)
Philippines Earthquake: ಫಿಲಿಪೈನ್ಸ್ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ 6.7 ತೀವ್ರತೆಯ ಪ್ರಭಲ ಭೂಕಂಪವು ಭಾರೀ ವಿನಾಶವನ್ನುಂಟುಮಾಡಿದೆ. ಈ ದುರಂತದಲ್ಲಿ 31ಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ. ಭೂಕಂಪದಿಂದ ಚರ್ಚ್ಗೆ ಹಾನಿಯಾಗಿದ್ದು, ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಬಂದ್ ಆಗಿದೆ. ಭೂಕಂಪದ ಕೇಂದ್ರಬಿಂದು ಸೆಬು ಪ್ರಾಂತ್ಯದ ಬೊಗೊ ನಗರದಿಂದ 17 ಕಿಲೋಮೀಟರ್ ಈಶಾನ್ಯಕ್ಕೆ ಇತ್ತು. ಚರ್ಚ್ ಇರುವ ಸೆಬು ಪ್ರಾಂತ್ಯದ ಡಾನ್ಬಂಟಾಯನ್ ಪಟ್ಟಣದಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ.
ಭಯಭೀತರಾಗಿ ಮನೆಯಿಂದ ಹೊರಗೆ ಓಡಿದ ಜನರು!!
ಫಿಲಿಪೈನ್ಸ್ ವಿಶ್ವದ ಅತ್ಯಂತ ವಿಪತ್ತು ಪೀಡಿತ ದೇಶಗಳಲ್ಲಿ ಒಂದಾಗಿದೆ. ಇದು ಪೆಸಿಫಿಕ್ ಮಹಾಸಾಗರದ "ರಿಂಗ್ ಆಫ್ ಫೈರ್" ಉದ್ದಕ್ಕೂ ಇದೆ. ಇದು ಭೂಕಂಪನ ದೋಷ ರೇಖೆಯಾಗಿದ್ದು, ಪ್ರತಿ ವರ್ಷ ಟೈಫೂನ್ ಮತ್ತು ಚಂಡಮಾರುತಗಳಿಗೆ ತುತ್ತಾಗುತ್ತಿದೆ. ಭೂಕಂಪ ಎಷ್ಟು ಪ್ರಬಲವಾಗಿತ್ತೆಂದರೆ ಭಯಭೀತರಾದ ನಿವಾಸಿಗಳು ತಮ್ಮ ಮನೆಗಳಿಂದ ಬೀದಿಗಳಿಗೆ ಓಡಿಬಂದರು.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಸುಮಾರು 90,000 ಜನಸಂಖ್ಯೆಯನ್ನ ಹೊಂದಿರುವ ಸೆಬು ಪ್ರಾಂತ್ಯದ ಕರಾವಳಿ ನಗರವಾದ ಬೊಗೊದಲ್ಲಿ ಕನಿಷ್ಠ 14 ನಿವಾಸಿಗಳು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ರೆಕ್ಸ್ ಯಾಗೋಟ್ ತಿಳಿಸಿದ್ದಾರೆ. ಬೊಗೊದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅವರು ತಿಳಿಸಿದ್ದಾರೆ. ಭೂಕುಸಿತ ಮತ್ತು ಬಂಡೆಕುಸಿತಗಳಿಂದ ಹಾನಿಗೊಳಗಾದ ಪರ್ವತ ಹಳ್ಳಿಗೆ ಯಂತ್ರೋಪಕರಣಗಳನ್ನ ಸಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
"ಅಪಾಯದ ಕಾರಣ ಬೊಗೊ ಪ್ರದೇಶದಲ್ಲಿ ಚಲಿಸುವುದು ಕಷ್ಟಕರವಾಗಿದೆ" ಎಂದು ಮತ್ತೊಬ್ಬ ಅಧಿಕಾರಿ ಗ್ಲೆನ್ ಉರ್ಸಲ್ ಹೇಳಿದ್ದಾರೆ. ಗಾಯಗೊಂಡವರಲ್ಲಿ ಕೆಲವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ನಗರದ ವಿಪತ್ತು ಕಚೇರಿಯ ಮುಖ್ಯಸ್ಥೆ ಗೆಮ್ಮಾ ವಿಲ್ಲಾಮೋರ್ ಮಾತನಾಡಿ, ಬೊಗೊ ಬಳಿಯ ಮೆಡೆಲಿನ್ ನಗರದಲ್ಲಿ ಕನಿಷ್ಠ 12 ನಿವಾಸಿಗಳು ಸಾವನ್ನಪ್ಪಿದ್ದಾರೆ. ಕೆಲವರು ನಿದ್ರಿಸುತ್ತಿದ್ದಾಗ ಮನೆಗಳ ಛಾವಣಿಗಳು ಮತ್ತು ಗೋಡೆಗಳು ಕುಸಿದು ಸಾವನ್ನಪ್ಪಿದ್ದಾರೆ. ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು, ಫಿಲಿಪೈನ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆಯು ಸೆಬು, ಹತ್ತಿರದ ಲೇಟ್ ಮತ್ತು ಬಿಲಿರಾನ್ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಿಂದ ದೂರವಿರಲು ಜನರಿಗೆ ಸಲಹೆ ನೀಡಿದೆ.
ಭೂಕಂಪಕ್ಕೂ ಮುನ್ನ ಬಿರುಗಾಳಿಯಿಂದ ಅಪಾರ ಹಾನಿ
ಭೂಕಂಪ ಸಂಭವಿಸಿದಾಗ ಸೆಬು ಮತ್ತು ಇತರ ಫಿಲಿಪೈನ್ಸ್ ಪ್ರಾಂತ್ಯಗಳು ಟೈಫೂನ್ ಬುವಾಲೋಯ್ನಿಂದ ಚೇತರಿಸಿಕೊಳ್ಳುವ ಹಂತದಲ್ಲಿದ್ದವು. ಈ ಚಂಡಮಾರುತದಿಂದ ಫಿಲಿಪೈನ್ಸ್ನಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದರು, ಅವರಲ್ಲಿ ಹೆಚ್ಚಿನವರು ಮರಗಳು ಬಿದ್ದು ಸಾವನ್ನಪ್ಪಿದರು. ಚಂಡಮಾರುತವು ಹಲವಾರು ನಗರಗಳು ಮತ್ತು ಪಟ್ಟಣಗಳಿಗೆ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಿದೆ. ಪರಿಣಾಮ ಸಾವಿರಾರು ಜನರು ತಮ್ಮ ಮನೆಗಳನ್ನ ಸ್ಥಳಾಂತರಿಸಬೇಕಾಯಿತು.