50 ವರ್ಷಗಳ ಕಾಲ ಒಮಾನ್‌ ಆಳಿದ ಸುಲ್ತಾನ್ ಕಬೂಸ್ ಇನ್ನಿಲ್ಲ

ಸುಮಾರು ಅರ್ಧ ಶತಮಾನದವರೆಗೆ ಒಮಾನ್ ಅನ್ನು ಆಳಿದ ಸುಲ್ತಾನ್ ಅವಿವಾಹಿತರಾಗಿದ್ದರು ಮತ್ತು ಉತ್ತರಾಧಿಕಾರಿ ಅಥವಾ ನಿಯೋಜಿತ ಉತ್ತರಾಧಿಕಾರಿ ಇರಲಿಲ್ಲ.

Updated: Jan 11, 2020 , 12:48 PM IST
50 ವರ್ಷಗಳ ಕಾಲ ಒಮಾನ್‌ ಆಳಿದ ಸುಲ್ತಾನ್ ಕಬೂಸ್ ಇನ್ನಿಲ್ಲ
File photo courtesy - Reuters

ಮಸ್ಕತ್: ಒಮಾನ್‌ನ ಸುಲ್ತಾನ್ ಕಬೂಸ್ ಬಿನ್ ಸಯೀದ್ ಅಲ್ ಸಯೀದ್ 79 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ಶನಿವಾರ ಮಾಹಿತಿ ನೀಡಿವೆ. ಕಬೂಸ್ ಅರಬ್ ಅನ್ನು ಹೆಚ್ಚು ಕಾಲದ ವರೆಗೆ ಆಳಿದೆ ಸುಲ್ತಾನರಾಗಿದ್ದರು. 

ಸುಲ್ತಾನ್ ಕಬೂಸ್ ನಿಧನದ ಹಿನ್ನೆಲೆಯಲ್ಲಿ "ರಾಯಲ್ ಕೋರ್ಟ್ ಆಫ್ ದಿವಾನ್ ಶೋಕಾಚರಣೆ ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಮೂರು ದಿನಗಳವರೆಗೆ ಅಧಿಕೃತ ರಜೆ ಘೋಷಿಸಿದೆ" ಎಂದು ಸರ್ಕಾರಿ ಟಿವಿ ಸಾರ್ವಜನಿಕ ಚಾನೆಲ್ ಉಲ್ಲೇಖಿಸಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ಮಾಧ್ಯಮಗಳ ಪ್ರಕಾರ, ಸುಮಾರು ಅರ್ಧ ಶತಮಾನದವರೆಗೆ ಒಮಾನ್ ಅನ್ನು ಆಳಿದ ಸುಲ್ತಾನ್ ಅವಿವಾಹಿತರಾಗಿದ್ದರು ಮತ್ತು ಉತ್ತರಾಧಿಕಾರಿ ಅಥವಾ ನಿಯೋಜಿತ ಉತ್ತರಾಧಿಕಾರಿ ಇರಲಿಲ್ಲ. ಬಿಬಿಸಿ ವರದಿಯ ಪ್ರಕಾರ, ಅವರು ಬೆಲ್ಜಿಯಂನಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯ ನಂತರ ಕಳೆದ ತಿಂಗಳು ಮನೆಗೆ ಮರಳಿದ್ದರು.

1970 ರಲ್ಲಿ 29 ನೇ ವಯಸ್ಸಿನಲ್ಲಿ ಸುಲ್ತಾನ್ ಕಬೂಸ್, ಬ್ರಿಟನ್ ಸಹಯೋಗದೊಂದಿಗೆ ಅಹಿಂಸಾತ್ಮಕವಾಗಿ ತನ್ನ ತಂದೆಯನ್ನು ಕೆಳಗಿಳಿಸಿದರು. ಅದರ ನಂತರ ಅವರು ದೇಶದ ತೈಲ ಸಂಪತ್ತನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ಬಳಸಿದರು.

ಸುಲ್ತಾನರ ಮೂಲ ಹೇಳಿಕೆಯ ಪ್ರಕಾರ, 50 ಪುರುಷರೊಂದಿಗೆ ರಾಯಲ್ ಫ್ಯಾಮಿಲಿ ಕೌನ್ಸಿಲ್ ಸದಸ್ಯರು ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಮೂರು ದಿನಗಳಲ್ಲಿ ಹೊಸ ಸುಲ್ತಾನನನ್ನು ಆಯ್ಕೆ ಮಾಡಬೇಕು.

ಕುಟುಂಬವು ಒಪ್ಪದಿದ್ದರೆ, ರಕ್ಷಣಾ ಮಂಡಳಿಯ ಸದಸ್ಯರು ಮತ್ತು ಸುಪ್ರೀಂ ಕೋರ್ಟ್, ಸಲಹಾ ಮಂಡಳಿ ಮತ್ತು ರಾಜ್ಯ ಮಂಡಳಿಯ ಅಧ್ಯಕ್ಷರು ಮೊಹರು ಹೊದಿಕೆಯನ್ನು ತೆರೆಯುತ್ತಾರೆ. ಇದರಲ್ಲಿ ಸುಲ್ತಾನ್ ಕಬೂಸ್ ತನ್ನ ಆಯ್ಕೆಯ ಹೆಸರನ್ನು ರಹಸ್ಯವಾಗಿ ದಾಖಲಿಸಿದ್ದಾರೆ ಎನ್ನಲಾಗಿದೆ. ಇದರ ನಂತರ, ಅವರು ಆ ವ್ಯಕ್ತಿಯನ್ನು ಹೊಸ ಸುಲ್ತಾನರನ್ನಾಗಿ ನೇಮಿಸುತ್ತಾರೆ.

ಒಮಾನ್‌ನಲ್ಲಿ ಅತ್ಯುನ್ನತ ನಿರ್ಣಾಯಕ ಸುಲ್ತಾನ್ ಆಗಿರುತ್ತಾರೆ. ಅವರು ಪ್ರಧಾನ ಮಂತ್ರಿ, ಮಿಲಿಟರಿ ಪಡೆಗಳ ಸರ್ವೋಚ್ಚ ಕಮಾಂಡರ್ ಮತ್ತು ರಕ್ಷಣಾ, ಹಣಕಾಸು ಮತ್ತು ವಿದೇಶಾಂಗ ಸಚಿವಾಲಯಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ.