)
Pakistan: ಸಾಲದ ಗಂಭೀರ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತೊಂದು ದೊಡ್ಡ ನೆರವು ಘೋಷಿಸಿದೆ. IMF ಮಂಡಳಿಯು ಪಾಕಿಸ್ತಾನಕ್ಕೆ ಸುಮಾರು $1.2 ಬಿಲಿಯನ್ ಹೊಸ ಸಾಲ ನೀಡಲು ಒಪ್ಪಿಗೆ ನೀಡಿದ್ದು, ಇದರ ಮೂಲಕ ದೇಶದ ಕುಸಿತಗೊಳ್ಳುತ್ತಿರುವ ಆರ್ಥಿಕತೆಯನ್ನು ಸ್ವಲ್ಪ ಮಟ್ಟಿಗೆ ಬಲಪಡಿಸುವ ನಿರೀಕ್ಷೆ ಇದೆ. ಈ ಮೊತ್ತ ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಹೆಚ್ಚಿಸಲು ಸಹಾಯಕವಾಗಲಿದೆ.
ಈ ಹಣ ಬಿಡುಗಡೆಗೊಂಡರೆ, ಪಾಕಿಸ್ತಾನಕ್ಕೆ ತಾತ್ಕಾಲಿಕವಾಗಿ ನಿಟ್ಟುಸಿರು ಸಿಗಲಿದೆ. IMF ಕಾರ್ಯಕ್ರಮದಡಿ ಪಾಕಿಸ್ತಾನ ಇನ್ನೂ ಟ್ರ್ಯಾಕ್ನಲ್ಲಿರುವುದಾಗಿ ಮಂಡಳಿಯು ತಿಳಿಸಿದೆ. ಪ್ರಸ್ತುತ ನಡೆಯುತ್ತಿರುವ ಹಣದುಬ್ಬರ, ಡಾಲರ್ ಕೊರತೆ ಮತ್ತು ಆರ್ಥಿಕ ಕುಸಿತದಿಂದ ಪಾಕ್ ಸರ್ಕಾರ ತೀವ್ರ ಒತ್ತಡದಲ್ಲಿದೆ. ಆದ್ದರಿಂದ ಈ ನೆರವು ಪಾಕಿಸ್ತಾನಕ್ಕೆ ಮಹತ್ವದ್ದಾಗಿದೆ.
ಆದಾಗ್ಯೂ, IMF ಈ ಮೊತ್ತ ನೀಡಲು ಕಠಿಣ ಷರತ್ತುಗಳನ್ನು ವಿಧಿಸಿದೆ. ತೆರಿಗೆ ಸಂಗ್ರಹಣೆಯನ್ನು ಹೆಚ್ಚಿಸುವುದು, ಸರ್ಕಾರದ ಕಂಪನಿಗಳನ್ನು ವೇಗದಲ್ಲಿ ಖಾಸಗೀಕರಣಗೊಳಿಸುವುದು ಮತ್ತು ಆರ್ಥಿಕ ಕೊರತೆಯನ್ನು ಕಡಿಮೆ ಮಾಡಲು ಬಲವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು IMF ಪಾಕಿಸ್ತಾನಕ್ಕೆ ಸೂಚಿಸಿದೆ. ಖಾಸಗಿ ವಲಯದ ಸಹಾಯದಿಂದ ಸುಧಾರಣೆಗಳನ್ನು ವೇಗಗೊಳಿಸುವುದು IMF ನ ಪ್ರಮುಖ ಒತ್ತಡವಾಗಿದೆ.
ಈ ಸಾಲದಲ್ಲಿ $7 ಬಿಲಿಯನ್ ಪ್ಯಾಕೇಜ್ನಿಂದ $1 ಬಿಲಿಯನ್ ಹಾಗೂ ಸ್ಥಿರತೆ–ಸುಸ್ಥಿರತೆ ನಿಧಿಯಿಂದ $200 ಮಿಲಿಯನ್ ಒಳಗೊಂಡಿವೆ. ಇಂದಿನವರೆಗೆ ಪಾಕಿಸ್ತಾನವು ಈ ಎರಡು ಕಾರ್ಯಕ್ರಮಗಳಡಿಯಲ್ಲಿ $3.3 ಬಿಲಿಯನ್ ಪಡೆದುಕೊಂಡಿದೆ. ಹಣದುಬ್ಬರ ಕಡಿಮೆಯಾಗುವುದು ಮತ್ತು ಮೀಸಲು ಹೆಚ್ಚಾಗುವುದು IMFಗೆ ಪಾಕಿಸ್ತಾನದ ಪ್ರಗತಿಯನ್ನು ತೋರಿಸಿದ್ದು, ಇದರಿಂದ ಸಾಲ ಬಿಡುಗಡೆ ಸುಲಭವಾಯಿತು.
ಆದರೆ ಅಚ್ಚರಿಯ ಸಂಗತಿ ಎಂದರೆ—ಸಾಲಕ್ಕಾಗಿ ಪಾಕಿಸ್ತಾನ ಇದೀಗ ತನ್ನ ವಿಮಾನ ನಿಲ್ದಾಣವನ್ನೇ ಅಡವಿಟ್ಟಿದೆ. IMF ಒತ್ತಡದಿಂದಾಗಿ ಪಾಕಿಸ್ತಾನ ತನ್ನ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (PIA) ನಲ್ಲಿ ಬಹುಪಾಲು ಮಾರಾಟಕ್ಕೆ ತಯಾರಾಗಿದೆ. ಡಿಸೆಂಬರ್ 23 ರಂದು ಬಿಡ್ಡಿಂಗ್ ನಡೆಯಲಿದ್ದು, ಫೌಜಿ ಫರ್ಟಿಲೈಜರ್, ಲಕ್ಕಿ ಸಿಮೆಂಟ್, ಆರಿಫ್ ಹಬೀಬ್ ಮತ್ತು ಏರ್ಬ್ಲೂ ಲಿಮಿಟೆಡ್ ಕಂಪನಿಗಳು ಹರಾಜಿನಲ್ಲಿ ಇದ್ದಾರೆ.
ಕಳೆದ ವರ್ಷ ಪಾವತಿ ಸಮತೋಲನ ಬಿಕ್ಕಟ್ಟಿನಿಂದ ಪಾಕಿಸ್ತಾನ ಆರ್ಥಿಕತೆ ಕುಸಿತದ ಅಂಚಿಗೆ ತಲುಪಿತ್ತು. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿ, ಡಾಲರ್ ಮೀಸಲು ಶೂನ್ಯವಾಗುವ ಪರಿಸ್ಥಿತಿ ಉಂಟಾಯಿತು. ಈ ಹಿನ್ನೆಲೆ IMF ಕಾರ್ಯಕ್ರಮವು ಪಾಕಿಸ್ತಾನವನ್ನು ಸಂಪೂರ್ಣ ಕುಸಿತದಿಂದ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗಿನ ಹೊಸ ಸಾಲ ಸಹ ಪಾಕಿಸ್ತಾನದ ಆರ್ಥಿಕತೆಯ ಸ್ಥಿರತೆಗೆ ತಾತ್ಕಾಲಿಕವಾಗಿಯಾದರೂ ಬೆಂಬಲ ನೀಡಲಿದೆ.