)
Earthquake Tsunami Alert: ರಷ್ಯಾದ ಕಮ್ಚಾಟ್ಸ್ಕಿ ಪರ್ಯಾಯ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 8 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಷ್ಯಾದ ಪರ್ಯಾಯ ದ್ವೀಪಗಳಲ್ಲಿ ಮತ್ತು ಜಪಾನ್ ಕರಾವಳಿಯ ಕೆಲವು ಭಾಗಗಳಲ್ಲಿ ಮೂರು ಗಂಟೆಗಳ ಒಳಗೆ "ಅಪಾಯಕಾರಿ ಸುನಾಮಿ ಅಲೆಗಳು" ಏಳಬಹುದೆಂದು ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ಮಂಗಳವಾರ (ಸ್ಥಳೀಯ ಸಮಯ) ಎಚ್ಚರಿಕೆ ನೀಡಿದೆ.
ಭೂಕಂಪದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯೋನ್ಮುಖವಾಗಿರುವ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಸರ್ಕಾರವು, ರಷ್ಯಾದ ಪ್ರಾದೇಶಿಕ ಗವರ್ನರ್, ಆರಂಭಿಕ ವರದಿಗಳನ್ನು ಉಲ್ಲೇಖಿಸಿ ಭೂಕಂಪದದಿಂದ ಇದುವರೆಗೂ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ ಎಂದು ಮಾಹಿತಿ ನೀಡಿದೆ.
ಭೂಕಂಪದ ಬಳಿಕ ಸುನಾಮಿ ಎಚ್ಚರಿಕೆ:
0100 GMT ಸುಮಾರಿಗೆ 1 ಮೀಟರ್ ಎತ್ತರದವರೆಗಿನ ಸುನಾಮಿ ಜಪಾನ್ನ ದೊಡ್ಡ ಕರಾವಳಿ ಪ್ರದೇಶಗಳನ್ನು ತಲುಪಬಹುದು ಎಂದು ಜಪಾನಿನ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಅಮೆರಿಕದ ಹವಾಯಿಯಲ್ಲೂ ಕೂಡ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಮಂಗಳವಾರ ಮಧ್ಯಾಹ್ನ 01:33ರ ವೇಳೆಗೆ ಹವಾಯಿ ಸ್ಟ್ಯಾಂಡರ್ಡ್ ಸಮಯ (HST) ಈ ಎಚ್ಚರಿಕೆ ನೀಡಲಾಗಿತ್ತು.
ಅಲಾಸ್ಕಾ ಮೂಲದ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು ಅಲ್ಯೂಟಿಯನ್ ದ್ವೀಪಗಳು ಮತ್ತು ಕ್ಯಾಲಿಫೋರ್ನಿಯಾ, ಒರೆಗಾನ್ ಮತ್ತು ವಾಷಿಂಗ್ಟನ್ ಸೇರಿದಂತೆ ಯುಎಸ್ ಪಶ್ಚಿಮ ಕರಾವಳಿಯ ಕೆಲವು ಭಾಗಗಳಿಗೆ ಸುನಾಮಿ ಅಲರ್ಟ್ ನೀಡಿತ್ತು. ಇದು ಪ್ಯಾನ್ಹ್ಯಾಂಡಲ್ನ ಕೆಲವು ಭಾಗಗಳನ್ನು ಒಳಗೊಂಡಂತೆ ಅಲಾಸ್ಕಾದ ಕರಾವಳಿ ರೇಖೆಯ ವಿಶಾಲ ಪ್ರದೇಶವನ್ನು ಸಹ ಒಳಗೊಂಡಿದೆ.
ಪೆಸಿಫಿಕ್ ದ್ವೀಪಗಳ ಭಾಗವಾಗಿರುವ ಗುವಾಮ್ ಮತ್ತು ಇತರ ಮೈಕ್ರೋನೇಷಿಯನ್ ದ್ವೀಪಗಳಿಗೂ ಸಹ ಸುನಾಮಿ ಎಚ್ಚರಿಕೆ ಘೋಷಿಸಲಾಗಿದೆ.
ಪೆಸಿಫಿಕ್ ರಿಂಗ್ ಆಫ್ ಫೈರ್ ಉದ್ದಕ್ಕೂ ಹಬ್ಬಿರುವ ಕಮ್ಚಟ್ಕಾ ಮತ್ತು ರಷ್ಯಾದ ದೂರದ ಪೂರ್ವ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತಲೇ ಇರುತ್ತವೆ. ಈ ಪ್ರದೇಶವು ಭೂಕಂಪನ ಸಕ್ರಿಯ ವಲಯ ಎಂತಲೇ ಹೆಸರುವಾಸಿಯಾಗಿದೆ.