ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆಯಲು ಬಿಎಸ್ ವೈ ಸಜ್ಜು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವುದೊಂದೇ ನಮ್ಮ ಗುರಿ- ಬಿ.ಎಸ್. ಯಡಿಯೂರಪ್ಪ
ಬೆಂಗಳೂರು: ಮುಂಬರುವ ಲೋಕಸಭಾ ಚುನಾವನೆಯನ್ನು ಗುರಿಯಾಗಿಸಿಕೊಂಡು ರಾಜ್ಯ ಪ್ರವಾಸ ಕೈಗೊಳ್ಳಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.
ಸದ್ಯದಲ್ಲೇ ರಾಜ್ಯ ಪ್ರವಾಸಕ್ಕೆ ದಿನಾಂಕ ನಿಗಧಿಗೊಳಿಸುವುದಾಗಿ ತಿಳಿಸಿರುವ ಬಿಎಸ್ ವೈ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ್ಯಂತ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅತಿ ಹೆಚ್ಚು ಸ್ಥಾನ ಗಳಿಸಿದ್ದು ನಮ್ಮ ಪಕ್ಷ. ಆದರೂ, ಕಾಂಗ್ರೆಸ್ - ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರಿಂದ ನಮ್ಮ ಪಕ್ಷ ಅಧಿಕಾರದಲ್ಲಿ ಮುಂದುರೆಯಲು ಆಗಲಿಲ್ಲ. ಇದರಿಂದ ಜನಾದೇಶ ನಮ್ಮ ಕಡೆ ಇದ್ದರೂ ಅಧಿಕಾರ ಸಿಗಲಿಲ್ಲ ಎಂದು ಹೇಳಿಕೊಂಡು, ಜನರ ಬಳಿ ತೆರಳಲು ಬಿ.ಎಸ್. ಯಡಿಯೂರಪ್ಪ ರಾಜ್ಯಪ್ರವಾಸ ಕೈಗೊಳ್ಳಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ಗುರಿಯೊಂದಿಗೆ ರಾಜ್ಯ ಪ್ರವಾಸ ಕೈಗೊಂಡು ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ಬಿಎಸ್ ವೈ ಯೋಜನೆ ರೂಪಿಸಿದ್ದಾರೆ.