)
ಕೋತಿಗಳು ಮಾಡುವ ಚೇಷ್ಟೆಗಳು ಕೆಲವೊಮ್ಮೆ ತಮಾಷೆಯೆನಿಸಿದರೆ, ಇನ್ನು ಕೆಲವೊಮ್ಮೆ ಭಾರೀ ನಷ್ಟವನ್ನುಂಟು ಮಾಡುತ್ತವೆ.ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದ್ದು, ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಆಭರಣಗಳಿದ್ದ ಬ್ಯಾಗ್ನ್ನು ಕೋತಿಯೊಂದು ವ್ಯಕ್ತಿಯಿಂದ ಕಸಿದುಕೊಂಡು ಹೋಗಿದೆ.
ಜೂನ್ 6 ರಂದು ಅಲಿಗಢದ ವಜ್ರದ ವ್ಯಾಪಾರಿ ಅಭಿಷೇಕ್ ಅಗರ್ವಾಲ್ ಅವರು ತಮ್ಮ ಕುಟುಂಬದೊಂದಿಗೆ ಬೃಂದಾವನಕ್ಕೆ ತೀರ್ಥಯಾತ್ರೆಗೆ ಬಂದಿದ್ದರು. ಅಲ್ಲಿನ ಹಲವು ದೇವಾಲಯಗಳನ್ನು ದರ್ಶಿಸಿ, ಮನೆಗೆ ಮರಳಲು ತಮ್ಮ ಕಾರಿನ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ, ಇದ್ದಕ್ಕಿದ್ದಂತೆ ಬಂದ ಕೋತಿಯೊಂದು ಅವರ ಕೈಯಲ್ಲಿದ್ದ ಬ್ಯಾಗ್ನ್ನು ಕಿತ್ತುಕೊಂಡು ಪರಾರಿಯಾಗಿದೆ.
ಆ ಬ್ಯಾಗ್ನಲ್ಲಿ ಅತ್ಯಂತ ಬೆಲೆಬಾಳುವ ಆಭರಣಗಳಿದ್ದ ಕಾರಣ ಅಭಿಷೇಕ್ ಮತ್ತು ಅವರ ಕುಟುಂಬ ಆತಂಕಕ್ಕೊಳಗಾಯಿತು. ಕೋತಿಗೆ ಹಣ್ಣು, ತಿಂಡಿಗಳನ್ನು ನೀಡಿ ಬ್ಯಾಗ್ನ್ನು ವಾಪಸ್ ಪಡೆಯಲು ಸಾಕಷ್ಟು ಪ್ರಯತ್ನಿಸಿದರು. ಆದರೆ, ಅವರ ಯಾವುದೇ ಪ್ರಯತ್ನ ಫಲಿಸಲಿಲ್ಲ.
ಕೊನೆಗೆ, ಬೇರೆ ದಾರಿ ಕಾಣದೆ ಅಭಿಷೇಕ್ ಅವರು ಪೊಲೀಸರ ಸಹಾಯವನ್ನು ಕೋರಿದರು.ಸ್ಥಳಕ್ಕೆ ಬಂದ ಪೊಲೀಸರು ಕೋತಿಯನ್ನು ಪತ್ತೆಹಚ್ಚಿ, ಅದನ್ನು ಸುತ್ತುವರೆದರು. ಕೆಲವು ಗಂಟೆಗಳ ಹರಸಾಹಸದ ನಂತರ, ಕೊನೆಗೂ ಕೋತಿಯಿಂದ ಬ್ಯಾಗ್ನ್ನು ವಶಪಡಿಸಿಕೊಂಡು ಅದರ ಮಾಲೀಕರಾದ ಅಭಿಷೇಕ್ ಅವರಿಗೆ ಹಿಂತಿರುಗಿಸಿದ್ದಾರೆ. ಈ ಧಾರ್ಮಿಕ ಪ್ರವಾಸಿ ತಾಣದಲ್ಲಿ ಕೋತಿಗಳ ಹಾವಳಿಯನ್ನು ನಿಯಂತ್ರಿಸಲು ಅಧಿಕಾರಿಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ