ಶ್ರೀಲಂಕಾ: ನೆರೆಯ ರಾಷ್ಟ್ರ ಶ್ರೀಲಂಕಾ(Shri Lanka Economic Crisis)ದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಕಳೆದ ಕೆಲ ದಿನಗಳಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅಲ್ಲಿನ ಜನರು ಬೀದಿಗಿಳಿದು ಸರ್ಕಾರವ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಶ್ರೀಲಂಕಾ ಸರ್ಕಾರದ ಸಚಿವ ಸಂಪುಟದ ಎಲ್ಲ 26 ಸದಸ್ಯರು ದಿಢೀರ್‌ ಆಗಿ ರಾಜೀನಾಮೆ ಸಲ್ಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸಚಿವ ಸಂಪುಟದ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದು, ಈ ಬಳಿಕ ಶಿಕ್ಷಣ ಸಚಿವ ದಿನೇಶ್ ಗುಣವರ್ಧನ್ (Education Minister Dinesh Gunawardena)ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. "ಸಚಿವ ಸಂಪುಟದ 26 ಸಚಿವರು ನಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿಗೆ ಸಲ್ಲಿಸಿದ್ದೇವೆ. ನಾವು ದೇಶದ ಸದ್ಯದ ಪರಿಸ್ಥಿತಿ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆ" ಎಂದು ಹೇಳಿದ್ದಾರೆ.  


ಇದನ್ನೂ ಓದಿ: Economic Crisis: ಈ ದೇಶದಲ್ಲಿ ಪೇಪರ್ ಪ್ರಿಂಟ್ ಮಾಡಲೂ ಇಲ್ಲ ಹಣ: ಲಕ್ಷಾಂತರ ಮಕ್ಕಳ ಭವಿಷ್ಯ ಕತ್ತಲಲ್ಲಿ!


ಇನ್ನು ಸಚಿವರ ರಾಜೀನಾಮೆ ಬೆನ್ನಲ್ಲೇ  ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್‌ನ ಗವರ್ನರ್ ಅಜಿತ್ ನಿವಾರ್ಡ್ ಕ್ಯಾಬ್ರಾಲ್ (Governor of the Central Bank of Sri Lanka Ajith Nivard Cabraal)ಸಹ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, "ಸಚಿವ ಸಂಪುಟದ ಸದಸ್ಯರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಇಂದು ನಾನು ಕೂಡ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್‌ನ ಗವರ್ನರ್‌ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಅಧ್ಯಕ್ಷ ಗೊಟಾಬಯ ರಾಜಪಕ್ಸ ಅವರಿಗೆ ನೀಡಿದ್ದೇನೆ" ಎಂದು ಹೇಳಿದ್ದಾರೆ.


ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಇದೀಗ ರಾಜಕೀಯ ಬಿಕ್ಕಟ್ಟನ್ನೂ ಎದುರಿಸುತ್ತಿದೆ ಎಂಬುವುದು ಇಲ್ಲಿ ತೋರುತ್ತಿದೆ. ಇನ್ನು ಸಚಿವರ ರಾಜೀನಾಮೆ ಬಳಿಕ ಶ್ರೀಲಂಕಾ ಅಧ್ಯಕ್ಷ ಗೊಟಾಬಯ ರಾಜಪಕ್ಸ (Gotabaya Rajapaksa) ಒಗ್ಗಟ್ಟಿನಿಂದ ಸಮಸ್ಯೆಯನ್ನು ಬಗೆಹರಿಸುವ ಎಂದು ಹೇಳಿದ್ದಾರೆ. 


ಇದನ್ನೂ ಓದಿ: Financial Crisis: ಈ ದೇಶದಲ್ಲಿ ಲೀಟರ್ ಪೆಟ್ರೋಲ್‌ಗೆ 303 ರೂ.!


"ಸದ್ಯ ಉಂಟಾಗಿರುವ ಬಿಕ್ಕಟ್ಟು ಹಲವಾರು ಆರ್ಥಿಕ ಮತ್ತು ಜಾಗತಿಕ ಅಂಶಗಳಿಂದಾಗಿ ಉಂಟಾಗಿದೆ. ಏಷ್ಯಾದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಿರುವ ನಾವು, ಇದನ್ನು ಪ್ರಜಾಪ್ರಭುತ್ವದ ಚೌಕಟ್ಟಿನ ಒಳಗೆ ಪರಿಹರಿಸಬೇಕಿದೆ. ಭವಿಷ್ಯದ ಪೀಳಿಗೆಯ ಪ್ರಯೋಜನಕ್ಕಾಗಿ ನಾವೆಲ್ಲರೂ ಒಟ್ಟಾಗಿ ರಾಷ್ಟ್ರೀಯ ಹಿತಾಸಕ್ತಿಯಿಂದ ಕೆಲಸ ಮಾಡಬೇಕಿದೆ" ಎಂದು ರಾಜಪಕ್ಸ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.


ಈ ಹಿಂದೆ ಅಧ್ಯಕ್ಷ ಗೊಟಾಬಯ ರಾಜಪಕ್ಸ ಅವರ ಮನೆ ಮುಂದೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಬಳಿಕ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆದೇಶ ಹೊರಡಿಸಿ 36 ಗಂಟೆಗಳ ಕಾಲ ಕರ್ಫ್ಯೂ ಹೇರಲಾಗಿತ್ತು.