ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಬಹಳ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಬಾದಾಮಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನ್ನ ಅಭ್ಯರ್ಥಿ ಶ್ರೀರಾಮುಲುವನ್ನು ಶತಾಯಗತಾಯ ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಬಾದಾಮಿ ಕ್ಷೇತ್ರದಲ್ಲಿ ತೀವ್ರ ಪ್ರಚಾರ ಕೈಗೊಂಡಿದೆ. 


ಇಂದು ಬೆಳಿಗ್ಗೆ 11.30ಕ್ಕೆ ಬಾದಾಮಿ ವಿಧಾನಸಭಾ ಕ್ಷೇತ್ರದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ರೋಡ್ ಶೋ ನಡೆಸಲಿರುವ ಅಮಿತ್ ಷಾ, ಶ್ರೀರಾಮುಲು ಪರ ಮತ ಯಾಚನೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ರಮೇಶ್ ಜಿಗಿಣಗಿ ಸಾಥ್ ನೀಡಲಿದ್ದಾರೆ.



100 ನಾಯಕರಿಂದ ಪ್ರಚಾರ : ಬಹಿರಂಗ ಪ್ರಚಾರಕ್ಕೆ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಮತದಾರರ ಮನವೊಲಿಕೆಗೆ ಬಿಜೆಪಿ ರಾಜ್ಯ, ಕೇಂದ್ರ ಹಾಗೂ ಅನ್ಯ ರಾಜ್ಯಕ್ಕೆ ಸೇರಿದ 100ಕ್ಕೂ ಹೆಚ್ಚು ಮುಖಂಡರು ಇಂದು ರಾಜ್ಯಾದ್ಯಂತ ಪ್ರಚಾರ ನಡೆಸಲಿದ್ದಾರೆ. ಅಮಿತ್ ಷಾ ಬಾದಾಮಿಯಲ್ಲಿ ಪ್ರಚಾರ ನಡೆಸಿದರೆ, ಕೇಂದ್ರ ಸಚಿವರಾದ ಅನಂತಕುಮಾರ್, ಪ್ರಕಾಶ್‌ ಜಾವಡೇಕರ್‌, ಪಿಯೂಶ್‌ ಗೋಯಲ್‌, ಸದಾನಂದ ಗೌಡ, ಅನಂತಕುಮಾರ ಹೆಗಡೆ, ರಮೇಶ್‌ ಜಿಗಜಿಣಗಿ ರಾಜ್ಯದ ಎಲ್ಲ ಸಂಸದರು, ರಾಜ್ಯಸಭಾ ಸದಸ್ಯರು, ಅನ್ಯ ರಾಜ್ಯಗಳಿಂದ ಬಿಜೆಪಿಯನ್ನು ಪ್ರತಿನಿಧಿಸುವ ಸಂಸದ ಸದಸ್ಯರು ಕೊನೆ ಹಂತದ ಪ್ರಯತ್ನ ನಡೆಸಿದ್ದಾರೆ.