ಜಿನೇವಾ: WHO ಕೊರೊನಾ ವೈರಸ್ ನ ಲಕ್ಷಣರಹಿತ ರೋಗಿಗಳಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗಿರುತ್ತದೆ ಎಂದು ಹೇಳಿತ್ತು. ಆದರೆ ಇದೀಗ WHO ನಿಂದ ಮತ್ತೊಂದು ಹೇಳಿಕೆ ಪ್ರಕಟವಾಗಿದ್ದು, ಇದು ತುಂಬಾ ಕಡಿಮೆ ಅಂದರೆ 2-3 ಅಧ್ಯಯನಗಳ ಆಧಾರದ ಮೇಲೆ ಮಾತ್ರ ಹೇಳಲಾಗಿತ್ತು ಎಂದಿದೆ.


COMMERCIAL BREAK
SCROLL TO CONTINUE READING

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಹೇಳಿಕೆ ನೀಡಿರುವ WHO ತಾಂತ್ರಿಕ ಮುಖ್ಯಸ್ಥೆ ಮಾರಿಯಾ ವೈನ್ ಕರಖೋವಾ, " ನಮ್ಮ ಬಳಿ ತುಂಬಾ ವಿಸ್ತಾರವಾಗಿ ಕಾಂಟಾಕ್ಟ್ ಟ್ರೆಸಿಂಗ್ ಮಾಡುವ ದೇಶಗಳ ಹಲವು ರಿಪೋರ್ಟ್ ಗಳಿವೆ. ಈ ದೇಶಗಳು ಲಕ್ಷಣರಹಿತ ಪ್ರಕರಣಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿವೆ ಹಾಗೂ ಅವರಿಗೆ ಪ್ರಕರಣಗಳಲ್ಲಿ ಸೆಕೆಂಡರಿ ಟ್ರಾನ್ಸ್ಮಿಷನ್ ಕಾಣಿಸುತ್ತಿಲ್ಲ" ಎಂದು ಹೇಳಿದ್ದರು


ಅಷ್ಟೇ ಅಲ್ಲ "ಓರ್ವ ಲಕ್ಷಣರಹಿತ ರೋಗಿ ಮುಂದೆ ಹೋಗಿ ಯಾವುದೇ ಓರ್ವ ವ್ಯಕ್ತಿಯನ್ನು ವಾಸ್ತವಿಕವಾಗಿ ಸೋಂಕಿಗೆ ಗುರಿಮಾಡುವ ಸಾಧ್ಯತೆ ತುಂಬಾ ಕಡಿಮೆ" ಎಂದು ಕರಖೋವಾ ಹೇಳಿದ್ದರು.


ಆದರೆ, ಮಾರಿಯಾ ಮಂಗಳವಾರ ಮತ್ತೊಂದು ಸುದ್ದಿಗೋಷ್ಠಿ ನಡೆಸಿದ್ದು, ಈ ಸುದ್ದಿಗೋಷ್ಠಿಯಲ್ಲಿ ಅವರು ತಾವೇ ನೀಡಿದ್ದ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಈ ವೇಳೆ ಮಾತನಾಡಿರುವ ಅವರು, " ನಾನು ನಿನ್ನೆ ನೀಡಿರುವ ಹೇಳಿಕೆ ಕೇವಲ ಕಡಿಮೆ ಅಧ್ಯಯನಗಳ ಆಧಾರದ ಮೇಲೆ ನೀಡಲಾಗಿದ್ದ ಹೇಳಿಕೆಯಾಗಿತ್ತು. ಅಂದರೆ, ಲಕ್ಷಣ ರಹಿತ ರೋಗಿಗಳ ಮೇಲೆ ಗಮನ ಕೇಂದ್ರೀಕರಿಸಿದ ಕೇವಲ 2 ಅಥವಾ ಮೂರು ಪ್ರಕಟಗೊಂಡ ಅಧ್ಯಯನಗಳ ಆಧಾರದ ಮೇಲೆ ಹೇಳಿಕೆ ನೀಡಲಾಗಿತ್ತು. ಹೀಗಾಗಿ ಸಮಯಕ್ಕೆ ತಕ್ಕಂತೆ ಸೋಂಕಿಗೆ ಗುರಿಯಾಗಿರುವವರ ಎಲ್ಲ ಸಂಪರ್ಕಗಳನ್ನು ಗಮನಿಸಿ ಹಾಗೂ ಎಷ್ಟು ಪ್ರಮಾಣದಲ್ಲಿ ಹೆಚ್ಚುವರಿ ಜನರು ಸೋಂಕಿಗೆ ಗುರಿಯಾಗಿದ್ದಾರೆ ಎಂಬುದನ್ನು ನೋಡಿ" ಎಂದಿದ್ದಾರೆ.


ಜೊತೆಗೆ " ಇದು ಅಧ್ಯಯನಗಳ ಒಂದು ಸಣ್ಣ ಭಾಗವಾಗಿದೆ. ಹೀಗಾಗಿ ನಾನು ಕೇವಲ ಪ್ರಶ್ನೆಗೆ ಉತ್ತರಿಸುತ್ತಿದ್ದೆ, WHO ನೀತಿಯನ್ನು ಹೇಳುತ್ತಿರಲಿಲ್ಲ" ಎಂದಿದ್ದಾರೆ. 


"ಸೋಂಕು ಹರಡುವ ಲಕ್ಷಣರಹಿತ ಜನರ ಅನುಪಾತ ಏನು? ಎಂಬುದರ ಕುರಿತು ಕೆಲ ಮಾಡೆಲಿಂಗ್ ಸಮೂಹಗಳು ಅಂದಾಜು ಹಚ್ಚುವ ಪ್ರಯತ್ನ ನಡೆಸಿವೆ" ಎಂದೂ ಕೂಡ ಮಾರಿಯಾ ಹೇಳಿದ್ದಾರೆ.