Viral Video Today: ಬೆಳ್ಳಂಬೆಳಗ್ಗೆ ಆಹಾರ ಅರಸಿ ರಸ್ತೆಗಿಳಿದ "ತರಕಾರಿ ರಾಜ" ಕಾಡಾನೆ ಕಂಡು ಹೌಹಾರಿದ ಪ್ರವಾಸಿಗರು. ಬಂಡೀಪುರದಿಂದ ಊಟಿಗೆ ತೆರಳುವ ಮಾರ್ಗದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ.

Elephant Viral Video: ಆಹಾರ ಅರಸಿ ರಸ್ತೆಗಿಳಿಯುವ ಕಾಡಾನೆ ಉಪಟಳ ಮುಂದುವರೆದಿದ್ದು ಬೆಳ್ಳಂಬೆಳಗ್ಗೆ ಆಹಾರ ಅರಸಿ ರಸ್ತೆಗಿಳಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಶುಕ್ರವಾರ (ಆ.29) ನಡೆದಿದೆ. ಕಾಡಾನೆ ಬರುತ್ತಿದ್ದಂತೆ ಭಯದಿಂದ ಪ್ರವಾಸಿಗರು ಚೀರಿಕೊಂಡಿದ್ದು ವೀಡಿಯೋದಲ್ಲಿ ಸೆರೆಯಾಗಿದೆ.
ಕೆಲ ತಿಂಗಳಿನಿಂದ ತರಕಾರಿ ಸಾಗಿಸುವ ವಾಹನಗಳ ಈ ಒಂಟಿ ಸಲಗ ದಾಳಿ ಮಾಡುತ್ತಿದ್ದು ಬಂಡೀಪುರದಿಂದ ಊಟಿಗೆ ತೆರಳಲು ಜೀವ ಕೈಯಲ್ಲಿ ಹಿಡಿದು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಗುರುವಾರ (ಆ.28) ಸಂಜೆಯೂ ರಸ್ತೆಗಿಳಿದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಗಸ್ತು ಸಿಬ್ಬಂದಿ ಕಾಡಿಗೆ ಅಟ್ಟುವಾಗ ಇಲಾಖೆ ಜೀಪನ್ನು ಅಟ್ಟಾಡಿಸಿದ ಘಟನೆಯೂ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಡಾನೆ ಕಾಟ:
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಹಾರ ಅರಸಿ ರಸ್ತೆಗಿಳಿಯುವ ಕಾಡಾನೆ ಉಪಟಳ ಮಿತಿಮೀರಿದ್ದು ವಾಹನ ಸವಾರರು ನಿತ್ಯ ಭಯದಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಂಡೀಪುರದಲ್ಲಿ ಆಹಾರ ಅರಸಿ ರಸ್ತೆಗಿಳಿಯುವ ಕಾಡಾನೆ ಒಂದೆಡೆಯಾದರೇ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಗಡಿಭಾಗದ ಅಸನೂರಿನಲ್ಲಿ ನಿತ್ಯವು ಕಬ್ಬು ಸಾಗಿಸುವ ಲಾರಿಗಳು, ಬಾಳೆ ಸಾಗಿಸುವ ಗೂಡ್ಸ್ ವಾಹನಗಳ ಮೇಲೆ ದಾಳಿ ಮಾಡುತ್ತಿವೆ.
ಈ ನಡುವೆ ರಸ್ತೆಗಿಳಿದ ಕಾಡಾನೆ ಜೊತೆ ಹಲವರು ಸೆಲ್ಫಿ ಆಸೆಗೆ ಹುಚ್ಚಾಟ ಮೆರೆಯಲಿದ್ದು 5-6 ಮಂದಿ ದಂಡವನ್ನು ಪೀಕಿದ್ದಾರೆ.