)
ನವದೆಹಲಿ: ಶ್ರೀಲಂಕಾದಲ್ಲಿ ಚಂಡಮಾರುತ ‘ದಿತ್ವಾ’ನಿಂದ ಉಂಟಾದ ಪ್ರಳಯಕಾರಿ ಪ್ರವಾಹ ಮತ್ತು ಕುಸಿತಗಳಿಂದಾಗಿ ಸಾವಿರಾರು ಜನತೆ ಸಂಕಷ್ಟಕ್ಕೀಡಾಗಿರುವಾಗ ಭಾರತ ತಕ್ಷಣವೇ ಸಹಾಯ ಹಸ್ತ ಚಾಚಿದೆ.
ಏನಿದು ಆಪರೇಷನ್ ಸಾಗರ ಬಂಧು?
ಶುಕ್ರವಾರ ‘ಆಪರೇಷನ್ ಸಾಗರ ಬಂಧು’ ಎಂಬ ಹೆಸರಿನ ಮಾನವೀಯ ನೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿರುವ ಭಾರತ, ತನ್ನ ನೌಕಾಪಡೆಯ ಎರಡು ಯುದ್ಧನೌಕೆಗಳ ಮೂಲಕ ತುರ್ತು ಪರಿಹಾರ ಸಾಮಗ್ರಿಗಳನ್ನು ಶ್ರೀಲಂಕಾದ ಕೊಲಂಬೊ ತಲುಪಿಸಿದೆ.
Operation Sagar Bandhu commences.
INS Vikrant and INS Udaygiri hand over relief material at Colombo. Further steps are underway. #OperationSagarBandhu https://t.co/woMrpfRs3b pic.twitter.com/yrRCmeJsmY
— Dr. S. Jaishankar (@DrSJaishankar) November 28, 2025
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಈ ಕಾರ್ಯಾಚರಣೆಯನ್ನು ಘೋಷಿಸಿ, ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ಉದೈಗಿರಿ ಕೊಲಂಬೊ ಬಂದರಿಗೆ ತಲುಪಿ ಆಹಾರ, ಔಷಧಗಳು, ತುರ್ತು ಉಪಕರಣಗಳನ್ನೊಳಗೊಂಡ ಪರಿಹಾರ ಸಾಮಗ್ರಿಗಳನ್ನು ಹಸ್ತಾಂತರಿಸಿವೆ ಎಂದು ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿ, ಚಂಡಮಾರುತದಿಂದ ಪ್ರಾಣ ಕಳೆದುಕೊಂಡ ಶ್ರೀಲಂಕಾದ ಜನತೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ. “ನಮ್ಮ ಅತ್ಯಂತ ಹತ್ತಿರದ ಸಮುದ್ರ ನೆರೆಯಾಳು ಶ್ರೀಲಂಕಾದ ಜನತೆಗೆ ಈ ದುಃಖದ ಸಮಯದಲ್ಲಿ ಭಾರತದ ಸಂಪೂರ್ಣ ಬೆಂಬಲವಿದೆ. ಆಪರೇಷನ್ ಸಾಗರ ಬಂಧು ಅಡಿಯಲ್ಲಿ ತುರ್ತು ಪರಿಹಾರ ಸಾಮಗ್ರಿಗಳು ಮತ್ತು ಮಾನವೀಯ ನೆರವನ್ನು ತಕ್ಷಣವೇ ಕಳುಹಿಸಲಾಗಿದೆ” ಎಂದು ಪ್ರಧಾನಿ ಬರೆದಿದ್ದಾರೆ.
ಶ್ರೀಲಂಕಾದಲ್ಲಿ ಭೀಕರ ಮಳೆ:
ಕಳೆದ ವಾರದಿಂದಲೂ ನಿರಂತರ ಮಳೆ ಸುರಿಯುತ್ತಿದ್ದು, ಗುರುವಾರದಿಂದ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಚಂಡಮಾರುತ ‘ದಿತ್ವಾ’ನಿಂದ ಉಂಟಾದ ಪ್ರವಾಹ ಮತ್ತು ಭೂ ಕುಸಿತದಿಂದ ಈವರೆಗೆ 56 ಮಂದಿ ಮೃತಪಟ್ಟಿದ್ದಾರೆ, 21 ಜನ ಕಾಣೆಯಾಗಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ. 600ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.ಅತ್ಯಂತ ಗಂಭೀರ ಪ್ರಭಾವಕ್ಕೊಳಗಾದ ಜಿಲ್ಲೆಗಳು ಬದುಲ್ಲಾ ಮತ್ತು ನುವರ ಎಲಿಯಾ. ಈ ಎರಡೂ ಪರ್ವತೀಯ ಪ್ರದೇಶಗಳಲ್ಲಿ ಭೂ ಕುಸಿತದಿಂದ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.ಶ್ರೀಲಂಕಾದ ಪ್ರಸಿದ್ಧ ಟೀ ತೋಟಗಳ ಪ್ರದೇಶವಾದ ಕೇಂದ್ರೀಯ ಎತ್ತರ ಪ್ರದೇಶಗಳು ಈಗ ಅತ್ಯಂತ ಅಪಾಯಕಾರಿ ವಲಯಗಳಾಗಿ ಮಾರ್ಪಟ್ಟಿವೆ.
ದೈನಂದಿನ ಜನ ಜೀವನ ಅಸ್ತವ್ಯಸ್ಥ
ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಶ್ರೀಲಂಕಾ ಜನರ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಪ್ರಮುಖ ಹೆದ್ದಾರಿಗಳು, ರೈಲು ಸೇವೆಗಳು ಸ್ಥಗಿತಗೊಂಡಿವೆ. ಕಲ್ಲು-ಮಣ್ಣು ಕುಸಿತ ಮತ್ತು ಉರುಳಿಬಂದ ಮರಗಳಿಂದ ಅನೇಕ ರಸ್ತೆಗಳು ಸಂಪೂರ್ಣ ಬಂದ್ ಆಗಿವೆ.ಭಾರತ ಈಗಾಗಲೇ ಶ್ರೀಲಂಕಾದ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಯಾವಾಗಲೂ ಮುಂದಾಗಿ ನೆರವು ನೀಡುತ್ತಾ ಬಂದಿದೆ. ಈ ಬಾರಿಯೂ ‘ನೆರೆಹೊರೆಯ ಮೊದಲ ನೀತಿ’ಯಡಿ ತಕ್ಷಣದ ಸಹಾಯ ಒದಗಿಸುವ ಮೂಲಕ ತನ್ನ ಸ್ನೇಹದ ಕೈಯನ್ನು ಚಾಚಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವು ತಲುಪಿಸಲು ಎರಡೂ ದೇಶಗಳ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ.