ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರೂ., ಮಂತ್ರಿ ಸ್ಥಾನದ ಆಫರ್: ಕುಮಾರಸ್ವಾಮಿ
ಜೆಡಿಎಸ್ ಶಾಸಕರಿಗೆ 100 ಕೋಟಿ ರೂ ಮತ್ತು ಮಾತ್ರಿ ಸ್ಥಾನದ ಆಮಿಷ ಒಡ್ಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು : ರಾಜ್ಯದಲಿ ಅಧಿಕಾರ ಹಿಡಿಯಲೇಬೇಕೆಂದು ಕುದುರೆ ವ್ಯಾಪರಕ್ಕೆ ಇಳಿದಿರುವ ಜಿಜೆಪಿ, ಜೆಡಿಎಸ್ ಶಾಸಕರಿಗೆ 100 ಕೋಟಿ ರೂ ಮತ್ತು ಮಾತ್ರಿ ಸ್ಥಾನದ ಆಮಿಷ ಒಡ್ಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಶಾಸಕಾಂಗದ ನಾಯಕನಾಗಿ ಕುಮಾರಸ್ವಾಮಿ ಅವರು ಆಯ್ಕೆ ಆದ ಬಳಿಕ ಬೆಂಗಳೂರಿನ ಶ್ರಾಂಗಿಲಾ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿಗೆ ಅವಸರವಿದೆ. ಅದಕ್ಕಾಗಿ ನಮ್ಮ ಪಕ್ಷದ ಶಾಸಕರಿಗೆ 100 ಕೋಟಿ ರೂ ಮತ್ತು ಮಂತ್ರಿ ಸ್ಥಾನ ನೀಡುವ ಆಫರ್ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತಾರೆ, ಕಪ್ಪು ಹಣ ತಡೆಗಟ್ಟುವ ಬಗ್ಗೆ ಮಾತಾಡುತ್ತಾರೆ, ಆದರೆ ಇದೀಗ ಅವರ ಶಾಸಕರನ್ನು ಕೊಂಡುಕೊಳ್ಳಲು ಹೊಂಚು ಹಾಕುತ್ತಿರುವ ಬಿಜೆಪಿ ನಾಯಕರಿಗೆ ಈ ಹಣ ಎಲ್ಲಿಂದ ಬಂದು? ಸಂವಿಧಾನದ ನಿಯಮ ಉಲ್ಲಂಘಿಸುತ್ತಿರುವ ಈ ಪಕ್ಷವನ್ನು ಬೆಂಬಲಿಸಬೇಕೆ, ಬೇಡವೇ ಎಂಬುದನ್ನು ಜನತೆಯೇ ನಿರ್ಧರಿಸಬೇಕು. ಒಂದು ವೇಳೆ ಆಪರೇಷನ್ ಕಮಲ ಮಾಡಲು ಮುಂದಾದರೆ ನಾವೂ ಬಿಜೆಪಿಯ ಶಾಸಕರನ್ನು ಸೆಳೆಯಲಿದ್ದೇವೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಬಿಜೆಪಿ ಬಹುಮತಕ್ಕೆ 9 ಶಾಸಕರ ಕೊರತೆ ಇದೆ. ಈಗಾಗಲೇ ಜೆಡಿಎಸ್, ಕಾಂಗ್ರೆಸ್ ಸೇರಿ 116 ಸಂಖ್ಯಾ ಬಲ ಹೊಂದಿದ್ದೇವೆ. ಆದರೆ ಕರ್ನಾಟಕದಲ್ಲಿ ಕೇಂದ್ರದ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದಾರೆ. ಬಿಜೆಪಿ, ಗೋವಾ, ಮಣಿಪುರದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿತ್ತು. ಆದರೂ ರಾಜ್ಯಪಾಲರು ಬಿಜೆಪಿಗೆ ಅಧಿಕಾರ ರಚನೆಗೆ ಅವಕಾಶ ನೀಡಿದ್ದರು. ಆದರೆ, ಕರ್ನಾಟಕದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.
ಇಂದು ಬಿಜೆಪಿಗೆ ಬಂದಿರುವ 104 ಸ್ಥಾನಗಳು ಬಿಜೆಪಿಗೆ ಮತ ನೀಡಬೇಕೆಂದು ಜನತೆ ಕೊಟ್ಟಿರುವುದಲ್ಲ. ಇಂದು ಕೆಲವು ವರ್ಗದ ಜನತೆ ತೆಗೆದುಕೊಂಡಿರುವ ತಪ್ಪು ನಿರ್ಧಾರ ಮತ್ತು ಜಾತ್ಯಾತೀತ ವರ್ಗದಲ್ಲಿ ಉಂಟಾದ ಮತ ವಿಭಜನೆಯಿಂದ ಬಿಜೆಪಿ 104 ಸ್ಥಾನ ಗಳಿಸಿದೆ. ಆದರೆ ಮೋದಿ ವರ್ಚಸ್ಸಿನಿಂದ ಈ ಫಲಿತಾಂಶ ಬಂದಿದೆ ಎಂದು ಅವರು ತಿಳಿದಿದ್ದರೆ ಅದು ಖಂಡಿತಾ ಸುಳ್ಳು. ರಾಜ್ಯದಲ್ಲಿ ಜೆಡಿಎಸ್ ಮುಗಿಸಬೇಕೆಂದು ಕೆಲವರು ನಡೆಸಿದ ಹುನ್ನಾರದಿಂದ ಮಾತ್ರ ಬಿಜೆಪಿ ಗೆದ್ದಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.