ಪಾಕಿಸ್ತಾನದಲ್ಲಿ ಎರಡನೇ ಮದುವೆಗೆ ಈ ಮಂಡಳಿಯ ಅನುಮತಿ ಕಡ್ಡಾಯ: ಹೈಕೋರ್ಟ್

ಕಾನೂನು ಅಧಿನಿಯಮ 1961 ರ ಪ್ರಕಾರ, ಯಾವುದೇ ಮುಸ್ಲಿಂ ವ್ಯಕ್ತಿಯು ಮೊದಲ ಹೆಂಡತಿ ಇರುವಾಗಲೇ ಮಧ್ಯಸ್ಥಿಕೆ ಮಂಡಳಿಯ ಲಿಖಿತ ಅನುಮತಿಯಿಲ್ಲದೆ ಎರಡನೇ ಮದುವೆಯಾಗಲು ಸಾಧ್ಯವಿಲ್ಲ.

Updated: Jun 25, 2019 , 03:17 PM IST
ಪಾಕಿಸ್ತಾನದಲ್ಲಿ ಎರಡನೇ ಮದುವೆಗೆ ಈ ಮಂಡಳಿಯ ಅನುಮತಿ ಕಡ್ಡಾಯ: ಹೈಕೋರ್ಟ್
Representational Image

ಇಸ್ಲಾಮಾಬಾದ್: ಮೊದಲ ಪತ್ನಿ ಅನುಮತಿ ನೀಡಿದ್ದರೂ ಮುಸ್ಲಿಂ ಪುರುಷರು ಎರಡನೇ ಮದುವೆಯಾಗಲು ಮಧ್ಯಸ್ಥಿಕೆ ಮಂಡಳಿಯ ಅನುಮತಿ ಪಡೆಯುವುದು ಕಡ್ಡಾಯ ಎಂದು ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಪಾಕಿಸ್ತಾನದಲ್ಲಿ ಎರಡನೇ ಮದುವೆಗೆ ಮಧ್ಯಸ್ಥಿಕೆ ಮಂಡಳಿ ಅನುಮತಿ ಕಡ್ಡಾಯ ಎಂದು ತೀರ್ಪು ನೀಡಿ ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಟಾರ್ ಮಿನ್ಹಲ್ಲಾ ಅವರು ಸೋಮವಾರ 12 ಪುಟಗಳ ಆದೇಶ ಹೊರಡಿಸಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿದೆ. ಆದೇಶದ ಅನ್ವಯ, ಪುರುಷರು ಎರಡನೇ ಮದುವೆಯಾಗುವ ಮೊದಲು ಮಧ್ಯಸ್ಥಿಕೆ ಮಂಡಳಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಒಬ್ಬ ವ್ಯಕ್ತಿಯು ತನ್ನ ಮೊದಲ ಹೆಂಡತಿ ಬದುಕಿರುವಾಗಲೇ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾಗಲು ಬಯಸಿದರೆ, ಆತ ಕಾನೂನಿನ ಪ್ರಕಾರ ಅಗತ್ಯ ಕಾರ್ಯವಿಧಾನ ಮತ್ತು ಷರತ್ತುಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಪಾಲಿಸದೇ ಇದ್ದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇಲ್ಲವೇ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಕಾನೂನು ಅಧಿನಿಯಮ 1961 ರ ಪ್ರಕಾರ, ಯಾವುದೇ ಮುಸ್ಲಿಂ ವ್ಯಕ್ತಿಯು ಮೊದಲ ಹೆಂಡತಿ ಇರುವಾಗಲೇ ಮಧ್ಯಸ್ಥಿಕೆ ಮಂಡಳಿಯ ಲಿಖಿತ ಅನುಮತಿಯಿಲ್ಲದೆ ಎರಡನೇ ಮದುವೆಯಾಗಲು ಸಾಧ್ಯವಿಲ್ಲ.

ಲಿಯಾಕತ್ ಅಲಿ ಮೀರ್ ಎಂಬ ವ್ಯಕ್ತಿಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಮೀರ್ 2011 ರಲ್ಲಿ ವಿವಾಹವಾಗಿದ್ದು, ಮಧ್ಯಸ್ಥಿಕೆ ಮಂಡಳಿ ಮತ್ತು ಮೊದಲ ಹೆಂಡತಿಯ ಅನುಮತಿಯಿಲ್ಲದೆ ಅವರು 2013 ರಲ್ಲಿ ಎರಡನೇ ವಿವಾಹವಾದರು.

1961 ರ ಮುಸ್ಲಿಂ ಕುಟುಂಬ ಸುಗ್ರೀವಾಜ್ಞೆಯಡಿ ಮಧ್ಯಸ್ಥಿಕೆ ಮಂಡಳಿಯ ಅನುಮತಿಯಿಲ್ಲದೆ ಎರಡನೇ ವಿವಾಹವಾದ ದಂಪತಿಗಳಿಗೆ ದಂಡ ಮತ್ತು ಶಿಕ್ಷೆ ವಿಧಿಸುವ ಬಗ್ಗೆ ನ್ಯಾಯಾಲಯ ಹೇಳಿದೆ.