ಬೆಂಗಳೂರು: ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಜೆಡಿಎಸ್ ಸೇರ್ಪಡೆಗೊಂಡ ಬೆನ್ನಲೇ ನೈಸ್ ಸಂಸ್ಥೆ ಮಾಲೀಕ ಅಶೋಕ್ ಖೇಣಿ ಸೋದರ ಸಂಬಂಧಿ ಸಂಜಯ್ ಖೇಣಿ, ಮಾಜಿ ಶಾಸಕ ನರೇಂದ್ರ ಖೇಣಿ ಮತ್ತು ಪ್ರಕಾಶ್‌ ಖೇಣಿ ಇಂದು ಜೆಡಿಎಸ್ ವರಿಷ್ಠ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ಸೇರ್ಪಡೆಯಾದರು. 


COMMERCIAL BREAK
SCROLL TO CONTINUE READING

ಪಕ್ಷಕ್ಕೆ ಸೇರ್ಪಡೆಗೊಂಡ ಖೇಣಿ ಸಹೋದರರನ್ನು ಶಾಲು ಹೊದಿಸಿ ಸ್ವಾಗತಿಸಿದ ಹೆಚ್.ಡಿ.ದೇವೇಗೌಡ ಅವರು, ನೈಸ್ ರಸ್ತೆಗೆ ಸಂಬಂಧಿಸಿದಂತೆ ಅಕ್ರಮ ಎಸಗಿದ ಉದ್ಯಮಿ ಅಶೋಕ್ ಖೇಣಿಯನ್ನು ಮುಂದೊಂದು ದಿನ ಸೋಲಿಸುವುದಾಗಿ ಹೇಳಿದ್ದೆ. ಅದರಂತೆ ಇದೀಗ ಅವರ ಚಿಕ್ಕಪ್ಪ ನರೇಂದ್ರ ಖೇಣಿ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇವೆಲ್ಲವೂ ದೈವಲೀಲೆ ಎಂದು ದೇವೇಗೌಡರು ಹೇಳಿದರು.


ನಂತರ ನರೇಂದ್ರ ಖೇಣಿ ಮಾತನಾಡಿ, ಶಾಸಕನಾಗಿ 5 ವರ್ಷ ಕಳೆದರೂ ಬೀದರ್ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಅಶೋಕ್ ಖೇಣಿ ಒಂದಿಷ್ಟೂ ಶ್ರಮಿಸಿಲ್ಲ. ಹಾಗಾಗಿ ಆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಕಾಶೆಂಪುರ ಅವರನ್ನು ಗೆಲ್ಲಿಸುವ ಮೂಲಕ ಅಶೋಕ್ ಖೇಣಿಯನ್ನು ಸೋಲಿಸಿಯೇ ತೀರುತ್ತೇವೆ. ಅದೇ ನಮ್ಮ ಮುಖ್ಯ ಗುರಿ ಎಂದು ಹೇಳಿದರು.


ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಬಂಡೆಪ್ಪ ಕಾಶೆಂಪುರ ಅವರು ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.