)
H-1B visa fee hike: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಐಟಿ ಉದ್ಯಮಿಗಳಿಗೂ, ವಿದೇಶದಲ್ಲಿ ಕೆಲಸ ಮಾಡುವ ಕನಸಿರುವ ಸಾವಿರಾರು ಭಾರತೀಯ ಯುವಕರಿಗೂ ಭಾರೀ ಆಘಾತ ನೀಡಿದ್ದಾರೆ. ಹೊಸ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ ಬಳಿಕ, H-1B ವೀಸಾಗಳ ಶುಲ್ಕವನ್ನು ಗಗನಕ್ಕೇರಿಸಲಾಗಿದೆ. “ಅಮೆರಿಕನ್ ಕಾರ್ಮಿಕರ ಹಿತಾಸ್ಕ್ತಿ ಕಾಪಾಡುವುದು” ಎನ್ನುವ ಹೆಸರಿನಲ್ಲಿ ತರುತ್ತಿರುವ ಈ ಬದಲಾವಣೆ, ವಾಸ್ತವದಲ್ಲಿ ಭಾರತೀಯ ಉದ್ಯೋಗಿಗಳಿಗೆ ದೊಡ್ಡ ಹೊರೆ ತಂದಿದೆ. ಈಗಾಗಲೇ ಗ್ರೀನ್ ಕಾರ್ಡ್ ಪಡೆಯಲು ದಶಕಗಳ ಕಾಲ ಕಾಯಬೇಕಾಗಿರುವ ಪರಿಸ್ಥಿತಿಯಲ್ಲಿ, ಪ್ರತಿ ಬಾರಿ ವೀಸಾ ನವೀಕರಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿರುವುದು ಆತಂಕ ಹುಟ್ಟಿಸಿದೆ.
ಟ್ರಂಪ್ ಪ್ರಕಟಿಸಿದ ಹೊಸ ನಿಯಮದ ಪ್ರಕಾರ, ವೀಸಾ ಅರ್ಜಿಗೆ ಈಗ 1 ಲಕ್ಷ ಡಾಲರ್ (ಸುಮಾರು ₹88 ಲಕ್ಷ) ಪಾವತಿಸಬೇಕಾಗಿದೆ. ಇದು ಕೇವಲ ಉದ್ಯೋಗಿಗಳಿಗೆ ಮಾತ್ರವಲ್ಲ, ಭಾರತೀಯ ಐಟಿ ಕಂಪನಿಗಳಿಗೆಲೂ ದೊಡ್ಡ ಹೊರೆ. ಏಕೆಂದರೆ ಇಂತಹ ನೌಕರರನ್ನು ಅಮೆರಿಕದಲ್ಲಿ ನೇಮಕ ಮಾಡಿಕೊಳ್ಳುವ ಪ್ರತೀ ಕಂಪನಿಗೂ ಈ ಹೆಚ್ಚುವರಿ ವೆಚ್ಚವನ್ನು ಹೊತ್ತುಕೊಳ್ಳಬೇಕಾಗಿದೆ. ಇದರ ಪರಿಣಾಮವಾಗಿ ಇನ್ಫೋಸಿಸ್ ಮತ್ತು ವಿಪ್ರೋ ಮೊದಲಾದ ದೈತ್ಯ ಕಂಪನಿಗಳ ಷೇರುಗಳು ಅಮೆರಿಕ ಮಾರುಕಟ್ಟೆಯಲ್ಲಿ ತಕ್ಷಣವೇ ಕುಸಿದಿವೆ. ಹೂಡಿಕೆದಾರರಲ್ಲಿ ಆತಂಕ ಹೆಚ್ಚಿರುವುದು ಸಹಜ.
ಅಲ್ಲದೆ, ಈಗಾಗಲೇ ಅಮೆರಿಕದಲ್ಲಿರುವ H-1B ಮತ್ತು H-4 ವೀಸಾ ಹೊಂದಿರುವವರಿಗೆ ಕಂಪನಿಗಳು ಎಚ್ಚರಿಕೆ ನೀಡಿವೆ. ವಿದೇಶ ಪ್ರವಾಸ ಮಾಡದಂತೆ ಸೂಚನೆ ನೀಡಿ, ದೇಶದಲ್ಲಿಯೇ ಉಳಿಯುವಂತೆ ಸಲಹೆ ನೀಡಲಾಗಿದೆ. ಏಕೆಂದರೆ ಈಗ ಹೊರಹೋಗಿದರೆ, ಮರುಪ್ರವೇಶ ನಿರಾಕರಣೆಯಾಗುವ ಭೀತಿ ಇದೆ. ಈ ಆದೇಶವು ಸೆಪ್ಟೆಂಬರ್ 21, 2025ರಿಂದ ಜಾರಿಯಾಗಲಿದ್ದು, ಆ ದಿನಾಂಕದ ನಂತರ ಅಮೆರಿಕ ಪ್ರವೇಶಿಸಲು ಬಯಸುವ ಎಲ್ಲರಿಗೂ ಅನ್ವಯವಾಗಲಿದೆ.
ತಜ್ಞರ ಅಭಿಪ್ರಾಯದಲ್ಲಿ, ಟ್ರಂಪ್ ಅವರ ಈ ನಿರ್ಧಾರದಿಂದ ಭಾರತೀಯ ಐಟಿ ಉದ್ಯಮದ ಬೆಳವಣಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕಠಿಣವಾಗಿದ್ದ ವೀಸಾ ಪ್ರಕ್ರಿಯೆ ಇನ್ನಷ್ಟು ಗೊಂದಲದಿಂದ ಕೂಡಿದ್ದು, ಅಮೆರಿಕದಲ್ಲಿ ಕೆಲಸ ಮಾಡುವ ಕನಸಿರುವ ಸಾವಿರಾರು ಭಾರತೀಯ ಯುವಕರ ಭವಿಷ್ಯ ಪ್ರಶ್ನಾರ್ಹವಾಗಿದೆ. ಉದ್ಯೋಗಿಗಳಿಗೆ ಮಾತ್ರವಲ್ಲದೆ, ಕಂಪನಿಗಳಿಗೂ ಈ ಹೆಚ್ಚುವರಿ ಹೊರೆ ದೊಡ್ಡ ಸವಾಲಾಗಿ ಪರಿಣಮಿಸಿದೆ.