)
Bandipur Elephant Attack: ಫೋಟೊ ಆಸೆಗೆ ವ್ಯಕ್ತಿಯ ಜೀವವೇ ಹೋಗುವ ಪರಿಸ್ಥಿತಿ ಎದುರಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಕೆಕ್ಕನಹಳ್ಳ ಸಮೀಪ ಭಾನುವಾರ ಸಂಜೆ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಕಾಡಾನೆ ಫೋಟೋ ತೆಗೆಯಲು ವಾಹನದಿಂದ ಇಳಿದಿದ್ದ ವೇಳೆ ಸಲಗವೊಂದು ದಾಳಿ ಮಾಡಿದ್ದು ತುಳಿಯಲು ಯತ್ನಿಸಿದೆ.
ತಮಿಳುನಾಡಿನ ಊಟಿ ಕಡೆಯಿಂದ ಗುಂಡ್ಲುಪೇಟೆಯತ್ತ ಬರುವಾಗ ಬಿಳಿ ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿಯು ರಸ್ತೆ ಬದಿ ಕಾಡಾನೆ ನಿಂತಿದ್ದನ್ನು ಕಂಡು ಫೋಟೊ ತೆಗೆಯಲು ಕೆಳಕ್ಕೆ ಇಳಿದಿದ್ದಾನೆ. ಅಷ್ಟರಲ್ಲಿ , ಆನೆ ಮುಂದೆ ಕಾರೊಂದು ಮೂವ್ ಆದಾಗ ರೊಚ್ಚಿಗೆದ್ದ ಆನೆಯು ಕಾರಿನ ಮೇಲೆ ದಾಳಿ ಮಾಡಲು ಮುಂದಾಗಿ ಅಲ್ಲೇ ಫೋಟೋ ತೆಗೆಯಲು ಕೆಳಗೆ ಇಳಿದಿದ್ದ ವ್ಯಕ್ತಿಯನ್ನು ಅಟ್ಟಾಡಿಸಿದೆ.
ಆನೆ ದಾಳಿಗೆ ಒಳಗಾದ ವ್ಯಕ್ತಿಯು ಕೆಲ ಸಮಯ ರಸ್ತೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದು ಬಳಿಕ ಅವರ ಕಡೆಯವರೆ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಈ ಕುರಿತು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಮಾತನಾಡಿ, ದಾಳಿಗೊಳಗಾದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ, ಸ್ಥಳೀಯ ಆಸ್ಪತ್ರೆಗಳನ್ನು ವಿಚಾರಿಸಿದ್ದು ಆತ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿಲ್ಲ, ಆತನ ಪತ್ತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಂಡೀಪುರದಲ್ಲಿ ಆಗಾಗ್ಗೆ ತರಕಾರಿ ವಾಹನಗಳ ಮೇಲೆ ದಾಳಿ ಮಾಡುವ ಕಾಡಾನೆ ದಾಳಿ ಮಾಡಿದ್ದು ಸವಾರರು ಕೂಡ ಕೆಲ ನಿಯಮ ಪಾಲಿಸಬೇಕು, ವಾಹನಗಳಿಂದ ಕೆಳಕ್ಕೆ ಇಳಿದು ಹುಚ್ಚಾಟ ನಡೆಸಬಾರದು ಎಂದರು.