)
Tiger and cubs viral video: ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾಗ ಮೂರು ಹುಲಿಮರಿ ಪತ್ತೆಯಾದ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರು-ಬೇಡಗುಳಿ ರಸ್ತೆಯಲ್ಲಿ ನಡೆದಿದೆ.
ಮಂಗಳವಾರ(ಅಕ್ಟೋಬರ್ 14) ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ನಡೆಸುವಾಗ ಎರಡು ಹುಲಿ ಮರಿಗಳು ಅಲೆದಾಡುತ್ತಿದ್ದನ್ನು ಕಂಡಿದ್ದಾರೆ. ಬಳಿಕ, ಗಸ್ತು ಮುಗಿಸಿ ವಾಪಾಸ್ ಆಗುವಾಗಲೂ ಹುಲಿ ಮರಿಗಳು ಅಲೆದಾಡುವುದನ್ನು ಗಮನಿಸಿ ಪರಿಶೀಲಿಸಿದಾಗ ಮತ್ತೊಂದು ಹುಲಿಮರಿ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ, ತಾಯಿ ಹುಲಿ ಕುರುಹು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ವಲಯ ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ.
ಎನ್ ಟಿಸಿಎ ಮಾರ್ಗಸೂಚಿ ಅನ್ವಯ ತಾಯಿ ಹುಲಿ ಪತ್ತೆ ಹಾಗೂ ಮರಿಗಳ ನಿಗಾಕ್ಕಾಗಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಗಿದ್ದು ತಾಯಿ ಹುಲಿ ಪತ್ತೆಗಾಗಿ ಕೂಂಬಿಂಗ್ ನಡೆಸಲಾಗುತ್ತಿದೆ.
ಪತ್ತೆಯಾದ ಹುಲಿ ಮರಿಗಳು 30 ದಿನಗಳ ಮರಿಗಳಾಗಿದ್ದು ಪಶು ವೈದ್ಯರು ನಿಗಾ ಇಟ್ಟಿದ್ದಾರೆ, ಕ್ಯಾಮರಾ ಟ್ರಾಪ್ ಕೂಡ ಅಳವಡಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಸಫಾರಿಯಲ್ಲಿ ಹುಲಿರಾಯನ ದರ್ಶನ:
ಮತ್ತೊಂದೆಡೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಸಫಾರಿಯಲ್ಲಿ ಹುಲಿರಾಯನ ಬಿಂದಾಸ್ ಓಡಾಟದ ದೃಶ್ಯ ಕಂಡು ಬಂದಿದೆ. ಕಬಿನಿ ಹಿನ್ನೀರಿನ ಸಫಾರಿ ರಸ್ತೆಯಲ್ಲಿ ನಾಲ್ಕರಿಂದ ಐದು ಸಫಾರಿ ವಾಹನಗಳಿದ್ದರು ಯಾವುದಕ್ಕೂ ಕ್ಯಾರೆ ಅನ್ನದ ಹುಲಿರಾಯ ಬಿಂದಾಸ್ ಆಗಿ ನಡೆದು ಸಾಗಿರುವ ದೃಶ್ಯವನ್ನು ಸಫಾರಿಗರು ಸೆರೆ ಹಿಡಿದಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.