ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹಲವು ದಿನಗಳ ಹಿಂದಿನಿಂದಲೇ ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿತ್ತು. ಅಷ್ಟೇ ಏಕೆ? ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಧಿಕೃತವಾಗಿ ಹೆಸರು ಪ್ರಕಟವಾಗದಿದ್ದರೂ, ಬಿ.ವೈ. ವಿಜಯೇಂದ್ರ ಇಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರು. ಆದರೆ, ಇಂದು ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ವರುಣಾ ಕ್ಷೇತ್ರದ ಅಭ್ಯರ್ಥಿ ಪ್ರಕಟವಾಗಲಿಲ್ಲ. ಇದರ ಬೆನ್ನಲೇ ನಂಜನಗೂಡಿನಲ್ಲಿ ಬಿ.ಎಸ್.ಯಡಿಯೂರಪ್ಪ ಅವರು 'ನನ್ನ ಮಗ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ' ಎಂದು ಹೇಳಿದ್ದೇ ತಡ, ಮೈಸೂರು ನಗರಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಲೇಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು.


ಅನಂತ್ ಕುಮಾರ್, ಅಮಿತ್ ಷಾ ಪ್ರತಿಕೃತಿ ದಹನ; ಲಾಠಿ ಚಾರ್ಜ್
ವರುಣಾ ಕ್ಷೇತ್ರದಿಂದ ಕಡೆ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಲು ಕೇಂದ್ರ ಸಚಿವ ಅನಂತ ಕುಮಾರ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರೇ ಕಾರಣ ಎಂದು ಆರೋಪಿಸಿ ವಿಜಯೇಂದ್ರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ರೊಚ್ಚಿಗೆದ್ದು ಮೂವರೂ ನಾಯಕರ ಪ್ರತಿಕೃತಿ ದಹನ ಮಾಡಿದರು. ಅಲ್ಲದೆ, ಯಡಿಯೂರಪ್ಪ ಅವರು ತಂಗಿದ್ದ ಖಾಸಗಿ ಹೋಟೆಲ್'ನ ಕಿಟಕಿ ಗಾಜುಗಳಿಗೆ ಹಾನಿಗೊಳಿಸಿದರು. ಪರಿಸ್ಥಿತಿ ಕೈಮೀರಿದ್ದರ ಹಿನ್ನೆಲೆಯಲ್ಲಿ ಘರ್ಷಣೆಯನ್ನು ನಿಯಂತ್ರಣಕ್ಕೆ ತರಲು ಪೋಲಿಸ್ ಲಾಠಿ ಚಾರ್ಜ್ ನಡೆಸಬೇಕಾಯಿತು. 


ಎಸ್.ಎ.ರಾಮದಾಸ್ ಸ್ಪರ್ಧೆಯಿಂದ ಹಿಂದೆ ಸರಿಯುವ ಸೂಚನೆ
ವರುಣಾ ಕ್ಷೇತ್ರದಲ್ಲಿ  ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಬೆಂಬಲಿಸಿರುವ ಕೃಷ್ಣರಾಜ ಕ್ರೇತ್ರದ ಬಿಜೆಪಿ ಅಭ್ಯರ್ಥಿ ರಾಮದಾಸ್ ಅವರು, ವಿಜಯೇಂದ್ರಗೆ ಟಿಕೆಟ್​ ನೀಡದಿದ್ದರೆ ತಾವೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ವಿಜಯೇಂದ್ರಗೆ ವರುಣ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ವರುಣಾ ಕ್ಷೇತ್ರದ ಎಸ್ಸಿ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ನಾಳೆ ರಾಜಿನಾಮೆ ನೀಡಲಿದ್ದಾರೆ ಎಂದು ಅಧ್ಯಕ್ಷ ಶ್ರೀಧರ್ ಹೇಳಿದ್ದಾರೆ. 


ಪಕ್ಷದ ನಿರ್ಧಾರ ಪಾಲಿಸುವಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಕರೆ
ವಿಜಯೇಂದ್ರ ಟಿಕೆಟ್ ಕೈತಪ್ಪಲು ಸಚಿವ ಅನಂತ್ ಕುಮಾರ್ ಅವರೇ ಕಾರಣ ಎಂದಿದ್ದ, ಕಾರ್ಯಕರ್ತರಿಗೆ ಅನಂತ್ ಕುಮಾರ್ ಕಿವಿಮಾತು ಹೇಳಿದ್ದಾರೆ. ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಬಿ.ಎಸ್.​ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಈ ಹಿಂದೆ ಪಕ್ಷ ಘೋಷಿಸಿತ್ತು. ಆದರೆ ಇದೀಗ ವಿಜಯೇಂದ್ರ ಅವರ ಹೆಸರನ್ನು ಪಕ್ಷ ಹಿಂಪಡೆದುಕೊಂಡಿದ್ದು, ಬಿಜೆಪಿ ವರಿಷ್ಠರ ನಿರ್ಧಾರವನ್ನು ಪಕ್ಷದ ಕಾರ್ಯಕರ್ತರು ಪಾಲಿಸಬೇಕು ಎಂದಿದ್ದಾರೆ.


ಒಟ್ಟಾರೆ, ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದ್ದ ಹಿನ್ನೆಲೆಯಲ್ಲಿ ಬಿ.ವೈ.ವಿಜಯೇಂದ್ರ ಅವರು ಮೈಸೂರಿನಲ್ಲಿ ಮನೆಯನ್ನೂ ಮಾಡಿ, ಭರ್ಜರಿ ಚುನಾವಣಾ ಪ್ರಚಾರದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಇದೀಗ ಕಡೆ ಕ್ಷಣದಲ್ಲಿ ಇದ್ದಕ್ಕಿದಂತೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ಹೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಮಧ್ಯೆ ವಿಜಯೇಂದ್ರ ಅವರೂ ಕೂಡ ತಮ್ಮ ನಿರ್ಧಾರ ಪ್ರಕಟಿಸಿದ್ದು, ಅಭ್ಯರ್ಥಿ ಯಾರೇ ಇರಲಿ, ಬಿಜೆಪಿ ಗೆಲ್ಲಿಸುವುದೊಂದೇ  ನಮ್ಮ ಗಿರಿ ಎಂದಿದ್ದಾರೆ. ಹೀಗಾಗಿ ವರುಣಾ ಕ್ಷೇತ್ರದಿಂದ ಇನ್ನಾವ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.