ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಭಾರತೀಯ ಆಮದುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಈಗ ಭಾರತೀಯ ಆಮದುಗಳ ಮೇಲೆ ಅಮೆರಿಕವು ಶೇ.50 ರಷ್ಟು ಸುಂಕ ವಿಧಿಸಿದಂತಾಗಲಿದೆ.

Trump tariffs india: ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ವಿಧಿಸಲು ಅಮೆರಿಕ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 27ರಿಂದ ಭಾರತೀಯ ಆಮದುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ಭಾರತೀಯ ಆಮದುಗಳ ಮೇಲೆ ಟ್ರಂಪ್ ವಿಧಿಸಿರುವ ಶೇ.50ರಷ್ಟು ಸುಂಕಗಳಲ್ಲಿ ಅರ್ಧದಷ್ಟು ಈ ತಿಂಗಳ ಆರಂಭದಲ್ಲಿ ಜಾರಿಗೆ ಬಂದಿದ್ದು, ಉಳಿದರ್ಧ ಬುಧವಾರದಿಂದ ಜಾರಿಗೆ ಬರಲಿದೆ. ಸುಂಕ ಹೆಚ್ಚಳವು ಆಗಸ್ಟ್ 27ರ ಬೆಳಗ್ಗೆ 12:01ರಿಂದ ಅಥವಾ ನಂತರ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ಕಾರಣವೇನು?
ಭಾರತವು ರಷ್ಯಾದ ತೈಲ ಖರೀದಿಸಿದ್ದೇ ಸುಂಕವನ್ನು ದ್ವಿಗುಣಗೊಳಿಸಲು ಕಾರಣವೆಂದು ಡೊನಾಲ್ಡ್ ಟ್ರಂಪ್ ಉಲ್ಲೇಖಿಸಿದ್ದರು. ಅವರು ತಮ್ಮ ಆದೇಶದಲ್ಲಿ "ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತವು ರಷ್ಯಾಕ್ಕೆ ಹಣ ನೀಡುತ್ತಿದೆ. ಅದೇ ಹಣವನ್ನ ಉಕ್ರೇನ್ ಯುದ್ಧದಲ್ಲಿ ಬಳಸಲಾಗುತ್ತಿದೆʼ ಎಂದು ತಿಳಿಸಿದ್ದರು. ರಷ್ಯಾದ ಮೇಲೆ ಒತ್ತಡ ಹೇರಲು ಭಾರತದ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ಯುದ್ಧವನ್ನು ಉತ್ತೇಜಿಸುತ್ತಿದೆ ಅಂತಾ ಅಮೆರಿಕ ಆರೋಪಿಸಿದೆ.
ಚೀನಾ ಜೊತೆಗಿನ ಅಮೆರಿಕದ ಸಂಬಂಧ ಸುಧಾರಿಸಲಿದೆ
ಏತನ್ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಚೀನಾದೊಂದಿಗಿನ ತಮ್ಮ ಸಂಬಂಧವನ್ನು ಶ್ಲಾಘಿಸಿದ್ದಾರೆ. ಅಮೆರಿಕವು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲಿದೆ ಎಂದು ಅವರು ಹೇಳಿದ್ದಾರೆ. ಚೀನಾದೊಂದಿಗಿನ ನಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಅವರಿಗೆ ಕೆಲವು ಬೇಡಿಕೆಗಳಿವೆ, ಅದೇ ರೀತಿ ನಮಗೂ ಕೆಲವು ಬೇಡಿಕೆಗಳಿವೆ. ಆದರೆ ನಾನು ಆ ಬೇಡಿಕೆಗಳ ವಿಚಾರದಲ್ಲಿ ಸಂಬಂಧ ಹಾಳುಮಾಡಿಕೊಳ್ಳಲ್ಲ. ಒಂದು ವೇಳೆ ನಾನು ಆ ಬೇಡಿಕೆಗಳಿಗೆ ಪಟ್ಟು ಹಿಡಿದರೆ ಚೀನಾಗೆ ಸಂಕಷ್ಟ ಉಂಟಾಗಲಿದೆ. ಹೀಗಾಗಿ ನಾನು ಆ ಕಾರ್ಡ್ಗಳನ್ನ ಆಡುವುದಿಲ್ಲʼ ಎಂದು ಟ್ರಂಪ್ ಹೇಳಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ ಈ ಹೇಳಿಕೆಗಳನ್ನ ನೀಡುವಾಗ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಟ್ರಂಪ್ ಪಕ್ಕದಲ್ಲಿಯೇ ಕುಳಿತ್ತಿದ್ದರೆಂದು ವರದಿಯಾಗಿದೆ.
ಅಮೆರಿಕ ವಿರುದ್ಧ ಭಾರತದ ಸೇಡು!
ಅಮೆರಿಕವು ಶೇ.50ರಷ್ಟು ಸುಂಕ ವಿಧಿಸುವುದನ್ನು ಭಾರತ ಬಲವಾಗಿ ವಿರೋಧಿಸಿತ್ತು. ಯುರೋಪಿಯನ್ ರಾಷ್ಟ್ರಗಳು ಭಾರತಕ್ಕಿಂತ ಚೀನಾದೊಂದಿಗೆ ಹೆಚ್ಚು ವ್ಯವಹಾರ ನಡೆಸುತ್ತವೆ ಎಂದು ಭಾರತ ಹೇಳಿತ್ತು. ಅದೇ ಸಮಯದಲ್ಲಿ ಅಮೆರಿಕ ಕೂಡ ರಷ್ಯಾದಿಂದ ಕೆಲವು ವಸ್ತುಗಳನ್ನು ಖರೀದಿಸುತ್ತದೆ ಎಂದು ಭಾರತ ಇತ್ತೀಚೆಗೆ ಹೇಳಿತ್ತು. ಚೀನಾ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರನಾಗಿದ್ದರೂ, ಅಮೆರಿಕ ಅದರ ವಿರುದ್ಧ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಭಾರತ ಹೇಳಿತ್ತು. ಅಲ್ಲದೇ ಅಮೆರಿಕದ ಸುಂಕ ಬೇದರಿಕೆಗೆ ಭಾರತ ಹೆದರುವುದಿಲ್ಲವೆಂದು ತಿರುಗೇಟು ನೀಡಿತ್ತು. ಟ್ರಂಪ್ ಇತ್ತೀಚೆಗೆ ಚೀನಾಕ್ಕೆ ಸುಂಕದ ಗಡುವನ್ನು ವಿಸ್ತರಿಸಿದ್ದಾರೆ, ಅದು ಆಗಸ್ಟ್ನಲ್ಲಿ ಕೊನೆಗೊಳ್ಳಬೇಕಿತ್ತು. ಫೆಂಟನಿಲ್-ಸಂಬಂಧಿತ ಸುಂಕಗಳಲ್ಲಿ ಅಮೆರಿಕ ಚೀನಾದ ಮೇಲೆ 20% ಸುಂಕವನ್ನು ವಿಧಿಸಿತ್ತು. ಮೂಲ ದರವು 10% ಆಗಿದ್ದು, ಇದು ಚೀನಾದ ಆಮದಿನ ಮೇಲಿನ ಒಟ್ಟು ಸುಂಕವನ್ನು 30% ಮಾಡುತ್ತದೆ.