)
Mohammed Nizamuddin Shot Dead in US: ರೂಮ್ಮೇಟ್ ಜೊತೆಗಿನ ಜಗಳವು ಹಿಂಸಾತ್ಮಕ ರೂಪಕ್ಕೆ ತಿರುಗಿ ದುರಂತದಲ್ಲಿ ತೆಲಂಗಾಣದ ಮೆಹಬೂಬ್ನಗರದ 30 ವರ್ಷದ ಸಾಫ್ಟ್ವೇರ್ ವೃತ್ತಿಪರರೊಬ್ಬರು ಅಮೆರಿಕದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ ನಡೆದಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಭಾರತೀಯ ಟೆಕ್ಕಿಯೊಬ್ಬ ತನ್ನ ರೂಮ್ಮೇಟ್ಗೆ ಚಾಕುವಿನಿಂದ ಇರಿದ ನಂತರ ಪೊಲೀಸರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 3 ರಂದು ನಿಜಾಮುದ್ದೀನ್ ತನ್ನ ರೂಮ್ಮೇಟ್ ಜೊತೆ ಜಗಳವಾಡಿದ ನಂತರ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ ಕಾರಣವಾದ ನಿಖರವಾದ ಸಂದರ್ಭಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಘಟನೆಯ ಸಮಯದಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 3 ರಂದು ತೆಲಂಗಾಣದ ಮೆಹಬೂಬ್ನಗರದ ಮೊಹಮ್ಮದ್ ನಿಜಾಮುದ್ದೀನ್ ಅವರ ಸಾಂತಾ ಕ್ಲಾರಾದಲ್ಲಿರುವ ಅವರ ನಿವಾಸದಲ್ಲಿ ಚಾಕು ಹಿಡಿದಿರುವುದನ್ನು ಕಂಡು ಅವರನ್ನು ಗುಂಡು ಹಾರಿಸಲಾಯಿತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತೀವ್ರ ಗಾಯಗಳಿಂದ ಬಳಲುತ್ತಿದ್ದ ಅವರ ರೂಮ್ಮೇಟ್ ಅನ್ನು ಸಹ ಅವರು ಬಂಧಿಸಿದ್ದಾರೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಮನೆಯಲ್ಲಿ ರೂಮ್ಮೇಟ್ಗಳ ನಡುವೆ ಆರಂಭವಾಗಿದ್ದ ಜಗಳ ಹಿಂಸಾತ್ಮಕ ರೂಪ ತಾಳಿದ್ದು, ಮನೆಯೊಳಗೆ ಇರಿತದ ಘಟನೆಯ ಕುರಿತು 911 ಗೆ ಬಂದ ಕರೆಗೆ ಪ್ರತಿಕ್ರಿಯಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ನಿಜಾಮುದ್ದೀನ್ ಮತ್ತು ಅವರ ರೂಮ್ಮೇಟ್ ನಡುವಿನ ವಾಗ್ವಾದವು ಉಲ್ಬಣಗೊಂಡು, ದಾಳಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಗುಂಡು ಹಾರಿಸಲಾಯಿತು ಎಂದು ಹೇಳಲಾಗಿದೆ. ಬಳಿಕ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ನಿಜಾಮುದ್ದೀನ್ ಮೃತ ಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಬಂಧಿತನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಪೋಲಿಸರು ಮಾಹಿತಿ ಹಂಚಿಕೊಂಡಿದ್ದಾರೆ.
ಪೊಲೀಸರು ಗುಂಡು ಹಾರಿಸುವ ಮೊದಲು ನಿಜಾಮುದ್ದೀನ್ ಸ್ವತಃ ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದ್ದರು. ಆದಾಗ್ಯೂ, ಈ ಹತ್ಯೆ ನಡೆದಿದೆ. ಜನಾಂಗೀಯ ತಾರತಮ್ಯವೇ ತಮ್ಮ ಮಗನ ಸಾವಿಗೆ ಕಾರಣ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ನಿಜಾಮುದ್ದೀನ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ನಿಜಾಮುದ್ದೀನ್ ಹಿನ್ನಲೆ:
ಫ್ಲೋರಿಡಾ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ನಿಜಾಮುದ್ದೀನ್ ಬಳಿಕ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿರುವ ಟೆಕ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಶಾಂತ ಮತ್ತು ಧಾರ್ಮಿಕ ವ್ಯಕ್ತಿಯಾಗಿದ್ದ ನಿಜಾಮುದ್ದೀನ್ ಅವರಿಗೆ ಜನಾಂಗೀಯ ಕಿರುಕುಳ, ವೇತನ ವಂಚನೆ ಮಾಡಲಾಗಿದ್ದು, ವಿನಾಕಾರಣ ಕೆಲಸದಿಂದ ವಜಾಗೊಳಿಸಲಾದ ಬಗ್ಗೆ ದೂರುಗಳನ್ನು ಸಾರ್ವಜನಿಕವಾಗಿ ಎತ್ತಿದ್ದರು. ಅಲ್ಲದೆ, "ನಾನು ಜನಾಂಗೀಯ ದ್ವೇಷ, ಜನಾಂಗೀಯ ತಾರತಮ್ಯ, ಜನಾಂಗೀಯ ಕಿರುಕುಳ, ಚಿತ್ರಹಿಂಸೆ, ವೇತನ ವಂಚನೆ, ತಪ್ಪಾದ ವಜಾ ಮತ್ತು ನ್ಯಾಯಕ್ಕೆ ಅಡ್ಡಿಪಡಿಸುವಿಕೆಗೆ ಬಲಿಯಾಗಿದ್ದೇನೆ" ಎಂದು ಬರೆದ ನಿಜಾಮುದ್ದೀನ್ ಅವರ ಲಿಂಕ್ಡ್ಇನ್ ಪೋಸ್ಟ್ ಅನ್ನು ಅವರ ಕುಟುಂಬವು ಎತ್ತಿ ತೋರಿಸಿದೆ.
ಯುಎಸ್ ಪೊಲೀಸರ ಗುಂಡೇಟಿಗೆ ಭಾರತೀಯ ಟೆಕ್ಕಿ ಬಲಿಯಾಗಿರುವ ಘಟನೆಗೆ ಸಂಬಂಧಿಸಿದಂತೆ, ಸಾಂತಾ ಕ್ಲಾರಾ ಕೌಂಟಿ ಜಿಲ್ಲಾ ವಕೀಲರ ಕಚೇರಿ ಮತ್ತು ಸಾಂತಾ ಕ್ಲಾರಾ ಪೊಲೀಸ್ ಇಲಾಖೆ ಜಂಟಿ ತನಿಖೆ ನಡೆಸುತ್ತಿವೆ.
ಮಗನ ಪಾರ್ಥೀವ ಶರೀರವನ್ನು ತಾಯ್ನಾಡಿಗೆ ತರಲು ಮನವಿ:
ಔಪಚಾರಿಕತೆಗಾಗಿ ಸಾಂತಾ ಕ್ಲಾರಾದ ಆಸ್ಪತ್ರೆಯಲ್ಲಿ ಇರಿಸಲಾಗಿರುವ ನಿಜಾಮುದ್ದೀನ್ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಅವರ ಕುಟುಂಬಸ್ಥರು ವಿದೇಶಾಂಗ ಸಚಿವಾಲಯದ (MEA) ಸಹಾಯವನ್ನೂ ಕೋರಿದ್ದಾರೆ. ನಿಜಾಮುದ್ದೀನ್ ಅವರ ತಂದೆ ಮೊಹಮ್ಮದ್ ಹಸ್ನುದ್ದೀನ್ ಅವರನ್ನು ಭೇಟಿಯಾದ ಮಜ್ಲಿಸ್ ಬಚಾವೋ ತೆಹ್ರೀಕ್ ವಕ್ತಾರ ಅಮ್ಜೇದ್ ಉಲ್ಲಾ ಖಾನ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಾನ್ಸುಲೇಟ್ ಜನರಲ್ ಅವರನ್ನು ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಮತ್ತು ಸ್ವದೇಶಕ್ಕೆ ಮರಳುವಿಕೆ ಮತ್ತು ಸಂಬಂಧಿತ ಔಪಚಾರಿಕತೆಗಳಿಗೆ ಸಹಾಯ ಮಾಡುವಂತೆ ಒತ್ತಾಯಿಸಿದ್ದಾರೆ.