ಪಾಕಿಸ್ತಾನದಲ್ಲಿ ಪೋಲಿಯೊ ಅಸ್ತಿತ್ವ ನಾಚಿಕೆಗೇಡಿನ ಸಂಗತಿ

ತಾಯಂದಿರು, ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕಿಸದಿದ್ದರೆ ಆರೋಗ್ಯ ಕಾರ್ಯಕರ್ತರ ಬಳಿಗೆ ಹೋಗಿ ಅವರ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ನಾನು ವಿನಂತಿಸುತ್ತೇನೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

Updated: Dec 14, 2019 , 04:56 PM IST
ಪಾಕಿಸ್ತಾನದಲ್ಲಿ ಪೋಲಿಯೊ ಅಸ್ತಿತ್ವ ನಾಚಿಕೆಗೇಡಿನ ಸಂಗತಿ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೋಲಿಯೊ ಇನ್ನೂ ಅಸ್ತಿತ್ವದಲ್ಲಿದ್ದು, ಇದನ್ನು ನಾಚಿಕೆಗೇಡಿನ ಸಂಗತಿ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್(Imran Khan) ಬಣ್ಣಿಸಿದ್ದಾರೆ.

ದೇಶದ ಪೋಲಿಯೊ ಪ್ರಕರಣಗಳು ಇನ್ನೂ ಅಸ್ತಿತ್ವದಲ್ಲಿರುವ ಬಗ್ಗೆ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್,  ಪೋಲಿಯೊ(Polio) ಲಸಿಕೆ ಹಾಕಿಸಬೇಕಿರುವುದು ಕೇವಲ ತಮ್ಮ ಮಕ್ಕಳ ಆರೋಗ್ಯಕ್ಕಾಗಿ ಮಾತ್ರವಲ್ಲ, ರಾಷ್ಟ್ರದಿಂದಲೂ ಪೋಲಿಯೊ ಪಿಡುಗನ್ನು ಓಡಿಸುವಂತೆ ಪೋಷಕರಲ್ಲಿ ಮನವಿ ಮಾಡಿದ್ದಾರೆ.  

ಡಾನ್ ನ್ಯೂಸ್ ಪ್ರಕಾರ, ಶುಕ್ರವಾರ ಇಲ್ಲಿ ನಡೆದ ರಾಷ್ಟ್ರವ್ಯಾಪಿ ಪೋಲಿಯೊ ನಿರ್ಮೂಲನಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ, ಪೋಲಿಯೊ ಅಸ್ತಿತ್ವದಲ್ಲಿರುವ ವಿಶ್ವದ ಎರಡು ದೇಶಗಳಲ್ಲಿ ಪಾಕಿಸ್ತಾನವೂ ಒಂದು ಎಂದು ತಿಳಿಸಿದ ಪ್ರಧಾನಿ ಇಮ್ರಾನ್ ಖಾನ್, ಇದೊಂದು "ನಾಚಿಕೆಗೇಡಿನ" ಸಂಗತಿ ಎಂದು ಬಣ್ಣಿಸಿದರು.

"ತಾಯಂದಿರು, ಈವರೆಗೂ ನಿಮ್ಮ ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕಿಸದಿದ್ದರೆ ಆರೋಗ್ಯ ಕಾರ್ಯಕರ್ತರ ಬಳಿಗೆ ಹೋಗಿ ತಮ್ಮ ಮಕ್ಕಳಿಗೆ ಲಸಿಕೆ ಹಾಕುವಂತೆ" ಇಮ್ರಾನ್ ಖಾನ್ ಮನವಿ ಮಾಡಿದರು. ಈ ಅಭಿಯಾನದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 40 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುವುದು. "ಇದು ನಿಮ್ಮ ಮಕ್ಕಳಿಗೆ ಮಾತ್ರವಲ್ಲ, ನಮ್ಮ ದೇಶಕ್ಕೂ ಮುಖ್ಯವಾಗಿದೆ" ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಈಗ ದೇಶದ ಆರ್ಥಿಕತೆಯು ಸುಧಾರಿಸುತ್ತಿದೆ ಮತ್ತು ಸರ್ಕಾರವು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದೆ. ದೇಶವು ಪೋಲಿಯೊವನ್ನು ರಫ್ತು ಮಾಡುತ್ತಿದೆ ಎಂದು ಜನರು ನಂಬಲು ಪ್ರಾರಂಭಿಸಿದರೆ ಅದು ಪಾಕಿಸ್ತಾನಕ್ಕೆ ಕಳಂಕವಾಗಿದೆ ಎಂದು ಇಮ್ರಾನ್ ಖಾನ್ ತಿಳಿಸಿದರು.

2017 ರಲ್ಲಿ 8 ಮತ್ತು 2018 ರಲ್ಲಿ 12 ಇದ್ದ ಪೋಲಿಯೊ ಪ್ರಕರಣಗಳ ಸಂಖ್ಯೆ ಇಲ್ಲಿಯವರೆಗೆ, ದೇಶಾದ್ಯಂತ 98 ಕ್ಕೆ ತಲುಪಿದೆ ಎಂದು ತಿಳಿಸಿದ ಇಮ್ರಾನ್ ಖಾನ್ ದೇಶದಲ್ಲಿ ಪೋಲಿಯೊ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.