)
Vietnam: ವಿಯೇಟ್ನಾಂ... ಇದು ಪ್ರವಾಸಿಗಳ ಸ್ವರ್ಗ. ಚಾರಣ, ನದಿಯಲ್ಲಿ ಪಯಣ, ಸಮುದ್ರ ಮಜ್ಜನ, ಸುರಂಗದೊಳಗೆ ತೆವಳಿಕೊಂಡು ಹೋಗುವ ಅನುಭವ ಪಡೆಯಲು ಹೋ ಚಿ ಮಿನ್ ಸಿಟಿ ಅದ್ಬುತ ತಾಣ. ಇಲ್ಲಿನ ವಾರ್ ಮ್ಯೂಸಿಯಂ ಗೆ ಹೋದರೆ ಕಣ್ಣಾಲಿಗಳು ತೇವವಾಗದೆ ಇರದು. ಐತಿಹಾಸಿಕ ಪ್ರಸಿದ್ದ ಹಾಗೂ ಪ್ರಕೃತಿ ಸೌಂದರ್ಯಗಳನ್ನ ನೋಡಿ ಬರಲು ವಿಯೆಟ್ ಜೆಟ್ ನ ಟ್ರಿಪ್ ಹೇಳಿ ಮಾಡಿಸಿದಂತಿದೆ.
ವಿಯೇಟ್ನಾಂ ಗೆ ಬೆಂಗಳೂರಿನಿಂದ ಕೇವಲ ನಾಲ್ಕುವರೆ ಗಂಟೆ ಪ್ರಯಾಣ. ಹೋ ಚಿ ಮಿನ್ ಸಿಟಿಗೆ ವಿಯೆಟ್ ಜೆಟ್ ಬೆಂಗಳೂರಿನಿಂದ ನೇರವಾಗಿ ವಾರಕ್ಕೆ ಮೂರು ದಿನ ಹಾರುತ್ತೆ. ತಿಂಗಳ ಮೊದಲೇ ಪ್ಲಾನ್ ಮಾಡಿಕೊಂಡ್ರೆ ಹೋಗಿ ಬರೋ ಚಾರ್ಜ್ ೨೦ ಸಾವಿರಕ್ಕೆ ಮುಗಿದುಹೋಗುತ್ತೆ. ಅಂದಹಾಗೆ ವಿಯೇಟ್ನಾಂ ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಂತ ವಾತಾವರಣವನ್ನ ಹೊಂದಿದೆ. ಒಂದೆಡೆ ಸಮುದ್ರ, ಇನ್ನೊಂದೆಡೆ ಗುಡ್ಡಗಾಡು, ನದಿ. ಐದು ಗಂಟೆಗಳ ಪ್ರಯಾಣದ ಬಳಿಕ ಹೋ ಚಿ ಮಿನ್ ಸಿಟಿ ಗೆ ನಾವು ಇಳಿದ್ರೆ, ಹೊ ಚಿ ಮಿನ್ಸ್ ಸಿಟಿಯಿಂದ, ವುಂಗ್ ಟಾವ್, ಕು ಚಿ ಟನಲ್, ಮೆಕಾಂಗ್ ಡೆಲ್ವಾ, ವಾರ್ ಮ್ಯೂಸಿಯಂ, ಸೈಗಾನ್ ನದಿ, ಬೆನ್ ಥಾನ್ ಮಾರ್ಕೆಟ್, ಮುಂತಾದ ಐತಿಹಾಸಿಕ ಪ್ರಸಿದ್ದಿಯ ಹಾಗೂ ಪ್ರಾಕೃತಿಕ ಅಚ್ಚರಿಯ ತಾಣಗಳನ್ನು ನೋಡಬಹುದು
ವಿಯೇಟ್ನಾಂಮಿಸ್ ನಿಜಕ್ಕೂ ವೀರರು, ಮಾತ್ರವಲ್ಲದೆ ಅತ್ಯಂತ ಚಾಣಾಕ್ಷರು, ಪ್ರಾಮಾಣಿಕ ಶ್ರಮಜೀವಿಗಳು. ಇವರು ತಮ್ಮ ದೇಶವನ್ನ ಕಟ್ಟಿಕೊಂಡಿರುವ ಕತೆಯೇ ಬಲು ರೋಚಕ. ಫ್ರೆಂಚ್, ಚೀನಾ ಮತ್ತು ಅಮೆರಿಕನ್ನರ ದಾಳಿಗಳಿಗೆ ತುತ್ತಾಗಿ ಯುದ್ಧ ನಡೆಸಿ ಸ್ವಾತಂತ್ರ್ಯ ಪಡೆದಿರುವ ನಾಡು ವಿಯೆಟ್ನಾಂ, 1975ರಲ್ಲಿ ಸ್ವತಂತ್ರವಾದ ನಂತರದಲ್ಲಿ ಅಭಿವೃದ್ಧಿಗೊಂಡ ರೀತಿಯೇ ಅದ್ಭುತ. ವಾರ್ ಮ್ಯೂಸಿಯಂ ಇವರ ಹೋರಾಟದ ಬದುಕನ್ನ ತೆರೆದಿಡುತ್ತೆ. ಕ್ರೌರ್ಯದ ಪರಮಾವಧಿ ತೋರುವ ಅಮೆರಿಕ ಏಜೆಂಟ್ ಆರೆಂಜ್ ಹೆಸರಲ್ಲಿ ರಾಸಾಯನಿಕ ಪ್ರಯೋಗ ನಡೆಸುತ್ತದೆ. ಪರಿಣಾಮವಾಗಿ ವಿಯೆಟ್ನಾಂ ಮುಂದಿನ ಹತ್ತಾರು ವರ್ಷ ನರಳುತ್ತದೆ. ಅಂಗವಿಕಲ ಮಕ್ಕಳು ಹುಟ್ಟುತ್ತವೆ. ಅಪರೂಪದ ಕಾಯಿಲೆಗಳು ಬಂದೆರಗುತ್ತವೆ. ಇದೆಲ್ಲದರ ನಡುವೆಯೂ ಸ್ವತಂತ್ರವಾದ ವಿಯೆಟ್ನಾಂ ಇದೀಗ ಸ್ವಾತಂತ್ರೋತ್ಸವದ ಸುವರ್ಣ ಸಂಭ್ರಮ ಪೂರೈಸಿದೆ. ಕಳೆದ ಏಪ್ರಿಲ್ ಮೂವತ್ತು ವಿಯೆಟ್ನಾಂಗೆ ಸ್ವಾತಂತ್ರ್ಯ ಬಂದು ಐವತ್ತು ವರ್ಷ.
ಉತ್ತರ ವಿಯೆಟ್ನಾಂನ ಹನೋಯ್, ಮಧ್ಯ ವಿಯೆಟ್ನಾಂ ನ ಡಾ ನಂಗ್ ಮತ್ತು ದಕ್ಷಿಣದ ಹೋ ಚಿ ಮಿನ್ ಪ್ರವಾಸಿಗರನ್ನು ಸೆಳೆಯುತ್ತದೆ. ಹದಿನೈದು ದಿನಗಳ ಪ್ಲಾನ್ ಇದ್ದಲ್ಲಿ ಆರಾಮಾಗಿ ಇಡೀ ವಿಯೆಟ್ನಾಂ ಸುತ್ತಿ ಬರಬಹುದು. ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಬರಬಹುದು. ಅಲ್ಲಲ್ಲಿ ಇಂಗ್ಲಿಷ್ ಅರ್ಥವಾಗುವ ಮಂದಿ ಸಿಕ್ಕರೂ ಬಹುತೇಕ ವಿಯೆಟ್ನಾಮಿ ಭಾಷೆಯೇ ಇಲ್ಲಿ ಪ್ರಧಾನ. ಸ್ಥಳೀಯರೊಂದಿಗೆ ವ್ಯವಹರಿಸಲು ಭಾಷೆ ತೊಡಕಾದರೂ ಭಾವ ಅದನ್ನು ನಿವಾರಿಸುತ್ತದೆ. ಸಿನ್ ಚೋವ್, ಕ್ಯಾಮ್ ಆನ್ ಎಂಬ ಎರಡು ಪದಗಳಿಂದಲೇ ಹತ್ತಿರವಾಗುವ ವಿಯೆಟ್ನಾಮಿಯರು ಅತಿಥಿ ದೇವೋಭವ ಎಂಬ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಕಾಸ್ಮಾಪಾಲಿಟನ್ ಸಂಸ್ಕೃತಿ ಮತ್ತು ಲೈಫ್ ಸ್ಟೈಲ್ ಹೊಂದಿರುವ ಸೈಗಾನ್ ಅಲಿಯಾಸ್ ಹೋ ಚಿ ಮಿನ್ಹ್ ಗಮನ ಸೆಳೆಯುವುದು ನಗರ ಸೌಂದರ್ಯದಿಂದ ಮತ್ತು ನೈಟ್ ಲೈಫ್ ನಿಂದ. ಡಬಲ್ ಡೆಕರ್ ಬಸ್ಸಿನಲ್ಲಿ ಸಿಟಿ ಟೂರ್ ಹೋದರೆ ಕೆಲವೇ ಗಂಟೆಗಳಲ್ಲಿ ಡ್ರೋನ್ ಕೋನದಲ್ಲಿ ಇಡೀ ಹೋಚಿ ಮಿನ್ಹ್ ನೋಡಬಹುದು. ಥೈಲ್ಯಾಂಡ್ ಬ್ಯಾಂಕಾಕ್ ನೆನಪಿಸುವ ರಾತ್ರಿ ಸೌಂದರ್ಯವೂ ಇಲ್ಲಿದೆ.
ನಮ್ಮ ದೇಶದಲ್ಲೂ ಫೋಸ್ಟ್ ಆಫೀಸ್ ಇದೆ. ಆದ್ರೆ ಅದು ಪ್ರವಾಸಿ ತಾಣವಲ್ಲ. ಪ್ರವಾಸಿಗರು ನೋಡುವಂತೆಯೂ ಇರೋದಿಲ್ಲ. ಆದ್ರೆ ವಿಯೇಟ್ನಾಮಿಸ್ ಹಾಗಲ್ಲ. 19ನೇ ಶತಮಾನದ ಕೊನೆಯಲ್ಲಿ ನಿರ್ಮಾಣವಾದ ಈ ಅಂಚೆ ಕಚೇರಿ ಈಗ ಪಾರಂಪರಿಕ ಕಟ್ಟಡ. ಇಲ್ಲಿಂದ ಸುಮ್ಮನೆ ಒಂದು ಪತ್ರ ಬರೆದು ತಂತಮ್ಮ ದೇಶಕ್ಕೆ ಪೋಸ್ಟ್ ಮಾಡಬಹುದು .ತಿಂಗಳೊಳಗಾಗಿ ಬಂದು ತಲುಪುತ್ತದೆ. ಪ್ರವಾಸಿಗರು ಆ ಕೆಲಸ ಮಾಡುತ್ತಾರೆ. ಒಂದು ಪತ್ರದ ಬೆಲೆ ಸುಮಾರು 200 ರೂಪಾಯಿ.
ಹೋಚಿಮಿನ್ಸ್ ಸಿಟಿಯಿಂದ ಒಂದು ಗಂಟೆ ಪ್ರಯಾಣ ಮಾಡಿದ್ರೆ ಮಾನವ ನಿರ್ಮಿತ ಟನಲ್ ಸಿಗುತ್ತೆ. ಕು ಚಿ ಟನಲ್ ಎಂದೇ ಇದು ಪ್ರಸಿದ್ದಿ. ಅಮೆರಿಕ ವಿರುದ್ಧ ವಿಯೆಟ್ನಾಮ್ ಹೋರಾಡಿದ ರೀತಿ ಮತ್ತು ಬಳಸಿದ ಪ್ಲಾನ್ ಗೊತ್ತಾಗಬೇಕು ಅಂದ್ರೆ ಕು ಚಿ ಸುರಂಗ ನೋಡಬೇಕು. ಹೋ ಚಿ ಮಿನ್ ಸಿಟಿಯಿಂದ ಐವತ್ತು ಕಿಮೀ ದೂರದಲ್ಲಿರುವ ಸುರಂಗಗಳು ಸುಮಾರು 200 ಕಿಮೀ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ ಎನ್ನುತ್ತದೆ ದಾಖಲೆ. ಸಾವಿರಾರು ಯೋಧರು ಸುರಂಗಗಳಲ್ಲಿ ತಂಗಿ ಅಮೆರಿಕ ಶತ್ರುಗಳನ್ನು ಮುಗಿಸಲು ತಂತ್ರಗಳನ್ನು ರೂಪಿಸುತ್ತಿದ್ದ ಕತೆಗಳು ನಿಜಕ್ಕೂ ರೋಮಾಂಚಕ. ಗಡ್ಡೆ ಗೆಣಸು ತಿಂದು ದಿನಗಟ್ಟಲೇ ಸುರಂಗದಲ್ಲೇ ಜೀವಿಸಿ, ಅಮೆರಿಕ ಹಾಕಿದ ಬಾಂಬ್ಗಳ ಕಬ್ಬಿಣವನ್ನೇ ಬಳಸಿ ಶಸ್ತ್ರಾಸ್ತ್ರ ತಯಾರಿಸಿಕೊಂಡ ಚಾಣಾಕ್ಷರು ಈ ವಿಯೆಟ್ನಾಮಿಗಳು. ಶ್ವಾನ ದಳವನ್ನು ಯಾಮಾರಿಸಲು ಪೆಪ್ಪರ್ ಸ್ಪ್ರೇ ಬಳಸಿದ ಕಥೆ ಕೇಳುತ್ತಿದ್ದರೆ ಮೈ ನವಿರೇಳುತ್ತದೆ. ಇಲ್ಲಿ ಸಾಹಸಿಗಳಿಗಾಗಿ ಎಕೆ-47 ರೈಫಲ್ ಪ್ರಯೋಗಿಸುವ ಶೂಟಿಂಗ್ ರೇಂಜ್ ಇದೆ. ಸಾವಿರ ರುಪಾಯಿಕ ಕೊಟ್ಟರೆ ಯೋಧರ ರೀತಿಯೇ ರೈಫಲ್ ಹಿಡಿದು ಶೂಟ್ ಮಾಡಬಹುದು. ಗುಂಡಿನ ಮೊರೆತ ಬಹಳ ದಿನ ಕಿವಿ ಕೊರೆಯುತ್ತದೆ. ಮಿಸ್ ಮಾಡಬಾರದ ಇನ್ನೊಂದು ಜಾಗವಿದು.
ಇನ್ನೊಂದು ಪ್ರಮುಖ ತಾಣ ಮೆಕಾಂಗ್ ನದಿ . ೪ ಸಾವಿರ ಕಿ.ಮಿ. ಉದ್ದದ ಈ ನದಿ, 5 ದೇಶ ಹಾದು ವಿಯೆಟ್ನಾಂ ಪ್ರವೇಶಿಸಿ ನಂತರ ಕವಲೊಡೆದು ಸಮುದ್ರ ಸೇರುತ್ತೆ. ತೆಂಗು ಮತ್ತು ಜೇನು ಕೃಷಿ ಇಲ್ಲಿನ ಪ್ರಮುಖ ಆಕರ್ಷಣೆ. ಇವೆಲ್ಲವೂ ಇಲ್ಲಿ ಪ್ರವಾಸೋದ್ಯಮದ ಆಕರ್ಷಣೆಯಾಗಿಸುತ್ತಾರೆ. ಮೆಕಾಂಗ್ ದಂಡೆಯ ಮೇಲೆ ಮೈ ಥೋ ಎಂಬ ಪ್ರದೇಶವಿದೆ. ಅಲ್ಲಿ ಪುಟ್ಟ ಪುಟ್ಟ ದ್ವೀಪಗಳಿವೆ. ಮೋಟಾರು ಬೋಟಿನಲ್ಲಿ ಆ ದ್ವೀಪಗಳಿಗೆ ತೆರಳಿದರೆ, ಜೇನು ಹಾಗೂ ಅದರ ಉಪ ಉತ್ಪನ್ನಗಳ ರುಚಿ ಸವಿಯುವ ಕೆಫೆ, ವಿಯೆಟ್ನಾಮೀಸ್ ಗಾಯನ, ವಿಶೇಷ ಹಣ್ಣುಗಳ ರುಚಿ ನೋಡುವ ಅವಕಾಶ, ಅಲ್ಲೇ ಇರುವ ಚಿಕ್ಕ ಕಾಲುವೆಗಳಲ್ಲಿ ದೋಣಿ ವಿಹಾರದ ಖುಷಿ. ಕೃಷಿ ಮತ್ತು ತೋಟಗಾರಿಕೆಯೂ ಪ್ರವಾಸೋದ್ಯಮವಾಗಬಹುದು ಎಂಬುದನ್ನು ವಿಯೆಟ್ನಾಂ ನಿಂದ ಕಲಿಯಬೇಕು. ಮೆಕಾಂಗ್ ಡೆಲ್ಟಾದ ಹಿನ್ನೀರಿನಲ್ಲಿ ಬೋಟಿಂಗ್ ಹೋಗುವ ಮೊದಲು ಒಂದು ಆಹಾರಧಾಮ ಸಿಗುತ್ತದೆ. ಬಗೆಬಗೆಯ ಹಣ್ಣುಗಳನ್ನು ತಿನ್ನಿಸಿ ವಿಯೆಟ್ನಾಮಿ ಸಂಗೀತ ಹಾಡಿ ಕಳಿಸುತ್ತಾರೆ. ಅಲ್ಲಿ ನಿಮಗೊಂದು ವಿಚಿತ್ರ ಕಾಣಸಿಗುತ್ತದೆ. ಅದೇ ಸ್ನೇಕ್ ವೈನ್. ಬಗೆಬಗೆಯ ಸೈಜಿನ ಬಾಟಲುಗಳಲ್ಲಿ ವಿಧವಿಧ ಜಾತಿಯ ಹಾವುಗಳನ್ನು ದ್ರವದೊಂದಿಗೆ ತುಂಬಿಸಿಟ್ಟಿದ್ದಾರೆ. ಅವ್ಯಾವುದೂ ಈಗ ಬದುಕಿಲ್ಲ. ಭತ್ತದಿಂದ ತಯಾರಿಸುವ ವೈನ್ ಒಳಗೆ ಹಾವುಗಳನ್ನು ಇಟ್ಟಿರುವುದ್ಯಾಕೆ ಅಂದರೆ ಅದೊಂದು ಬಗೆಯ ಔಷಧೀಯ ವೈನ್ ಅಂತೆ. ಹಾವಿನ ವಿಷ ಸೇರುವುದಿಲ್ಲವಾ ಎಂಬ ಪ್ರಶ್ನೆ ಕೇಳಿದರೆ ವಿಷ ತೆಗೆದು ವೈನ್ ನೊಳಗೆ ಮುಳುಗಿಸಿಡುತ್ತಾರೆ ಎಂಬ ಉತ್ತರ ಬಂತು. ವಿಷ ತೆಗೆದ ಹಾವು ಇವರಿಗೆ ಆಹಾರವೂ ಹೌದು ಔಷಧಿಯೂ ಹೌದು.
ವುಂಗ್ ತಾವ್ ಪಕ್ಕಾ ಕರಾವಳಿ. ಉತ್ತರ ಕನ್ನಡ ಜಿಲ್ಲೆಯ ಹವಾಮಾನದಂತಿರುವ ಇಲ್ಲಿ ಸೆಖೆಗೆ ಬೆವರು ಸುರಿಯುತ್ತದೆ. ಸುಮಾರು 140 ಚದರ ಕಿಮೀ. ವ್ಯಾಪ್ತಿಯ ಕರಾವಳಿ ಈ ವುಂಗ್ ತಾವ್. ಹೋ ಚಿ ಮಿನ್ ಸಿಟಿಯಿಂದ 90 ಕಿಮೀ ದೂರದಲ್ಲಿರುವ ವುಂಗ್ ತಾವ್ ನಲ್ಲಿ ಕಾಮನ್ ಡಾರ್ಮೆಟ್ರಿಯಿಂದ ಐಷಾರಾಮಿ ರೆಸಾರ್ಟ್ಗಳು, ಕಾಂಟಿನೆಂಟಲ್ ಹಾಗೂ ವಿಯೆಟ್ನಾಮೀಸ್ ಆಹಾರ ನೀಡುವ ಹೊಟೇಲ್ ಗಳು ಎಲ್ಲವೂ ಇವೆ.. ಕೇಬಲ್ ಕಾರ್ ಕೂಡ ಇದೆ. ಕಡಲ ಕಿನಾರೆಯಲ್ಲಿ ವಿಧವಿಧ ಕ್ರೀಡೆಗಳಿವೆ. ಪ್ರವಾಸಿಗರಿಗೆ ಇಷ್ಟವಾಗುವ ಜಾಗ ವುಂಗ್ ತಾವ್. ಅಚ್ಚುಮೆಚ್ಚಿನ ಸ್ಥಳ. 105 ಅಡಿ ಎತ್ತರದ ಕ್ರೈಸ್ಟ್ ದ ಕಿಂಗ್ ಪ್ರತಿಮೆ ಇಲ್ಲಿದೆ. ಇದರೊಳಗೆ ಮೆಟ್ಟಿಲುಗಳಿದ್ದು, ಕ್ರಿಸ್ತನ ಹೆಗಲಿನ ವರೆಗೆ ಏರಿ, ಸುತ್ತಲಿನ ಪ್ರದೇಶದ ಪಕ್ಷಿನೋಟ ಪಡೆಯಬಹುದು. ಉಡುಗೆ ಶಿಷ್ಟಾಚಾರ ಕಡ್ಡಾಯವಾಗಿ ಪಾಲಿಸಬೇಕಿರೋ ಈ ಜಾಗ ಫೊಟೋಗ್ರಫಿಗೆ ಉತ್ತಮ ಪಾಯಿಂಟ್. ವುಂಗ್ ತಾವ್ ನ ಸಮುದ್ರ ತೀರಗಳನ್ನು ಈ ಎತ್ತರದಿಂದ ನೋಡುವ ಸೊಗಸೇ ಬೇರೆ.
- ಜನಾರ್ದನ ಹೆಬ್ಬಾರ್