ಖ್ಯಾತ ನಟ - ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಪತ್ನಿ ಪ್ರಗತಿ ಶೆಟ್ಟಿ ಸಮೇತ ಅಮೇರಿಕಾದ ವಾಷಿಂಗ್ಟನ್ ನ ಸಿಯಾಟಲ್‌ ಗೆ ಭೇಟಿ ನೀಡಿದ್ದಾರೆ‌.

ಅಲ್ಲಿನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ ರಿಷಬ್ ಶೆಟ್ಟಿ ಅವರಿಗೆ "ವಿಶ್ವ ಶ್ರೇಷ್ಠ ಕನ್ನಡಿಗ 2023" ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿಯನ್ನು ಅಲ್ಲಿನ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸೆನೆಟರ್ ಡಾ||ದೆರೀಕ್ ಟ್ರಸ್ಫರ್ಡ್ ಸಹ ಉಪಸ್ಥಿತರಿದ್ದರು.

ಅಮೇರಿಕಾ ಹಾಗೂ ವಾಷಿಂಗ್ಟನ್ ನಗರಕ್ಕೆ ಕನ್ನಡಿಗರು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದ ಟ್ರಸ್ಫರ್ಡ್ ಅವರು, ರಿಷಬ್ ಶೆಟ್ಟಿ ಅವರ "ಕಾಂತಾರ" ಸಿನಿಮಾವನ್ನು ಯುನಿವರ್ಸಲ್‌ ಸಿನಿಮಾ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಅಮೇರಿಕಾದ ಇಡೀ ಕನ್ನಡಿಗರನ್ನು ಉದ್ದೇಶಿಸಿ ರಿಷಬ್ ಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ಯಾರಾಮೌಂಟ್ ಥಿಯೇಟರ್ ಅನ್ನು ಹಾಡಿ ಹೊಗಳಿದ ರಿಷಬ್ ಶೆಟ್ಟಿ, ವಾಷಿಂಗ್ಟನ್ ನ ಸಿಯಾಟಲ್ ನಗರದ ಪ್ಯಾರಾಮೌಂಟ್ ಥಿಯೇಟರ್ ಗೆ 95 ವರ್ಷಗಳ ಇತಿಹಾಸವಿದ್ದು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಸಾಕಷ್ಟು ಗಣ್ಯರು ಈ ಸ್ಥಳದಲ್ಲಿ ಭಾಷಣ ಮಾಡಿದ್ದಾರೆ ಎಂದರು.

ಅಷ್ಟೇ ಅಲ್ಲದೆ, ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಈ ಸ್ಥಳದಲ್ಲಿ ನಡೆದಿದ್ದು ಇಂತಹ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ "ವಿಶ್ವ ಶ್ರೇಷ್ಠ ಕನ್ನಡಿಗ 2023" ಪ್ರಶಸ್ತಿ ಪಡೆಯುತ್ತಿರುವುದು ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ ನೀಡಲಾದ "ವಿಶ್ವ ಶ್ರೇಷ್ಠ ಕನ್ನಡಿಗ 2023" ಪ್ರಶಸ್ತಿಯು ಚಿನ್ನದ ಲೇಪನ ಹೊಂದಿರುವ ಟ್ರೋಫಿ. 1800 ಕ್ಕೂ ಅಧಿಕ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

VIEW ALL

Read Next Story