ಕರುಣಾಕರ ರೆಡ್ಡಿ ಪರ ಇಂದು ಮತಯಾಚನೆ ಮಾಡಲಿರುವ ಅಮಿತ್ ಶಾ
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಬೆಂಗಳೂರು ಭಾಗಗಳಲ್ಲಿ ಬಿಜೆಪಿ ಚಾಣಕ್ಯನ ಮತಬೇಟೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಬೀಡುಬಿಟ್ಟಿರುವ ಬಿಜೆಪಿ ಚುನಾವಣಾ ಚಾಣಕ್ಯ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಬೆಂಗಳೂರು ಭಾಗಗಳಲ್ಲಿ ಮತಬೇಟೆ ನಡೆಸಲಿದ್ದಾರೆ. ಈ ಸಮಯದಲ್ಲಿ ಗಣಿ-ಧಣಿ ಜನಾರ್ಧನ ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಪರ ಸಹ ಮತಯಾಚನೆ ಮಾಡಲಿದ್ದಾರೆ.
ಇಂದು ಬೆಳಿಗ್ಗೆ 10:00ಕ್ಕೆ ಗದಗ ಜಿಲ್ಲೆಯ ನರಗುಂದ ಪಟ್ಟಣಕ್ಕೆ ತೆರಳಲಿರುವ ಶಾ ಅಲ್ಲಿನ ಗಾಂಧಿ ಚೌಕದಲ್ಲಿ ಆಯೋಜನೆಯಾಗಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಅಲ್ಲಿಂದ ದಾವಣಗೆರೆಗೆ ತೆರಳಲಿರುವ ಅಮಿತ್ ಶಾ ಮಧ್ಯಾಹ್ನ 03:00 ಗಂಟೆ ಸುಮಾರಿಗೆ ದಾವಣಗೆರೆ ಜಿಲ್ಲೆಯ ಹರಪ್ಪನ ಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಲಿದ್ದಾರೆ.
ಗಣಿ-ಧಣಿ ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದ ಶಾ, ಇಂದು ಅವರ ಸಹೋದರನ ಪರವಾಗಿ ಮತಯಾಚನೆಗೆ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹರಪ್ಪನಹಳ್ಳಿಯಿಂದ ಸಂಜೆ ಬೆಂಗಳೂರಿಗೆ ಆಗಮಿಸಲಿರುವ ಶಾ, ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ಮತಬೇಟೆ ನಡೆಸಲಿದ್ದಾರೆ.
ಸಂಜೆ 07:00 ಗಂಟೆಗೆ ನೆಲಮಂಗಲದ ಐಟಿಐ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿರುವ ಶಾ, ನೆಲಮಂಗಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದಾರೆ.