)
Viral Video: ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಹೊಸ ವಧುವನ್ನು ಹೆಲಿಕಾಪ್ಟರ್ ಮೂಲಕ ಕರೆತಂದು ಎಲ್ಲರೂ ಹೌಹಾರುವಂತೆ ಮಾಡಿರುವ ಘಟನೆ ನಡೆದಿದೆ. ಬಾಂಗ್ಲಾದೇಶದ ಮುನಿಗಂಜ್ ಜಿಲ್ಲೆಯಲ್ಲಿಯೇ ಈ ನಾಟಕೀಯ ಘಟನೆ ನಡೆದಿದೆ. ಟೋಂಗಿಬಾರಿ ಉಪಜಿಲ್ಲೆಯಲ್ಲಿರುವ ಕಥಾಡಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 39 ವರ್ಷದ ವ್ಯಕ್ತಿ ಮತ್ತು ಇಬ್ಬರು ಹೆಣ್ಣುಮಕ್ಕಳ ತಂದೆ ಕಮಲ್ ಹೊಸೈನ್ ಮೊದಲ ಮದುವೆಯಾಗಿ 10 ವರ್ಷ ಕಳೆದಿತ್ತು. ಆದರೆ ಈ ವರ್ಷದ ಆಗಸ್ಟ್ನಲ್ಲಿ ಆತನ ಪತ್ನಿ ಸತಿ ಅಖ್ತರ್ ಎಂಬಾಕೆ ಹೊಸೈನ್ಗೆ ಕೈಕೊಟ್ಟು ಬೇರೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿದ್ದಳು.
ಗಂಡನಿಗೆ ಮೋಸ ಮಾಡಿ ಬೇರೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿದ್ದ ಸತಿ ಅಖ್ತರ್ ತನ್ನ ಜೊತೆಗೆ ಅಪಾರ ಪ್ರಮಾಣದ ಹಣ ಹಾಗೂ ಚಿನ್ನಾಭರಣ ತೆಗೆದುಕೊಂಡು ಎಸ್ಕೇಪ್ ಆಗಿದ್ದಳು. ಆದರೆ ಈ ಘಟನೆಯಿಂದ ಬೇಸರಗೊಳ್ಳದ ಹೊಸೈನ್ ತನ್ನ ಮಕ್ಕಳನ್ನ ನೋಡಿಕೊಂಡು ಜೀವನ ಸಾಗಿಸುತ್ತಿದ್ದ. ಈ ವೇಳೆ ದೀರ್ಘಕಾಲದ ಸ್ನೇಹಿತೆ ಮತ್ತು ಹತ್ತಿರದ ಮನೆಯವಳೇ ಆಗಿದ್ದ 24 ವರ್ಷದ ನೂಪುರ್ ಅಖರ್ ಎಂಬಾಕೆ ಆತನಿಗೆ ಸಹಾಯ ಮಾಡುತ್ತಿದ್ದಳು. ಇಬ್ಬರು ಪರಸ್ಪರ ಒಪ್ಪಿಕೊಂಡು ಮದುವೆಯಾಗಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್
ತನ್ನ ಮದುವೆಯನ್ನ ತುಂಬಾ ಅದ್ದೂರಿಯಾಗಿ ನಡೆಸಲು ಹಾಗೂ ಎಲ್ಲರ ಗಮನಸೆಳೆಯಲು ಹೊಸೈನ್ ತನ್ನ ಹಳ್ಳಿಗೆ ಹೊಸ ವಧುವನ್ನ ಕರೆತರಲು ದೊಡ್ಡ ಪ್ಲಾನ್ ಮಾಡಿದ್ದ. ಅದರಂತೆ ಹೆಲಿಕಾಪ್ಟರ್ವೊಂದನ್ನ ಬಾಡಿಗೆ ಪಡೆದು ಅದರಲ್ಲಿ ತನ್ನ ಹೊಸ ಪತ್ನಿಯನ್ನ ಕರೆತಂದು ಎಲ್ಲರಿಗೂ ಶಾಕ್ ನೀಡಿದ್ದಾನೆ. ಹೊಸೈನ್ ತನ್ನ ಹೊಸ ಹೆಂಡತಿಯನ್ನ ಹೆಲಿಕಾಪ್ಟರ್ನಲ್ಲಿ ಮನೆಗೆ ಕರೆತರುವ ಕನಸು ಕಂಡಿದ್ದಾಗಿ ಹೇಳಿಕೊಂಡಿದ್ದಾನೆ. ಕಷ್ಟಗಳ ಹೊರತಾಗಿಯೂ ನೂಪುರ್ ಜೊತೆಗೆ ಈ ಮಹದಾಸೆ ಈಡೇರಿಸಿಕೊಳ್ಳಲು ಬಯಸಿದ್ದಾಗಿ ತಿಳಿಸಿದ್ದಾನೆ.
ನನಗೆ ಎಂದಿಗೂ ಸಂಪತ್ತಿನ ಕೊರತೆ ಇರಲಿಲ್ಲ.. ಆದರೆ ಕೆಲಸದ ಕಾರಣದಿಂದ ನಾನು ಆಗಾಗ ಮನೆಯಿಂದ ದೂರ ಇರುತ್ತಿದ್ದೆ. ಹೀಗಾಗಿ ಆಗಸ್ಟ್ನಲ್ಲಿ ನನ್ನ ಮೊದಲ ಹೆಂಡತಿ ನನ್ನನ್ನ ತೊರೆದು ಬೇರೆ ಪುರುಷನೊಂದಿಗೆ ಓಡಿ ಹೋದಳು. ನಾನು ಆಕೆಯನ್ನ ಮರಳಿ ಕರೆತರಲು ಹೋದಾಗ, ಆಕೆ ಮೂರು ತಿಂಗಳ ಹಿಂದೆಯೇ ನನಗೆ ವಿಚ್ಛೇದನ ನೀಡಿದ್ದಾಗಿ ಹೇಳಿದಳು. ನಾನು ಮನಗೆ ಬರುವಂತೆ ಒತ್ತಾಯಿಸಿದಾಗ ಆಕೆ ಪೊಲೀಸರಿಗೆ ದೂರು ನೀಡಿದಳು ಅಂತಾ ತಿಳಿಸಿದ್ದಾನೆ.
ಹೆಂಡತಿ ಬಿಟ್ಟುಹೋದ ನೋವಿನಿಂದ ಹೊರಬಂದ ಬಳಿಕ ನೂಪುರ್ ಕುಟುಂಬ ಮದುವೆಗೆ ಒಪ್ಪಿಕೊಂಡಿತು. ಆಕೆ ನನ್ನ ಮಕ್ಕಳನ್ನ ನೋಡಿಕೊಳ್ಳುವುದಾಗಿ ಭರವಸೆ ನೀಡಿದಳು. ಹೀಗಾಗಿ ನಾನು ಆಕೆಗೆ ಮತ್ತು ಊರಿನವರಿಗೆ ಸರ್ಪ್ರೈಸ್ ನೀಡುವ ಸಲುವಾಗಿ ಹೆಲಿಕಾಪ್ಟರ್ ಬುಕ್ ಮಾಡಿದ್ದೆ. ಇಂದು ನಾನು ನನ್ನ ಹೊಸ ವಧುವಿನೊಂದಿಗೆ ಮನೆಗೆ ಮರಳಿದ್ದೇನೆ. ನನ್ನ ಹೊಸ ಜೀವನಕ್ಕೆ ಎಲ್ಲರೂ ಆಶೀರ್ವಾದ ಮಾಡಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ ಅಂತಾ ತಿಳಿಸಿದ್ದಾನೆ.