ನವದೆಹಲಿ: LAC ಬಳಿ ಉಂಟಾಗಿರುವ ಉದ್ವಿಗ್ನತೆಯ ನಡುವೆ, ಪ್ರಧಾನಿ ನರೇಂದ್ರ ಮೋದಿಯವರ ಲೇಹ್ ಭೇಟಿಯಿಂದ ಚೀನಾ ಕೆರಳಿದೆ. ಭಾರತದ ಮನೋಬಲವನ್ನು ನೋಡಿರುವ ಚೀನಾ ಇದೀಗ ಮಾತುಕತೆ ಮತ್ತು ರಾಜತಾಂತ್ರಿಕತೆಯ ವಾದ ಮಂಡಿಸಲು ಆರಂಭಿಸಿದೆ. ಭಾರತ ಮತ್ತು ಚೀನಾ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ಪಕ್ಷವು ಹಾಳಾಗುವ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ತನ್ನ ದಿನನಿತ್ಯದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಅವರ ಲೇಹ್ ಭೇಟಿಯ ಕುರಿತು ಪ್ರಶ್ನಿಸಿದಾಗ, ಪ್ರಶ್ನೆಗೆ ಉತ್ತರಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, "ಭಾರತ ಮತ್ತು ಚೀನಾ ಉಭಯ ದೇಶಗಳ ನಡುವೆ ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆಗಳು ನಡೆದಿದ್ದು, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಗಳು ಮುಂದುವರೆದಿವೆ" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ "ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಒಂದು ಪಕ್ಷ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಹೆಜ್ಜೆ ಇಡಬಾರದು" ಎಂದು ಹೇಳಿದ್ದಾರೆ.


ಪೂರ್ವ ಲಡಾಕ್ ನಲ್ಲಿ ಭಾರತೀಯ ಮತ್ತು ಚೀನಾ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ಕೆಲ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇದ್ದಕ್ಕಿದ್ದಂತೆ ಲೇಹ್ ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸೇನೆ, ವಾಯುಪಡೆ ಮತ್ತು ಐಟಿಬಿಪಿ ಸಿಬ್ಬಂದಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಬೆಳಗ್ಗೆ 9.30 ರ ಸುಮಾರಿಗೆ ಪ್ರಧಾನಿ ಮೋದಿ ಅವರು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಲೇಹ್ ತಲುಪಿದ್ದಾರೆ.


ತಮ್ಮ ಈ ಭೇಟಿಯ ವೇಳೆ ಪ್ರಧಾನಿ ಮೋದಿ ನಿಮುವಿನ ಒಂದು ಉಚ್ಚ ಸ್ಥಾನಕ್ಕೆ ತಲುಪಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಅಲ್ಲಿ ಪ್ರಧಾನಿ ಭೂಸೇನೆ, ವಾಯುಸೇನೆ ಹಾಗೂ ITBP  ಸಿಬ್ಬಂದಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಗಡಿ ಭಾಗದ ಸ್ಥಿತಿಯ ಕುರಿತು ಪ್ರಧಾನಿಗಳಿಗೆ ವಿಸ್ತೃತ ಮಾಹಿತಿ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.


ಸಿಂಧೂ ನದಿಯ ದಡದಲ್ಲಿ 11 ಸಾವಿರ ಅಡಿ ಎತ್ತರದಲ್ಲಿ ನೆಲೆಗೊಂಡಿರುವ ನಿಮು, ತಲುಪಲು ಅತ್ಯಂತ ಕ್ಲಿಷ್ಟ ಪ್ರದೇಶಗಳಲ್ಲಿ ಒಂದಾಗಿದೆ. ಇದರ ಸುತ್ತಲೂ ಜನ್ಸ್ಕರ್ ಪರ್ವತ ಶ್ರೇಣಿಯಿದೆ. 'ಮನ್ ಕಿ ಬಾತ್' ಎಂಬ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಆಕಾಶವಾಣಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಲಡಾಖ್‌ನಲ್ಲಿ ತನ್ನ ಭೂಮಿಯತ್ತ ಕಣ್ಣೆತ್ತಿ ನೋಡುವವರಿಗೆ  ಭಾರತ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದ್ದರು.


ಭಾರತವು ಸ್ನೇಹದ ಮನೋಭಾವವನ್ನು ಗೌರವಿಸುತ್ತದೆ, ಆದರೆ, ಯಾರಾದರು ತನ್ನ ಭೂಮಿಯತ್ತ ಕಣ್ಣೆತ್ತಿ ನೋಡಿದರೆ, ಅದು ತಕ್ಕ ಪ್ರತಿಕ್ರಿಯೆ ನೀಡಲು ಬದ್ಧವಾಗಿದೆ. ಗಾಲ್ವಾನ್ ಕಣಿವೆಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ ಆಫ್ ಚೀನಾ ಜೊತೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಹುತಾತ್ಮರಾದ 20 ಸೈನಿಕರಿಗೆ ಗೌರವ ಸಲ್ಲಿಸಿದ್ದ ಪ್ರಧಾನಿ, ಭಾರತದ ಧೀರ ಪುತ್ರರು ತಾಯಿ ಭಾರತಿಯ ವೈಭವವನ್ನು ಕುಸಿಯಲು ಎಂದಿಗೂ ಅನುಮತಿಸುವುದಿಲ್ಲ ಎಂಬುದನ್ನು ತೋರಿಸಿದ್ದಾರೆ ಎಂದು ಕೂಡ ಪ್ರಧಾನಿ ಹೇಳಿದ್ದರು.