ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿಎಂ ಆದ ಬಳಿಕ ತಮ್ಮ ಮೊದಲ ಸುದ್ದಿಗೋಷ್ಠಿ ನಡೆಸಿದರು. ಜನರ ಆಶೀರ್ವಾದದಿಂದ ಮೂರನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ರಾಜ್ಯದ ಆರೂವರೆ ಕೋಟಿ ಜನತೆ ನನಗೆ ಆಶೀರ್ವಾದ ಮಾಡಿದ್ದೀರಿ ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ತಿಳಿಸಿದರು. ಜನಾದೇಶ ನನ್ನ ಮತ್ತು ಬಿಜೆಪಿ ಪರವಿದ್ದರೂ, ಕಾಂಗ್ರೆಸ್​-ಜೆಡಿಎಸ್​ ಅಧಿಕಾರ ಕಬಳಿಸಲು ಯತ್ನಿಸುತ್ತಿದೆ. ಆದರೆ ನಮ್ಮ ಪರ ಕಾಂಗ್ರೆಸ್​-ಜೆಡಿಎಸ್​ ಅನೇಕ ಶಾಸಕರಿದ್ದಾರೆ. ಅವರು ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಎಲ್ಲಾ ಶಾಸಕರು ಆತ್ಮ ಸಾಕ್ಷ್ಯಿಗೆ ಅನುಗುಣವಾಗಿ ನಮಗೆ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದೂ ಸಹ ಇದೇ ಸಂದರ್ಭದಲ್ಲಿ ಬಿಎಸ್ ವೈ ತಿಳಿಸಿದರು.


COMMERCIAL BREAK
SCROLL TO CONTINUE READING

ಇನ್ನೆರಡು ದಿನದಲ್ಲಿ ರೈತರಿಗೆ ನಾನು ನೀಡಿರುವ ಭರವಸೆಯನ್ನು ಈಡೇರಿಸುತ್ತೇನೆ. ರಾಷ್ಟ್ರೀಕೃತ ಬ್ಯಾಂಕ್​ ಮತ್ತು ಸಹಕಾರಿ ಬ್ಯಾಂಕ್​ಗಳ ಸಾಲಮನ್ನಾದ ಬಗ್ಗೆ ನಾನು ನಾಡಿನ ರೈತರಿಗೆ ನೀಡಿದ್ದ ಭರವಸೆಯನ್ನು ಇನ್ನೆರಡು ದಿನಗಳಲ್ಲಿ ಈಡೇರಿಸುತ್ತೇನೆ. ನಾಳೆ ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸುತ್ತೇನೆ. ರೈತರು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ತೆಗೆದುಕೊಂಡಿರುವ ಒಂದು ಲಕ್ಷ ರೂ. ವರೆಗಿನ ಬೆಳೆಸಾಲವನ್ನು ಮನ್ನಾ ಮಾಡುತ್ತೇನೆ. 


ಅಲ್ಲದೆ, ನೇಕಾರರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯಕಾರ್ಯದರ್ಶಿಗಳಿಗೆ ತಿಳಿಸಿದ್ದೇನೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.