಿದ ಮೇಲೆ, ನಾಸಾ ತಯಾರಿಸಿದ ಬೂಮ್ ಮೂಲಕ 12 ಮೀಟರ್ ಆಂಟೆನಾವನ್ನು ತೆರೆಯಲಾಗತ್ತೆ.
*ಕಮಿಷನ್ ಹಂತ: ಮೊದಲ 90 ದಿನಗಳಲ್ಲಿ ಎಲ್ಲಾ ಉಪಕರಣಗಳನ್ನ, ರೇಡಾರ್ಗಳನ್ನ ಸರಿಯಾಗಿ ಕೆಲಸ ಮಾಡ್ತಾವಾ ಅಂತ ಚೆಕ್ ಮಾಡ್ತಾರೆ. ಇದನ್ನೆಲ್ಲ ಇಸ್ರೋ ಮತ್ತು ನಾಸಾ ಜಂಟಿಯಾಗಿ ನೋಡಿಕೊಳ್ತವೆ.
* ವಿಜ್ಞಾನ ಕಾರ್ಯಾಚರಣಾ ಹಂತ: ನಂತರ, ನಿಸಾರ್ ಭೂಮಿಯನ್ನ ಅಬ್ಸರ್ವ್ ಮಾಡ್ತಾ, ಮಾಹಿತಿಗಳನ್ನ, ಚಿತ್ರಗಳನ್ನ ರೈತರಿಗೆ, ವಿಜ್ಞಾನಿಗಳಿಗೆ, ವಿಪತ್ತು ನಿರ್ವಹಣಾ ಸಂಸ್ಥೆಗಳಿಗೆ ಕೊಟ್ಟು, ಸಹಾಯ ಮಾಡತ್ತೆ.
ಸರಳ ಪ್ರಶ್ನೋತ್ತರಗಳು:-
ನಿಸಾರ್ ಅಂದ್ರೇನು?
ನಾಸಾ ಮತ್ತು ಇಸ್ರೋ ಸೇರಿ ಮಾಡಿರೋ, ಎರಡು ರೇಡಾರ್ ಬಳಸಿ ಭೂಮಿಯ ಬದಲಾವಣೆಗಳನ್ನು ವೀಕ್ಷಿಸುವ ಉಪಗ್ರಹ.
ಇದು ಎಲ್ಲಿಂದ, ಯಾವಾಗ ಉಡಾವಣೆ ಆಯ್ತು?
2025 ಜುಲೈ 30ರಂದು ಶ್ರೀಹರಿಕೋಟಾದಿಂದ.
ಇದು ಯಾವ ಕಕ್ಷೆಯಲ್ಲಿ ಪರಿಭ್ರಮಣೆ ಮಾಡತ್ತೆ?
743 ಕಿಲೋಮೀಟರ್ ಎತ್ತರದ ಸನ್ ಸಿಂಕ್ರೊನಸ್ ಕಕ್ಷೆಯಲ್ಲಿ ಇದು ಕೆಲಸ ಮಾಡತ್ತೆ. ಪ್ರತಿ 12 ದಿನಕ್ಕೆ ಭೂಮಿಯ ಡೀಟೇಲ್ಡ್ ಮ್ಯಾಪ್ ಕೊಡುತ್ತೆ.
ಇದರ ಮುಖ್ಯ ಭಾಗಗಳು ಯಾವುವು?
ನಾಸಾದ ಎಲ್ ಬ್ಯಾಂಡ್ ರೇಡಾರ್, ಇಸ್ರೋದ ಎಸ್ ಬ್ಯಾಂಡ್ ರೇಡಾರ್, 12 ಮೀಟರ್ ಆಂಟೆನಾ, 9 ಮೀಟರ್ ಬೂಮ್.
ಇದು ಎಷ್ಟು ನಿಖರವಾಗಿ ಕಾರ್ಯ ನಿರ್ವಹಿಸತ್ತೆ?
ಮರಗಳು, ಮೋಡ, ಮಂಜು – ಏನೇ ಇರ್ಲಿ, ನಿಸಾರ್ ಭೂಮಿಯಲ್ಲಿನ ಚಲನೆಗಳನ್ನ ಸೆಂಟಿಮೀಟರ್ ವ್ಯತ್ಯಾಸದಲ್ಲೂ ಗುರುತಿಸತ್ತೆ. ಇದು ಹಗಲು, ರಾತ್ರಿ, ಮಳೆ, ಎಲ್ಲ ಸಮಯದಲ್ಲಿ, ಹವಾಮಾನದಲ್ಲಿ ಕೆಲಸ ಮಾಡತ್ತೆ.
ಒಟ್ಟಿನಲ್ಲಿ ಹೇಳ್ಬೇಕಂದ್ರೆ, ನಿಸಾರ್ ಉಪಗ್ರಹ ಭಾರತ-ಅಮೆರಿಕ ಬಾಹ್ಯಾಕಾಶ ಸಹಯೋಗದ ಉತ್ತಮ ಉದಾಹರಣೆ! ಪರಿಸರವನ್ನ ರಕ್ಷಿಸಲು, ರೈತರಿಗೆ ಮಾಹಿತಿ ಕೊಡಲು, ಮತ್ತು ವಿಪತ್ತುಗಳನ್ನು ನಿರ್ವಹಿಸಲು ಇದು ಬಹುದೊಡ್ಡ ನೆರವು ನೀಡುತ್ತೆ.
ಲೇಖಕರು:
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಹಾಗೂ ರಕ್ಷಣಾ ವಿಶ್ಲೇಷಕ)