Chief Ministers of Karnataka: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಕಾಂಗ್ರೆಸ್ ಪಕ್ಷದಲ್ಲಿ ಕೊನೆಗೂ ಕೂಡ ಮುಖ್ಯಮಂತ್ರಿ ಕಂಗಟ್ಟಿಗೆ ತೆರೆ ಬಿದ್ದಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈ ಕಮಾಂಡ್ ಆಯ್ಕೆ ಮಾಡಿದೆ. 


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ತೆರೆ ಎಳೆದಿರುವ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ನೀಡಿದೆ. ಇದೇ ವೇಳೆ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಿದೆ. 


ಇದನ್ನೂ ಓದಿ- DCM DK Shivakumar: ಡಿ. ಕೆ. ಶಿವಕುಮಾರ್ ನಡೆದು ಬಂದ ಹಾದಿ


ಕರ್ನಾಟಕ ರಾಜ್ಯವನ್ನು ನವೆಂಬರ್ 1, 1973ರ ಮೊದಲು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು. ನಂತರ ಕರ್ನಾಟಕ ಎಂದು ಹೊಸದಾಗಿ ನಾಮಕರಣ ಮಾಡಲಾಯಿತು. ರಾಜ್ಯದಲ್ಲಿ 1947ರಿಂದ ಇದುವರೆವಿಗೂ ಒಟ್ಟು ಇಪ್ಪತ್ತೆರಡು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದು, ಇದರಲ್ಲಿ ಬಹುತೇಕ ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಡಿ. ದೇವರಾಜ್ ಅರಸ್ 70ರ ದಶಕದಲ್ಲಿ ಏಳು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ರಾಮಕೃಷ್ಣ ಹೆಗ್ಡೆ, ಎಸ್.ಆರ್. ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಹಾಗೂ ಎಚ್.ಡಿ.ಕುಮಾರ ಸ್ವಾಮಿ ಜನತಾ ದಳದಿಂದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದರು.  ಎಚ್.ಡಿ.ದೇವೇಗೌಡ ಹನ್ನೊಂದನೇ ಪ್ರಧಾನ ಮಂತ್ರಿ ಸಹ ಆಗಿದ್ದರು. ಭಾರತೀಯ ಜನತಾ ಪಕ್ಷವು ನವೆಂಬರ್ 12, 2008 ರಂದು ಜಾತ್ಯಾತೀತ ಜನತಾ ದಳ ಪಕ್ಷದ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿತು. ಬಿ.ಎಸ್.ಯಡಿಯೂರಪ್ಪ ಕೇವಲ 7 ದಿನಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಿತು.  ಮೇ 30, 2008 ರಂದು ಬಿ ಎಸ್ ಯಡಿಯೂರಪ್ಪ ಮತ್ತೆ ಅಧಿಕಾರವಹಿಸಿಕೊಂಡರು. 2008 ರಿಂದ 2013 ರವರೆಗೆ ಭಾರತಿಯ ಜನತಾ ಪಕ್ಷದ ಮೂರು ಮುಖ್ಯಮಂತ್ರಿಗಳು ಆಡಳಿತ ನಡೆಸಿದರು. 


ಮೇ 13, 2013 ರಂದು ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರು ಪ್ರಸ್ತುತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಐದು ವರ್ಷಗಳ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಮೇ.12, 2018 ರಂದು ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರೋಧದ ನಡುವೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕದ ನೂತನ ಮೂಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.


ನಮ್ಮ ರಾಜ್ಯದಲ್ಲಿ ಈವರೆಗೂ ಒಟ್ಟು 22 ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಮೇ. 17, 2018ರಂದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 


ಮೈಸೂರು ಮುಖ್ಯಮಂತ್ರಿಗಳು  


1. ಕೆ.ಚೆಂಗಲರಾಯ ರೆಡ್ಡಿ 
2. ಕೆಂಗಲ್ ಹನುಮಂತಯ್ಯ 
3. ಕಡಿದಾಳ್ ಮಂಜಪ್ಪ 


ಮೈಸೂರು ಮುಖ್ಯಮಂತ್ರಿಗಳು  (ರಾಜ್ಯ ಏಕೀಕರಣದ ನಂತರ)


4. ಎಸ್.ನಿಜಲಿಂಗಪ್ಪ 
5. ಬಿ.ಡಿ.ಜೆತ್ತಿ  
6. ಎಸ್.ಆರ್.ಕಂಠಿ 
7. ವೀರೇಂದ್ರ ಪಾಟೀಲ್ 


ಕರ್ನಾಟಕದ ಮುಖ್ಯ ಮಂತ್ರಿಗಳು 


8. ಡಿ.ದೇವರಾಜ್ ಅರಸ್ 
9. ಆರ್.ಗುಂಡುರಾವ್ 
10. ರಾಮಕೃಷ್ಣ ಹೆಗಡೆ
11. ಎಸ್.ಆರ್.ಬೊಮ್ಮಾಯಿ 
12. ಎಸ್.ಬಂಗಾರಪ್ಪ 
13. ಎಂ.ವೀರಪ್ಪ ಮೊಯ್ಲಿ 
14. ಎಚ್.ಡಿ.ದೇವೇಗೌಡ
15. ಜೆ.ಎಚ್.ಪಟೇಲ್ 
16. ಎಸ್.ಎಂ.ಕೃಷ್ಣ 
17. ಧರಂ ಸಿಂಗ್ 
18. ಎಚ್.ಡಿ.ಕುಮಾರ ಸ್ವಾಮಿ 
19. ಬಿ.ಎಸ್.ಯಡಿಯೂರಪ್ಪ 
20. ಡಿ.ವಿ.ಸದಾನಂದ ಗೌಡ 
21. ಜಗದೀಶ್ ಶೆಟ್ಟರ್ 
22. ಸಿದ್ದರಾಮಯ್ಯ 
23. ಬಿ.ಎಸ್.ಯಡಿಯೂರಪ್ಪ 
24. ಎಚ್.ಡಿ.ಕುಮಾರಸ್ವಾಮಿ 
25. ಬಿ.ಎಸ್. ಯಡಿಯೂರಪ್ಪ 
26. ಬಸವರಾಜ್ ಬೊಮ್ಮಾಯಿ 
27. ಸಿದ್ದರಾಮಯ್ಯ 


ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು  


* ಕೆ.ಚೆಂಗಲರಾಯ ರೆಡ್ಡಿ


ಮೈಸೂರು ಸಂಸ್ಥಾನದ ಮೊದಲ ಮುಖ್ಯ ಮಂತ್ರಿ ಕೆ ಸಿ ರೆಡ್ಡಿ, ಮೇ 4, 1902 ರಲ್ಲಿ ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲ್ಲೂಕಿನ ಕಾಸಾಂಬಳ್ಳಿ ಗ್ರಾಮದಲ್ಲಿ ಒಕ್ಕಲಿಗ ಕುಟುಂಬದಲ್ಲಿ ಜನಿಸಿದ ಕೆ ಚೆಂಗಲರಾಯ ರೆಡ್ಡಿ ಅವರು ಕೆ ಸಿ ರೆಡ್ಡಿ ಎಂದೇ ಪ್ರಸಿದ್ದರು. ಕೆ ಸಿ ರೆಡ್ಡಿ ಕಾನೂನು ಪದವಿದರರು. ತಮ್ಮ ವಿಧ್ಯಾಭ್ಯಾಸದ ನಂತರ 1930ರಲ್ಲಿ ಪ್ರಜಾ ಪಕ್ಷ (ಪೀಪಲ್ಸ್ ಪಾರ್ಟಿ) ಸ್ಥಾಪಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಹು ಬೆಂಬಲ ಹೊಂದಿದ್ದ ಈ ಪಕ್ಷದ ಗುರಿ ಮೈಸೂರು ರಾಜ್ಯದ ಮೊದಲ ಜವಾಬ್ದಾರಿಯುತ ಸರ್ಕಾರ ಸ್ಥಾಪಿಸುವುದಾಗಿತ್ತು.  ಪ್ರಜಾ ಪಕ್ಷ ಮತ್ತು ಪ್ರಜಾ ಮಿತ್ರ ಮಂಡಳಿ 1934 ರಲ್ಲಿ ಪ್ರಜಾ ಸಂಯುಕ್ತಿ ಪಕ್ಷ (ಮೈಸೂರು ಪೀಪಲ್ಸ್ ಫೆಡರೇಶನ್) ಅನ್ನು ರೂಪಿಸಲು ಒಂದಾಯಿತು. ರೆಡ್ಡಿ 1935 ರಿಂದ 1937 ರವರೆಗೆ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.  ನಂತರ, ಫೆಡರೇಷನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಂದಿಗೆ ವಿಲೀನಗೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿತು.  ರೆಡ್ಡಿ 1937-38 ಮತ್ತು 1946-47 ರಲ್ಲಿ ಎರಡು ಬಾರಿ ಮೈಸೂರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಂತರ ಭಾರತದ ಸಂವಿಧಾನ ಸಭೆಯ ಸದಸ್ಯರೂ ಸಹ ಆಗಿದ್ದರು. 


ಮೈಸೂರು ಚಲೋ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ರೆಡ್ಡಿ ೧೯೪೭ರಲ್ಲಿ ಭಾರತ ಸ್ವತಂತ್ರಗೊಂಡ ನಂತರ, ಅಕ್ಟೋಬರ್ 25, 1947 ರಿಂದ ಮಾರ್ಚ್ 30, 1952 ರವರೆಗೆ ಮೈಸೂರು ಸಂಸ್ಥಾನದ ಮೊದಲ ಮುಖ್ಯಮಂತ್ರಿಯಾದರು.  1952ರಲ್ಲಿ ಮೈಸೂರು ವಿಧಾನಸಭಾ ಸದಸ್ಯರಾಗಿ ಚುನಾಯಿತರಾದ ರೆಡ್ಡಿ, ತರುವಾಯ 1952 ರಿಂದ 1957 ರವರೆಗೆ ರಾಜ್ಯ ಸಭಾ ಸದಸ್ಯರಾಗಿ ಮತ್ತು 1957 ರಿಂದ 1962 ರವರೆಗೆ ಕೋಲಾರದಿಂದ ಲೋಕಸಭಾ ಸದಸ್ಯರಾಗಿ ಕೇಂದ್ರ ಸರ್ಕಾರದಲ್ಲಿ 1957-61 ರವರೆಗೆ  ವಸತಿ ಮತ್ತು ಸರಬರಾಜು ಹಾಗೂ 1961-62 ರವರೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರೂ ಆಗಿದ್ದರು. ಆನಂತರದಲ್ಲಿ 1965 ರಿಂದ 1971 ರವರೆಗೆ ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು.   ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೆ ಸಿ ರೆಡ್ಡಿ ಫೆಬ್ರವರಿ 27, 1976 ರಲ್ಲಿ ತಮ್ಮ ಎಪ್ಪತ್ತಮೂರನೇ ವಯಸ್ಸಿನಲ್ಲಿ ಇಹ ಲೋಕ ತ್ಯಜಿಸಿದರು.


*ಕೆಂಗಲ್ ಹನುಮಂತಯ್ಯ


ಫೆಬ್ರವರಿ 14, 1908 ರಂದು ಬೆಂಗಳೂರಿನ ಲಕ್ಕಪ್ಪನಹಳ್ಳಿಯಲ್ಲಿ ಜನಿಸಿದ ಕೆಂಗಲ್ ಹನುಮಂತರಾಯರು 1930ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿಯನ್ನು ಪಡೆದರು. 1932ರಲ್ಲಿ ಎಲ್ ಎಲ್ ಬಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಹಾಗೂ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದರು.  ವೃತ್ತಿಜೀವನದ ಪ್ರಾರಂಭದಲ್ಲಿ ಕೆ. ಹನುಮಂತಯ್ಯ 'ಬಾರ್ ಕೌನ್ಸಿಲ್' ಸೇರಿದರು. ನಂತರ ಡಾ.ಪಿ.ಟಂಡನ್ ಅವರನ್ನು ಸ್ವಾತಂತ್ಯ್ರ ಹೋರಾಟದಲ್ಲಿ ತೊಡಗಿಸಿಕೊಂಡರು. ಮಹಾತ್ಮಾ ಗಾಂಧಿಯವರಿಂದ ಸ್ಪೂರ್ತಿ ಪಡೆದಿದ್ದ ಹನುಮಂತಯ್ಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಒಂಬತ್ತು ಬಾರಿ ಜೈಲುವಾಸ ಅನುಭವಿಸಿದ್ದರು. 


ಮಾರ್ಚ್ 30, 1952 ರಿಂದ ಆಗಸ್ಟ್ 19,1956ರವರೆಗೆ ಕರ್ನಾಟಕದ ಎರಡನೇ ಮುಖ್ಯಮಂತ್ರಿಯಾಗಿದ್ದ(ಅಂದಿನ ಮೈಸೂರು ಪ್ರಾಂತ್ಯ) ಕೆಂಗಲ್ ಹನುಮಂತಯ್ಯ ವಿಧಾನ ಸೌಧ ಎಂಬ ವಾಸ್ತುಶಿಲ್ಪದ ಕರ್ತೃ.  ಕನ್ನಡ ಮಾತನಾಡುವ ಜನರಿರುವ ಪ್ರದೇಶಗಳನ್ನು ಒಂದೆಡೆ ಸೇರಿಸಿ ಒಂದು ಗಡಿ ಪ್ರದೇಶ ತರುವಲ್ಲಿ ಅವರ ಪಾತ್ರವನ್ನು ಯಾರು ಮರೆಯುವಂತಿಲ್ಲ. ಕೆಂಗಲ್ ಹನುಮಂತಯ್ಯ ಡಿಸೆಂಬರ್ 1, 1980ರಲ್ಲಿ ಕಾಲವಾದರು.


* ಕಡಿದಾಳ್ ಮಂಜಪ್ಪ


1908 ರಲ್ಲಿ ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲೂಕಿನ, ಹರಗೋಳಿಗೆ ಎಂಬ ಗ್ರಾಮದಲ್ಲಿ ಜನಿಸಿದ ಕಡಿದಾಳ್ ಮಂಜಪ್ಪ ಕರ್ನಾಟಕದಲ್ಲಿ ಅತಿ ಕಡಿಮೆ ಅವಧಿಯ ಹಾಗೂ ಕರ್ನಾಟಕದ (ಆಗಿನ  ಮೈಸೂರು ಸಂಸ್ತಾನದ) ಮೂರನೇ ಮುಖ್ಯಮಂತ್ರಿ. 
 ಮಂಜಪ್ಪ ಕೇವಲ ರಾಜಕೀಯ ವ್ಯಕ್ತಿ ಮಾತ್ರ ಆಗಿರದೆ ಕಾದಂಬರಿಗಳನ್ನು ಸಹ ಬರೆದಿದ್ದಾರೆ. 'ನನಸಾಗದ ಕನಸು' (ಅನ್ ಅನಲೈಸ್ದ್ ಡ್ರೀಮ್) ಅವರ ಆತ್ಮ ಚರಿತ್ರೆಯನ್ನು ತಿಳಿಸುವ ಕಾದಂಬರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ 32 ವರ್ಷ ಸೇವೆ ಸಲ್ಲಿಸಿದ ಮಂಜಪ್ಪ 1992ರಲ್ಲಿ ಮರಣ ಹೊಂದಿದರು. 


* ಎಸ್.ನಿಜಲಿಂಗಪ್ಪ


ಡಿಸೆಂಬರ್ 10,1902 ರಂದು ಚಿತ್ರದುರ್ಗ ಜಿಲ್ಲೆಯ ಸಿದ್ದವನಹಲ್ಲಿಯಲ್ಲಿ ಜನಿಸಿದ ಎಸ್. ನಿಜಲಿಂಗಪ್ಪನವರ ಪೂರ್ಣ ಹೆಸರು ಸಿದ್ದವನಹಳ್ಳಿ ನಿಜಲಿಂಗಪ್ಪ. ಮಧ್ಯಮವರ್ಗದ ಲಿಂಗಾಯತ ಕುಟುಂಬದಲ್ಲಿ ಜನಿಸಿದ ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿ ಹಾಗೂ ಕಾನೂನು ಪದವೀಧರರು. ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ್ದ ಅವರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ 1968ರಲ್ಲಿ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 


ಕರ್ನಾಟಕದ ಏಕೀಕರದಲ್ಲಿ ಎಸ್. ನಿಜಲಿಂಗಪ್ಪನವರ ಸೇವೆ ಅಗಧವಗಿದ್ದು ಏಕೀಕೃತ ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ನವೆಂಬರ್ 1, 1956 ರಿಂದ ಮೇ 16,1958 ರವರೆಗೆ ಮುಖ್ಯಮಂತ್ರಿಯಾದರು ಹಾಗೂ  ಜೂನ್ 21, 1962 ರಿಂದ ಮೇ 28, 1968ರವರೆಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.  ಅಧುನಿಕ ಕರ್ನಾಟಕದ ನಿರ್ಮತ್ರುವಾದ ಇವರು ಕೃಷಿ, ನೀರಾವರಿ, ಕೈಗಾರಿಕಾ ಮತ್ತು ಸಾರಿಗೆ ಯೋಜನೆಗಳ ಅಭಿವೃದ್ಧಿಗಾಗಿ ರಾಜ್ಯಕ್ಕೆ ಅವರ ಕೊಡುಗೆ ಅಪಾರ.


ಕಾಂಗ್ರೆಸ್ ವಿಭಜನೆಯ ನಂತರ, ಕ್ರಮೇಣ ರಾಜಕೀಯದಿಂದ ನಿವೃತ್ತರಾದ ನಿಜಲಿಂಗಪ್ಪ ಸರ್ದಾರ್ ವಲ್ಲಭಭಾಯಿ ಪಟೇಲ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ಸರಳತೆಗೆ ಹೆಸರುವಾಸಿಯಾಗಿದ್ದ ಅವರು 97ನೇ ವಯಸ್ಸಿನಲ್ಲಿ ಆಗಸ್ಟ್ 9, 2000 ರಂದು ಚಿತ್ರದುರ್ಗದಲ್ಲಿ ನಿಧನರಾದರು. 


* ಬಿ.ಡಿ.ಜೆತ್ತಿ


ಬಸಪ್ಪ ಧನಪ್ಪ ಜೆತ್ತಿ ಬಿಜಾಪುರ ಜಿಲ್ಲೆಯ, ಜಮ್ಖಂಡಿ ತಾಲೂಕಿನ ಸಾವಳಗಿ ಗ್ರಾಮದವರು ಹಾಗೂ ಧಾರ್ಮಿಕ ವ್ಯಕ್ತಿಯಾಗಿದ್ದರು. ಕುಟುಂಬವು ವಿದ್ಯಾಭ್ಯಾಸ ನೀಡುವಷ್ಟು ಆರ್ಥಿಕ ಅನುಕೂಲ ಹೊಂದಿರಲಿಲ್ಲ. ಬಂದ ತೊಂದರೆ, ಅಡಚಣೆಗಳನ್ನೆಲ್ಲ ಮೀರಿ ಜತ್ತಿ ಲೋಲ್ಹಪುರದ ರಾಜಾರಾಮ್ ಲಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು. 
ಪುರಸಭಾ ಸದಸ್ಯರಾಗಿ ಪ್ರಾರಂಭವಾದ ಅವರ ರಾಜಕೀಯ ಜೀವನವು 1945ರಲ್ಲಿ ಅವರನ್ನು ಜಮ್ಖಂಡಿ ಟೌನ್ ಪುರಸಭೆಯ ಅದ್ಯಕ್ಷರನ್ನಾಗಿ ಆಯ್ಕೆಮಾಡಿತು.ನಂತರ ಸ್ಟೇಟ್ ಲೆಜಿಸ್ಲೇಟಿವ್ ಮತ್ತು ಮಂತ್ರಿಯಾಗಿ ಆಯ್ಕೆಯಾದರು. ಮೇ 16, 1958 ರಿಂದ ಮಾರ್ಚ್ 9,1962 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರ ಅಧಿಕಾರವಧಿಯಲ್ಲಿ ಹಲವು ಭೂ ಸುಧಾರಣೆಗಳು ಜಾರಿಗೆ ಬಂದವು. 


* ಎಸ್.ಆರ್.ಕಂಠಿ


ಎಸ್.ಆರ್. ಕಂಠಿ ಎಂದು ಪರಿಚಿತರಾಗಿರುವ ಶಿವಲಿಂಗಪ್ಪ ಆರ್.ಕಂಠಿ ಮಹಿಳಾ ಸಬಲೀಕರಣ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವ ಅವರ ದೃಷ್ಠಿ ಮತ್ತು ಕನಸಿನಿಂದಾಗಿ ಹೆಚ್ಚು ನೆನಪಾಗುತ್ತಾರೆ. 96 ದಿನಗಳ ಕಾಲ ಮಾತ್ರ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವರು ಆ ಸಮಯದಲ್ಲಿ ಸಮಾಜದಲ್ಲಿ ಉತ್ತಮ ಸುಧಾರಣೆಗಳನ್ನು ತಂದರು. ಎಸ್. ನಿಜಲಿಂಗಪ್ಪ ಅವರ ಮಂತ್ರಿಮಂಡಲದಲ್ಲಿ ಶಿಕ್ಷಣ ಸಚಿವರಾಗಿದ್ದ ಕಂಠಿ  ಮಹಿಳೆಯರ ಸಬಲೀಕರಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಂಡು ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದರು.   


* ವೀರೇಂದ್ರ ಪಾಟೀಲ್


ಗುಲ್ಬರ್ಗ ಜಿಲ್ಲೆಯ ಚಿಂಚೋಳಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪಾಟೀಲ್ ಪ್ರಬಲ ಲಿಂಗಯಿತ ಸಮುದಾಯದ ಪಂಚಮಸಲಿ ಉಪ-ಪಂಗಡದವರು. ಎಸ್.ನಿಜಲಿಂಗಪ್ಪ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದ ಪಾಟೀಲ್.
ಗುಲ್ಬರ್ಗ ಜಿಲ್ಲೆಯ ಚಿಂಚೋಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪಾಟೀಲ್ ಅವರು ಪ್ರಬಲ ಲಿಂಗಾಯತ್ ಸಮುದಾಯದ ಪಂಚಮಸಲಿ ಉಪ-ಪಂಗಡದವರಾಗಿದ್ದರು. ಚಿಂಚೋಳಿ ವಿಧಾನ ಸಭಾ ಕ್ಷೇತ್ರದಿಂದ ಹಲವು ಬಾರಿ ಆಯ್ಕೆಯಾಗಿದ್ದಾರೆ. ಮೇ 29,1968 ರಿಂದ ಮಾರ್ಚ್ 18,1971ರವರೆಗೆ ಮೊದಲಬಾರಿಗೆ ಹಾಗೂ ನವೆಂಬರ್ 30,1989 ರಿಂದ ಅಕ್ಟೋಬರ್ 10,1990 ರವರೆಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. 
 
ಕಾವೇರಿ ಜಲಾನಯನ ಪ್ರದೇಶದಲ್ಲಿನ ನೀರಾವರಿ ಯೋಜನೆಗಳಿಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದ ಸಂದರ್ಭಗಳಲ್ಲಿ ಯೂನಿಯನ್ ವಾಟರ್ ಕಮಿಷನ್ ವಿರೋಧಿಸಿ ದಕ್ಷಿಣ ಕರ್ನಾಟಕ ಪ್ರದೇಶದ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಹಾಗೂ ಕಾವೇರಿಯನ್ನು ಅವಲಂಬಿಸಿರುವ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದರು. ಅವರು ಬೆಂಗಳೂರಿನಲ್ಲಿ 14 ಮಾರ್ಚ್ 1997 ರಂದು ಇಹಲೋಕ ತ್ಯಜಿಸಿದರು.


* ಡಿ.ದೇವರಾಜ್ ಅರಸ್


ಡಿ.ದೇವರಾಜ್ ಅರಸ್ ಆಗಸ್ಟ್ 15, 1915 ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ತಂದೆ-ದೇವರಾಜ ಅರಸ್, ತಾಯಿ-ದೇವೀರ ಅಮ್ಮಣ್ಣಿ ಹಾಗೂ ಸಹೋದರ-ಕೆಂಪರಾಜ್ ಅರಸ್. ತಂದೆ ಭೂ-ಮಾಲೀಕರು, ತಾಯಿ-ಧಾರ್ಮಿಕ ಮತ್ತು ಸಾಂಪ್ರದಾಯಿಕ ಮಹಿಳೆ. ಇವರು ಬಹಳ ಶ್ರೀಮಂತ ಕುಟುಂಬದವರು ಹಾಗೂ ಒಡೆಯರ್ ಮನೆತನಕ್ಕೆ ದೂರದ ಸಂಬಂಧಿಕರಾಗಿದ್ದರು. ಅರಸ್ ತಮ್ಮ 15ನೇ ವಯಸ್ಸಿನಲ್ಲಿ 11ವರ್ಷದ ಚಿಕ್ಕಮ್ಮಣ್ಣಿಯವರನ್ನು ಮದುವೆಯಾದರು. ಅವರಿಗೆ ಚಂದ್ರ ಪ್ರಭಾ, ನಾಗರತ್ನಾ ಮತ್ತು ಭಾರತಿ ಮೂರು ಪುತ್ರಿಯರು.


ಅರಸು ಸಮುದಾಯದ ಪುತ್ರರಿಗೆ ಯೋಗ್ಯವಾದ ಶಿಕ್ಷಣವನ್ನು ಒದಗಿಸಲು ಮೈಸೂರು ಮಹಾರಾಜರಿಂದ ಸ್ಥಾಪಿಸಲ್ಪಟ್ಟ ಮೈಸೂರಿನ ಅರಸು ಬೋರ್ಡಿಂಗ್ ಸ್ಕೂಲ್ನಲ್ಲಿ ದೇವರಾಜ್ ಅರಸ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ ಎ ಪದವಿ ಪಡೆದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಲಹಲ್ಲಿಗೆ ಹಿಂದಿರುಗಿ ಕೃಷಿಯಲ್ಲಿ ತೊಡಗಿದರು. ಆದರೆ ಸ್ವಭಾವತಃ ನಾಯಕತ್ವದ ಗುಣವನ್ನು ಹೊಂದಿದ್ದ ಅರಸ್ ರಾಜಕೀಯದಲ್ಲಿ ತೊಡಗಿದರು. 


ಡಿ. ದೇವರಾಜ್ ಅರಸ್ ಅವರು ರಾಜ್ಯವು ನೋಡಿದ ಶ್ರೇಷ್ಠ ಸಾಮಾಜಿಕ ಸುಧಾರಕರು. ಸತತ ಹತ್ತು ವರ್ಷ ಶಾಸಕರಾಗಿ ಆಯ್ಕೆಯಾಗಿದ್ದ ಅರಸು ಮಾರ್ಚ್ 20,1972 – ಡಿಸೆಂಬರ್ 31,1977 ಹಾಗೂ ಫೆಬ್ರವರಿ 28, 1978 – ಜನವರಿ 7, 1980 ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರ ಅಧಿಕಾರವು ಸಮಾಜದಲ್ಲಿ ಕೆಳವರ್ಗ ಎಂದು ನೋಡಲಾಗುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ಜಾತಿಗಳನ್ನು ಗುರಿಯಾಗಿಟ್ಟುಕೊಂಡು ಸುಧಾರಣೆಗಳನ್ನು ತರುತ್ತಿದ್ದರು. "ಬಡತನ ನಿರ್ಮೂಲನೆ" ಅವರ ಮೊದಲ ಆದ್ಯತೆ. ರಾಜ್ಯದಲ್ಲಿ ಸುಧಾರಣೆ ತರಲು ಶೈಕ್ಷಣಿಕ ಹಾಗೂ ತಂತ್ರಜ್ಞಾನ ಹೊಂದಿದ ಮಂತ್ರಿಮಂಡಲವನ್ನು ರಚಿಸಿದರು. "ಉಳುವವನಿಗೆ ಭೂಮಿ" ಅವರ ಮತ್ತೊಂದು ಮಹತ್ತರವಾದ ಯೋಜನೆ. 1973ರಲ್ಲಿ ಮೈಸೂರನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ಅವರ ಕಾಲದಲ್ಲಿ 16,000 ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಒದಗಿಸಲಾಯಿತು. ಇವರ ಯೋಜನೆಗಳಿಂದಾಗಿ ಕೂಲಿ ಮಾಡುವವರು ಭೂ-ಮಾಲೀಕರಾದರು, ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆಯಾಯಿತು. ನೀರಾವರಿ ಯೋಜನೆಗಳಿಂದಾಗಿ ರೈತ ಸಮುದಾಯಕ್ಕೆ ಬಹಳ ಅನುಕೂಲವಾಯಿತು. ಜನನಾಯಕ, ಬಡವರ ಧ್ವನಿ ಡಿ.ದೇವರಾಜ್ ಅರಸ್   ಜೂನ್ 6, 1982ರಲ್ಲಿ ನಿಧನರಾದರು. 


* ಆರ್.ಗುಂಡುರಾವ್ 


ಏಪ್ರಿಲ್ 8, 1937 ರಲ್ಲಿ ಕುಶಾಲನಗರದಲ್ಲಿ ಜನಿಸಿದರು. ತಂದೆ-ಕೆ.ರಾಮರಾವ್ ಮತ್ತು ತಾಯಿ-ಚಿನ್ನಮ್ಮ.  ಅಮಥಿ ಶಾಲೆಯಲ್ಲಿ ರಾವ್ ವಿದ್ಯಾಭ್ಯಾಸ. ಆರ್. ಗುಂಡುರಾವ್ ಒಬ್ಬ ಒಳ್ಳೆಯ ಬಾಲ್ ಬ್ಯಾಡ್ಮಿಂಟನ್ ಆಟಗಾರ್. ಇವರ ಪುತ್ರ ದಿನೇಶ್ ಗುಂಡು ರಾವ್ ಪ್ರಸ್ತುತ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ಕೂಡ.


ರಾವ್ ರಾಜಕೀಯ ಜೀವನ ಕುಶಾಲನಗರ ಟೌನ್ ಪುರಸಭೆ ಅಧ್ಯಕ್ಷರಾಗಿ ಪ್ರಾರಂಭವಾಯಿತು. ನಂತರ 1972 ರಿಂದ 1978 ರವರೆಗೆ ಸೋಮುವಾರ ಪೇಟೆಯ ಶಾಸಕರಾಗಿ ಆಯ್ಕೆಯಾದರು. ನಂತರ 1989 ರಿಂದ 1991 ರವರೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಚುನಾಯಿತರಾದರು. ಡಿ. ದೇವರಾಜ್ ಅರಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಅಲ್ಪಾವಧಿಯ ಪ್ರತಿಪಕ್ಷ ನಾಯಕರೂ ಸಹ ಆಗಿದ್ದರು.


ಡಿ.ದೇವರಾಜ್ ಅರಸ್ ನಂತರ ಜನವರಿ 12, 1980 ರಿಂದ ಜನವರಿ 6, 1983ರವರೆಗೆ  ಕರ್ನಾಟಕದ ಮುಖ್ಯಮಂತ್ರಿಯಾದರು. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಇವರ ಸಮಯದಲ್ಲಿ ಪ್ರಾರಂಭವಾಯಿತು. ಮೈಸೂರಿನ "ಕಲಾ ಮಂದಿರ" ನಿರ್ಮಾಣಕ್ಕೂ ರಾವ್ ಕಾರಣರಾಗಿದ್ದಾರೆ. ಕರ್ನಾಟಕದಲ್ಲಿ ಹಲವು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಮಂಜೂರು ಮಾಡಿದರು.


ಕರ್ನಾಟಕದಲ್ಲಿ ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ನರಗುಂದ ಮತ್ತು ನವಲಗುಂದದಲ್ಲಿ ರೈತರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದಾಗ ಅವರು ತೆಗೆದುಕೊಂಡ ನಿರ್ಧಾರಗಳು ಅವರನ್ನು ಹೆಚ್ಚು ಹೆಸರುವಾಸಿಯಾಗಿ ಮಾಡಿದೆ.


ಲ್ಯುಕೆಮಿಯಾದಿಂದ ಬಳಲುತ್ತಿದ್ದ ರಾವ್ ಆಗಸ್ಟ್ 22, 1993ರಲ್ಲಿ ಲಂಡನ್ನಿನಲ್ಲಿ ಮರಣ ಹೊಂದಿದರು.


* ರಾಮಕೃಷ್ಣ ಹೆಗಡೆ


ಹವ್ಯಾಕ ಬ್ರಾಹ್ಮಣ ಕುಟುಂಬದ ಮಹಾಬಲೇಶ್ವರ ಹೆಗ್ಡೆ ಹಾಗೂ ಸರಸ್ವತಿ ಹೆಗ್ಡೆ ಅವರ ಪುತ್ರರಾಗಿ ರಾಮಕೃಷ್ಣ ಹೆಗಡೆ ಆಗಸ್ಟ್ 29, 1926 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಶಕುಂತಲರೊಂದಿಗೆ ವಿವಾಹ. ಮಗ- ಭಾರತ್ ಹೆಗ್ಡೆ, ಸಮತಾ ಮತ್ತು ಸುಮತಾ ಇಬ್ಬರು ಹೆಣ್ಣು ಮಕ್ಕಳು. ವಾರಣಾಸಿಯಲ್ಲಿರುವ ಕಾಶಿ ವಿದ್ಯಾಪೀಠದಲ್ಲಿ ಅಧ್ಯಯನ ನಡೆಸಿದ ಹೆಗ್ಡೆ ಅವರು ಅಲಹಾಬಾದ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಪದವಿ ಪಡೆದರು. ವೃತ್ತಿಯಲ್ಲಿ ವಕೀಲರಾದ ಹೆಗ್ಡೆ 1942 ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡರು. ನಂತರ ಕಾಂಗ್ರೆಸ್ ನಲ್ಲಿ ಸಕ್ರಿಯ ಸದಸ್ಯರಾಗಿ ತೊಡಗಿದರು.


ಕಾಂಗ್ರೆಸ್ ನಲ್ಲಿ ತೊಡಗಿದ್ದ ಹೆಗ್ಡೆ 1954 ರಿಂದ 1957 ರವರೆಗೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1958ರಿಂದ  1962 ರ ವರೆಗೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1957 ರಲ್ಲಿ ಕರ್ನಾಟಕ ಶಾಸಕಾಂಗ ಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು ಉಪ ಮುಖ್ಯ ಮಂತ್ರಿಯಾದರು. ಇವರು ಎಸ್. ನಿಜಲಿಂಗಪ್ಪ (1956-58 ಮತ್ತು 1962-68) ಮತ್ತು ವೀರೇಂದ್ರ ಪಾಟೀಲ್ (1968-71) ಸರ್ಕಾರದಲ್ಲಿ ಆಡಳಿತದ ಅನುಭವ ಹೊಂದಿದ್ದರು. ನಂತರ ಅವರು 1962-71ರ ನಡುವೆ ಯೂತ್ ವೆಲ್ಫೇರ್ ಮತ್ತು ಕ್ರೀಡಾ, ಸಹಕಾರ, ಇಂಡಸ್ಟ್ರೀಸ್, ಯೋಜನೆ, ಪಂಚಾಯತ್ ರಾಜ್, ಅಭಿವೃದ್ಧಿ, ಮಾಹಿತಿ ಮತ್ತು ಪ್ರಚಾರ, ಹಣಕಾಸು ಮುಂತಾದ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.


ಜನವರಿ 1983ರ ಚುನಾವಣೆಯಲ್ಲಿ ಜನತಾ ದಳ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಅಧಿಕಾರಕ್ಕೆ ಬಂದಿತು. ರಾಮಕೃಷ್ಣ ಹೆಗ್ಡೆ ಜನವರಿ10, 1983 ರಲ್ಲಿ ಜನತಾ ದಳದ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆ ಆದರು. ಜನವರಿ10, 1983 – ಡಿಸೆಂಬರ್ 29, 1984 ರವರೆಗೆ ಮೊದಲ ಬಾರಿಗೆ, ಮಾರ್ಚ್ 8, 1985 ರಿಂದ ಫೆಬ್ರವರಿ 13,1986 ರವರೆಗೆ ಎರಡನೇ ಬಾರಿಗೆ ಮತ್ತು ಫೆಬ್ರವರಿ 16, 1986 ರಿಂದ  ಆಗಸ್ಟ್ 10, 1988 ರವರೆಗೆ ಮೂರು ಬಾರಿ ಆಯ್ಕೆಯಾದರು. 


ಬಹುಮುಖ ವ್ಯಕ್ತಿತ್ವ ಉಳ್ಳ ಇವರು ಮರಣ ಮೃದಂಗ, ಪ್ರಜಾ ಶಕ್ತಿ ಮುಂತಾದ ನಾತಕಗಳಲಿ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪಿ.ಜಿ.ಆರ್.ಸಿಂಧ್ಯಾ, ಆರ್.ವಿ.ದೇಶಪಾಂಡೆ ಮತ್ತು ಇನ್ನೂ ಅನೇಕ ರಾಜಕಾರಣಿಗಳನ್ನು ಬೆಳೆಸಿದ್ದಾರೆ. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹೆಗ್ಡೆ  ಜನವರಿ 12, 2004 ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು.


* ಎಸ್.ಆರ್.ಬೊಮ್ಮಾಯಿ 


ಎಸ್.ಆರ್. ಬೊಮ್ಮೈ 1924 ರ ಜೂನ್ 6 ರಂದು ಧಾರವಾಡ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಕರದಾಗಿ ಗ್ರಾಮದ ಸದರ್ ಲಿಂಗಾಯತ್ ಕುಟುಂಬದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಸೋಮಪ್ಪ ರಾಯಪ್ಪ ಬೊಮ್ಮಾಯಿ.  ವೃತ್ತಿಯಲ್ಲಿ ವಕೀಲರಾದ ಇವರು 1942 ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದರು. ಬಾಂಬೆ ಪ್ರೆಸಿಡೆನ್ಸಿ, ಹೈದರಾಬಾದ್ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳಾಗಿ ವಿನ್ಗದಿಸಲ್ಪಟ್ಟ ಕರ್ನಾಟಕದ ಏಕೀಕರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.


ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಹಲವು ಬಾರಿ ಆಯ್ಕೆಯಾದರು. 1972 ರಿಂದ 1978 ರವರೆಗೆ ಕರ್ನಾಟಕ ಶಾಸಕಾಂಗ ಮಂಡಳಿಯ ಸದಸ್ಯರಾಗಿದ್ದರು. ಅವರು ರಾಮಕೃಷ್ಣ ಹೆಗ್ಡೆ, ಜೆ.ಹೆಚ್. ಪಟೇಲ್ ಮತ್ತು ಹೆಚ್.ಡಿ.ದೇವೇಗೌಡ ಅವರ ಜೊತೆಯಲ್ಲಿ ಜನತಾ ಪಾರ್ಟಿಯಲ್ಲಿ 1983 ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿದರು.  ನೈತಿಕ ಆಧಾರದ ಮೇಲೆ ಹೆಗ್ಡೆ ಹೊರಟುಹೋದ ನಂತರ, ಶ್ರೀ. ಬೊಮ್ಮಾಯಿಆಗಸ್ಟ್ 13, 1988 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು ಅವರ ಸರ್ಕಾರವನ್ನು ಗವರ್ನರ್ ಪಿ. ವೆಂಕಟಸುಬ್ಬಯ್ಯ ಅವರು ಏಪ್ರಿಲ್ 21, 1989 ರಂದು ವಜಾಗೊಳಿಸಿದರು. ನಂತರ ಬೊಮ್ಮಾಯಿ 1990 ರಿಂದ 1996 ರವರೆಗೆ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರು 1992 ಮತ್ತು 1998 ರಲ್ಲಿ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾದರು.1996 ರಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿಯ ಕೇಂದ್ರ ಸಚಿವರಾದರು ಮತ್ತು ಪ್ರಧಾನ ಮಂತ್ರಿಗಳಾದ ಎಚ್. ಡಿ. ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ಅವರೊಂದಿಗೆ ಸೇವೆ ಸಲ್ಲಿಸಿದರು. 1999 ರಲ್ಲಿ, ಜನತಾ ದಳ ವಿಭಜನೆಯ ನಂತರ ಅವರು ಜೆಡಿ (ಯು) ಪಕ್ಷದೊಂದಿಗೆ ಬದಲಾಯಿತು ಮತ್ತು ಜನತಾ ದಳದ ವಿಭಿನ್ನ ಬಣಗಳ ವಿಲೀನಕ್ಕಾಗಿ ವೇದಿಕೆಯಾಗಿ 2002 ರಲ್ಲಿ ಅಖಿಲ ಭಾರತ ಪ್ರಗತಿಪರ ಜನತಾ ದಳವನ್ನು ರಚಿಸಿದರು. ದೊಡ್ಡ ಪ್ರಮಾಣದ ಪಕ್ಷಾಂತರಗಳ ನಂತರ, ದುರ್ಬಲಗೊಂಡ ಪಕ್ಷವು ಅಂತಿಮವಾಗಿ ಜೆಡಿ (ಯು) ನೊಂದಿಗೆ ವಿಲೀನಗೊಂಡಿತು. ಅವರು 84 ನೇ ವಯಸ್ಸಿನಲ್ಲಿ 2007 ರ ಅಕ್ಟೋಬರ್ 10 ರಂದು ನಿಧನರಾದರು.


* ಎಸ್.ಬಂಗಾರಪ್ಪ


ಬಂಗಾರಪ್ಪ ಅವರು 26 ಅಕ್ಟೋಬರ್ 1933 ರಂದು ಕರ್ನಾಟಕದ ಶಿವಮೊಗ್ಗಾ ಜಿಲ್ಲೆಯ ಕುಬಾತುರ್ ಗ್ರಾಮದ ಸೊರಾಬಾ ತಾಲ್ಲೂಕಿನಲ್ಲಿ ಜನಿಸಿದರು.ದೀವಾರು-ಇಡಿಗಾ ಸಮುದಾಯಕ್ಕೆ ಸೇರಿದವರು. ಅವರು ಬಿ.ಎ , ಕಾನೂನು ಮತ್ತು ಸಾಮಾಜಿಕ ವಿಜ್ಞಾನದಲ್ಲಿ ಡಿಪ್ಲೋಮಾದಲ್ಲಿ  ಪದವೀಧರರು. ಅವರು 1958 ರಲ್ಲಿ ಶಕುಂತಲಾ ಅವರನ್ನು ವಿವಾಹವಾದರು. ಅವರು ದೀವಾರು-ಇಡಿಗಾ ಸಮುದಾಯಕ್ಕೆ ಸೇರಿದವರು. 


ಅಕ್ಟೋಬರ್ 17, 1990 ರಿಂದ ನವೆಂಬರ್ 19, 1992 ರವರೆಗೆ ಕರ್ನಾಟಕದ 12 ನೇ ಮುಖ್ಯಮಂತ್ರಿಯಾಗಿದ್ದರು. ಅವರು 1996 ರಿಂದ 2009 ರ ವರೆಗೆ ಲೋಕಸಭೆಗೆ ಸ್ಪರ್ಧಿಸುವ ಮೊದಲು 1967 ಮತ್ತು 1996 ರ ನಡುವೆ ಕರ್ನಾಟಕದ ಶಾಸನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರ  44 ವರ್ಷಗಳ ವೃತ್ತಿಜೀವನದಲ್ಲಿ ಕರ್ನಾಟಕ ವಿಕಾಸ್ ಪಾರ್ಟಿ ಮತ್ತು ಕರ್ನಾಟಕ ಕಾಂಗ್ರೆಸ್ ಪಾರ್ಟಿಗಳನ್ನು ಸ್ಥಾಪಿಸಿದರು.


ಬಂಗಾರಪ್ಪ ತಮ್ಮ ರಾಜಕೀಯ ಜೀವನವನ್ನು ಸಮಾಜವಾದಿಯಾಗಿ ಆರಂಭಿಸಿದರು. ಶಿವಮೊಗ್ಗ ಜಿಲ್ಲೆಯ ಸೊರಾಬಾ ಕ್ಷೇತ್ರದಿಂದ ಅವರು 1967 ರಲ್ಲಿ ಕರ್ನಾಟಕ ಶಾಸಕಾಂಗ ಸಭೆಗೆ ಆಯ್ಕೆಯಾದರು. ಅವರು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೆಸರಾಗಿದ್ದರು, ಅವರ ಬೆಂಬಲಿಗರು ಅವರನ್ನು ಸೊಲ್ಲಿಲ್ಲದ ಸರದಾರ (ಸೋಲಿಸಲಾಗದ ನಾಯಕ) ಎಂದು ಕರೆದರು. ಏಳು ಸಂದರ್ಭಗಳಲ್ಲಿ ಸೊರಾಬಾ ವಿಧಾನಸಭಾ ಕ್ಷೇತ್ರವನ್ನು ಗೆದ್ದ ನಂತರ, ಬಂಗಾರಪ್ಪ ಅವರು ಮತ್ತು ಕರ್ನಾಟಕ ಶಾಸಕಾಂಗ ಸಭೆಯನ್ನು 1996 ರಲ್ಲಿ ಬಿಟ್ಟರು. ಅದೇ ವರ್ಷ ಅವರು ಶಿವಮೊಗ್ಗ ಕ್ಷೇತ್ರವನ್ನು ಸ್ಪರ್ಧಿಸಿದರು, ಹೆಚ್ಚಾಗಿ ಇಡಿಗಾ ಜಾತಿ ಪ್ರಾಬಲ್ಯ ಸಾಧಿಸಿದ ಪ್ರದೇಶ, ಲೋಕಸಭೆಯು ಕೆಸಿಪಿ ಅಭ್ಯರ್ಥಿಯಾಗಿ. ನಂತರ ಅವರು ಕರ್ನಾಟಕ ವಿಕಾಸ್ ಪಾರ್ಟಿ (ಕೆವಿಪಿ) ಯನ್ನು ರೂಪಿಸಿದರು ಮತ್ತು ಕೆವಿಪಿಯ ಪ್ರತಿನಿಧಿಯಾಗಿ 1998 ರಲ್ಲಿ ಸೋತರು. ಆದಾಗ್ಯೂ, ಅವರು 1999 ರಲ್ಲಿ INC ಅಭ್ಯರ್ಥಿಯಾಗಿ ಮತ್ತೆ ಆಯ್ಕೆಯಾದರು. 2004 ರಲ್ಲಿ, ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಸೇರಿದರು ಮತ್ತು ಬಹುಮತದೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾದರು.  2005 ರಲ್ಲಿ ಅವರು ಬಿಜೆಪಿಯಿಂದ ರಾಜೀನಾಮೆ ನೀಡಿದರು ಮತ್ತು ಸಮಾಜವಾದಿ ಪಕ್ಷದೊಂದಿಗೆ ಸೇರಿದರು. 2008 ರಲ್ಲಿ ಅವರು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ವಿರುದ್ಧ ಶಿಕಾರಿಪುರ ಸಂಸತ್ ಸ್ಥಾನದಲ್ಲಿ ಸ್ಪರ್ಧಿಸಿ ಸೋತರು. 2009 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಯಡಿಯೂರಪ್ಪನ ಮಗ ಬಿ. ವೈ. ರಾಘವೇಂದ್ರ ಅವರ ವಿರುದ್ದ ಸೋತರು. ಆ ಕೊನೆಯ ಚುನಾವಣೆಯಲ್ಲಿ, ಬಂಗಾರಪ್ಪ ಅವರು INC ಯನ್ನು ಪ್ರತಿನಿಧಿಸಿದ್ದರು. ನಂತರ, ಡಿಸೆಂಬರ್ 2010 ಮತ್ತು ಅವನ ರಾಜಕೀಯ ಜೀವನ ಕುಸಿತದೊಂದಿಗೆ, ಬಂಗಾರಪ್ಪ ಜನತಾ ದಳ (ಸೆಕ್ಯುಲರ್) ಸೇರಿದರು. 


ದೇವರಾಜ್ ಅರಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. 1985 ರಲ್ಲಿ ಕರ್ನಾಟಕ ಶಾಸನಸಭೆಯ ವಿರೋಧ ಪಕ್ಷದ ನಾಯಕನಾಗಿ ಬಂಗಾರಪ್ಪನನ್ನು ನೇಮಕ ಮಾಡಲಾಯಿತು. ಮುಖ್ಯಮಂತ್ರಿಯಿಂದ ಹೊರಗುಳಿದ ನಂತರ ಅವರ ಚುನಾವಣಾ ಯಶಸ್ಸು ಮತದಾರರೊಂದಿಗಿನ ತನ್ನ ವೈಯಕ್ತಿಕ ಬೆಂಬಲದ ವ್ಯಾಪ್ತಿಯನ್ನು ಪ್ರದರ್ಶಿಸಿತು, ಅದು ಅವರ ರಾಜಕೀಯ ಪಕ್ಷವನ್ನು ಅವಲಂಬಿಸಿದೆ ಎಂದು ತೋರುತ್ತಿತ್ತು, ಆದರೂ  ಕಾಲಾನಂತರದಲ್ಲಿ ಅವರ ಜನಪ್ರಿಯತೆಯು ಕುಸಿಯಿತು. ಇವರು ಡಿಸೆಂಬರ್26, 2011 ರಲ್ಲಿ  ತಮ್ಮ 78ನೇ ವಯಸ್ಸಿನಲ್ಲಿ  ಕಾಲವಾದರು.


* ಎಂ.ವೀರಪ್ಪ ಮೊಯ್ಲಿ


ವೀರಪ್ಪ ಮೋಯ್ಲಿಜನವರಿ 12, 1940 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾರ್ಪಡಿ ಎಂಬ ಗ್ರಾಮದಲ್ಲಿ ಜನಿಸಿದರು. ದೇವಾಡಿಗ ಸಮುದಾಯಕ್ಕೆ ಸೇರಿದವರು. ಕಾನೂನು ಪದವೀದರರು. ನವೆಂಬರ್ 19, 1992 ರಿಂದ ಡಿಸೆಂಬರ್ 11, 1994ರವರೆಗೆ ಕರ್ನಾಟಕದ 13ನೇ ಮುಖ್ಯಮಂತ್ರಿಯಾಗಿದ್ದರು.  ಕೇಂದ್ರ ಸರ್ಕಾರದ ಮಾಜಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿದ್ದ ಇವರು ಪ್ರಸ್ತುತ ಕರ್ನಾಟಕದ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಯ ಸದಸ್ಯರು. ಕಾಂಗ್ರೇಸ್ ಪಕ್ಷದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಹಣಕಾಸು, ಇಂಧನ, ನೀರಾವರಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ ಇನ್ನೂ ಮೊದಲಾದ ಖಾತೆಗಳನ್ನು ನಿರ್ವಹಿಸಿದ್ದಾರೆ. 


* ಎಚ್.ಡಿ.ದೇವೇಗೌಡ
ಭಾರತದ ಮಾಜಿ ಪ್ರಧಾನಮಂತ್ರಿ, ಜಾತ್ಯಾತೀತ ಜನತಾ ದಳದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ. ಇವರ ಪೂರ್ಣ ಹೆಸರು ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ. ಇವರು ಮೇ 18, 1933ರಲ್ಲಿ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಇವರು ಹಾಸನ ಜಿಲ್ಲೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು. ಡಿಸೆಂಬರ್ 11, 1994 ರಿಂದ ಮೇ 31, 1996 ರವರೆಗೆ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿದ್ದರು. ನಂತರ ಜೂನ್ 1996 ರಿಂದ ಏಪ್ರಿಲ್ 1997ರವರೆಗೆ ಭಾರತದ ಪ್ರಧಾನಮಂತ್ರಿ ಆಗಿದ್ದರು.  


1953ರಲ್ಲಿ ಕಾಂಗ್ರೇಸ್ ಪಕ್ಷವನ್ನು ಸೇರಿದ ಇವರು 1962 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಹೊರಬಂದರು. 1962 ರಲ್ಲಿ ಹೊಳೆನರಸಿಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ತಿಯಾಗಿ ಚುನಾಯಿತರಾದರು.  1972–76 ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 1994 ರಲ್ಲಿ ಜನತಾದಳ ಪಕ್ಷದ ಅಧಯಕ್ಷರಾದರು. 1991 ರಲ್ಲಿ ಮೊದಲ ಬಾರಿಗೆ ಲೋಕಸಭಾ ಸದಸಯರಾಗಿದ್ದ ದೇವೇಗೌಡರು, 2014 ರ ಲೋಕಸಭಾ ಚುನಾವಣೆಯಲ್ಲಿ ಆರನೇ ಬಾರಿ ಆಯ್ಕೆಯಾಗಿದ್ದಾರೆ. ಇವರು ರೈತಪರ ನಾಯಕ. 


* ಜೆ.ಎಚ್.ಪಟೇಲ್


ಜಯದೇವಪ್ಪ ಹಾಲಪ್ಪ ಪಟೇಲ್ ಅಕ್ಟೋಬರ್ 1, 1930 ರಲ್ಲಿ ಈಗಿನ ದಾವಣಗೆರೆ ಜಿಲ್ಲೆಯ ಕರಿಗನುರ್ ನಲ್ಲಿ ಲಿಂಗಾಯಿತ ಕುಟುಂಬದಲ್ಲಿ ಜನಿಸಿದರು. ಇವರು ಮೇ 31 1996 ರಿಂದ ಅಕ್ಟೋಬರ್ 7, 1999 ರವರೆಗೆ ಕರ್ನಾಟಕದ 15ನೇ ಮುಖ್ಯಮಂತ್ರಿಯಾಗಿದ್ದರು. ಇವರು 1967ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದರು. ಲೋಕ ಸಭೆಯಲ್ಲಿ ಮೊದಲ ಬಾರಿಗೆ 'ಕನ್ನಡ'ದಲ್ಲಿ ಮಾತನಾಡುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದರು. ಆಗಿನ ಲೋಕಸಭಾ ಸ್ಪೀಕರ್ ಆಗಿದ್ದ ನೀಲಂ ಸಂಜೀವ ರೆಡ್ಡಿ, ಪಟೇಲ್ ಅವರನ್ನು ಕನ್ನಡದಲ್ಲಿ ಮಾತನಾಡಲು ಅನುವುಮಾಡಿಕೊಟ್ಟರು. ನಂತರದಲ್ಲಿ ಕರ್ನಾಟಕದ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ರಾಮಕೃಷ್ಣ ಹೆಗ್ಡೆ, ಎಸ್.ಆರ್.ಬೊಮ್ಮಾಯಿ ಅವರ ಅಧಿಕಾರವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಪಟೇಲ್ ಡಿಸೆಂಬರ್ 12, 2000ರಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು.


* ಎಸ್.ಎಂ.ಕೃಷ್ಣ 


ಎಸ್.ಎಂ.ಕೃಷ್ಣ  ಮೇ 1, 1932ರಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದರು. ಇವರ ಪೂರ್ಣ ಹೆಸರು. ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಭಾರತದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. 1962ರಲ್ಲಿ ಪ್ರಜಾ ಸಮಾಜವಾದಿ ಪಕ್ಷ ಸೇರುವ ಮೂಲಕ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ನಂತರ 1971ರಲ್ಲಿ ಕಾಂಗ್ರೇಸ್ ಪಕ್ಷವನ್ನು ಸೇರಿದರು. 1983 ರಿಂದ 1985 ರ ನಡುವೆ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಲೋಕಸಭೆ, ರಾಜ್ಯಸಭೆ ಗಳಲ್ಲಿ ಹಲವು ಬಾರಿ ಶಾಸಕರಾಗಿದ್ದರು. ಕರ್ನಾಟಕ ವಿಧಾನಸಭಾ ಕ್ಷೇತ್ರದಲ್ಲಿಯೂ ಆಯ್ಕೆಯಾಗಿದ್ದ ಇವರು ವಿಧಾನಸಭಾ ಸ್ಪೀಕರ್, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಅಕ್ಟೋಬರ್ 11, 1999 ರಿಂದ ಮೇ 28, 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿದ್ದರು. 2004 ರಿಂದ 2008ರ ಅವಧಿಯಲ್ಲಿ ಮಹಾರಾಷ್ಟ್ರದ 19ನೇ ರಾಜ್ಯಪಾಲರಾಗಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ 2009 ರಿಂದ 2012 ರವರೆಗೆ ವಿದೇಶಾಂಗ ಸಚಿವರಾಗಿದ್ದರು. ಕಾಂಗ್ರೇಸ್ ಪಕ್ಷದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಕೃಷ್ಣ ಜನವರಿ 29, 2017ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು. 



* ಎನ್. ಧರಂ ಸಿಂಗ್ 


ರಾಜಕೀಯದಲ್ಲಿ 'ಅಜಾತ ಶತ್ರು' ಎಂದೇ ಧರಂ ಸಿಂಗ್ ಪ್ರಸಿದ್ದರು. ಇವರು ಡಿಸೆಂಬರ್ 25, 1936ರಲ್ಲಿ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ನೇಲೋಗಿ ಎಂಬ ಗ್ರಾಮದಲ್ಲಿ ಜನಿಸಿದರು. ಹೈದರಾಬಾದ್ನಲ್ಲಿ ಕಾನೂನು ಪದವಿಯನ್ನು ಪಡೆದರು. ನಂತರ 1960ರಲ್ಲಿ ಕಾಂಗ್ರೇಸ್ ಪಕ್ಷವನ್ನು ಸೇರಿದರು. ಇವರು ದೇವರಾಜ್ ಅರಸ್, ಆರ್. ಗುಂಡುರಾವ್, ಎಸ್.ಬಂಗಾರಪ್ಪ, ವೀರಪ್ಪಮೊಯ್ಲಿ ಮತ್ತು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. ಇವರು ಮೇ 28, 2004 ರಿಂದ ಜನವರಿ 28, 2006ರ ವರೆಗೆ ಕಾಂಗ್ರೇಸ್ ಮತ್ತು ಜಾತ್ಯತೀತ ಜನತಾದಳದ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕದ 17ನೇ ಮುಖ್ಯಮಂತ್ರಿಯಾಗಿದ್ದರು. 



* ಎಚ್.ಡಿ.ಕುಮಾರ ಸ್ವಾಮಿ 


ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರ ಸ್ವಾಮಿ ಡಿಸೆಂಬರ್ 16, 1959ರಲ್ಲಿ ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದರು. ಇವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ. ಎಚ್ಡಿಕೆ ರಾಜಕೀಯ ವ್ಯಕ್ತಿ ಮಾತ್ರವಲ್ಲದೆ ಸಿನಿಮಾ ನಿರ್ಮಾಪಕರು ಹೌದು. ಇವರು 1996ರಲ್ಲಿ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಇವರು ಫೆಬ್ರವರಿ 3, 2006 ರಿಂದ ಅಕ್ಟೋಬರ್ 8, 2007ರವರೆಗೆ ಕಾಂಗ್ರೇಸ್ ಮತ್ತು ಜಾತ್ಯತೀತ ಜನತಾದಳದ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿದ್ದರು. 2013ರಲ್ಲಿ ಕಾಂಗ್ರೆಸ್ ಜೊತೆಗೂಡಿ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ 23 ಮೇ 2018ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎಚ್‌ಡಿ‌ಕೆ 2019ರಲ್ಲಿ ಆಪರೇಷನ್ ಕಮಲದಿಂದ ಸರ್ಕಾರ ಉರುಳಿದ್ದರಿಂದ 23 ಜುಲೈ 2021ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 



* ಬಿ.ಎಸ್.ಯಡಿಯೂರಪ್ಪ 


ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರ ಸ್ವಾಮಿ ನಂತರ ನವೆಂಬರ್ 12, 2007ರಲ್ಲಿ  ಬಿ.ಎಸ್.ಯಡಿಯೂರಪ್ಪ ಕೇವಲ 7 ದಿನಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಿತು.  ಮೇ 30, 2008 ರಂದು ಬಿ.ಎಸ್.ಯಡಿಯೂರಪ್ಪ ಮತ್ತೆ ಅಧಿಕಾರವಹಿಸಿಕೊಂಡರು. ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿ ಎನಿಸಿಕೊಂಡರು.


* ಡಿ.ವಿ.ಸದಾನಂದ ಗೌಡ 


ಪ್ರಸ್ತುತ ಕೇಂದ್ರ ಸಚಿವರಾಗಿರುವ  ಡಿ.ವಿ.ಸದಾನಂದ ಗೌಡ ಮಾರ್ಚ್ 18, 1953ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸೂಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಜನಿಸಿದರು. ಇವರು ಕಾನೂನು ಪದವೀಧರರು. ಜನ ಸಂಘದಲ್ಲಿ ಸದಸ್ಯರಾಗುವ ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. ಜನತಾ ಪಕ್ಷದ ವಿಭಜನೆಯ ನಂತರ ಬಿಜೆಪಿ ಪಕ್ಷವನ್ನು ಸೇರಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2011 ರಲ್ಲಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯ ನಂತರ ಆಗಸ್ಟ್ 4, 2011 ರಿಂದ ಜುಲೈ 12, 2012 ರವರೆಗೆ ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿದ್ದರು. 2014ರಿಂದೀಚೆಗೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.



* ಜಗದೀಶ್ ಶೆಟ್ಟರ್ 


ಜಗದೀಶ್ ಶೆಟ್ಟರ್ ಡಿಸೆಂಬರ್ 17, 1955ರಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಗ್ರಾಮದಲ್ಲಿ ಜನಿಸಿದರು. ಶೆಟ್ಟರ್ ಬಿಜೆಪಿ ಶಾಸಕರಾಗಿ ಮತ್ತು ಕ್ಯಾಬಿನೆಟ್ ಶಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2008-2010ರವರೆಗೆ ಕರ್ನಾಟಕದ ವಿಧಾನ ಸಭಾ ಸ್ಪೀಕರ್ ಆಗಿದ್ದರು. ಜುಲೈ 12, 2012 ರಲ್ಲಿ ಕರ್ನಾಟಕದ 21ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಪ್ರಸ್ತುತ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ.



* ಸಿದ್ದರಾಮಯ್ಯ 
 
2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಕರ್ನಾಟಕದ 22ನೇ ಮುಖ್ಯಮಂತ್ರಿ. ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ಸಿದ್ದರಾಮನ ಹುಂಡಿ ಗ್ರಾಮದಲ್ಲಿ 1948ರಲ್ಲಿ ಜನಿಸಿದರು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ ಎಸ್ ಸಿ ಪದವಿ ಪಡೆದರು. ನಂತರ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಕಾನೂನು ಪದವಿಯನ್ನೂ ಗಳಿಸಿದರು. ಇದಕ್ಕೂ ಮೊದಲು ಕರ್ನಾಟಕದ ಜಾನಪದ ಕಲೆಗಳಾಗಿರುವ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಚಿಕ್ಕ ವಯಸ್ಸಿನಲ್ಲೇ ಕಲಿತಿದ್ದರು. ವಿದ್ಯಾರ್ಥಿ ದಿಸೆಯಿಂದಲೂ ಗಣಿತದಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿದ್ದ ಸಿದ್ದರಾಮಯ್ಯ ಒಟ್ಟು 12 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ.
 
ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಮತ್ತು ದಲಿತರ ಪರ ಸದಾ ಹೋರಾಡುವ ಸಿದ್ದರಾಮಯ್ಯ 'ಅಹಿಂದ' ನಾಯಕ ಎಂದೇ ಹೆಸರುವಾಸಿ. ಸಿದ್ದರಾಮಯ್ಯ ಮೈಸೂರಿನಲ್ಲಿ ವಕೀಲರಾಗಿ ವೃತ್ತಿಜೀವನ ಆರಂಭಿಸಿದ ದಿನದಿಂದಲೇ ಜನರ ಒತ್ತಾಯದ ಮೇರೆಗೆ 1978ರಲ್ಲಿ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳ ಪಕ್ಷವನ್ನು ಪ್ರತಿನಿಧಿಸಿ ಚುನಾವಣಾ ರಾಜಕೀಯ ಪ್ರವೇಶಿಸಿದರು. 1983ರಲ್ಲಿ ಮತ್ತೆ ವಿಧಾನಸಭೆಗೆ ಸ್ಪರ್ಧಿಸಿದ ಸಿದ್ದರಾಮಯ್ಯ ಮೊದಲ ಬಾರಿಗೆ ಶಾಸನ ಸಭೆಯನ್ನು ಪ್ರವೇಶಿಸಿದರು. ಸಿದ್ದರಾಮಯ್ಯನವರ ಗೆಲುವು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತು. ಆನಂತರದಲ್ಲಿ ಜನತಾ ಪಕ್ಷವನ್ನು ಸೇರಿ "ಕನ್ನಡ ಕಾವಲು ಸಮಿತಿ"ಯ ಮೊದಲ ಅಧ್ಯಕ್ಷರಾದರು. 1985ರ ಚುನಾವಣೆಯಲ್ಲಿಯೂ ಸಿದ್ದರಾಮಯ್ಯ ಮತ್ತೆ ಗೆಲುವನ್ನು ಸಾಧಿಸಿ ಮೊದಲ ಬಾರಿಗೆ ಸಚಿವರಾದರು. ಅವರು ನಿರ್ವಹಿಸಿದ ಮೊದಲ ಖಾತೆ ಪಶುಸಂಗೋಪನೆ. 1989ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲು ಅನುಭವಿಸಿದರು. ಅದಾದಮೇಲೆ ನಡೆದ 1994ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ದಾಖಲಿಸಿದರು. ಅಷ್ಟೇ ಅಲ್ಲದೆ ಎಚ್.ಡಿ.ದೇವೇಗೌಡ ನೇತೃತ್ವದ ಜನತಾ ದಳ ಸರ್ಕಾರದಲ್ಲಿ ಅತ್ಯಂತ ಮಹತ್ವದ ಹಣಕಾಸು ಸಚಿವರಾದರು. ಅದಾದ ಮೇಲೆ 1996ರಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆದರು. ರಾಜಕಾರಣ ಪ್ರವೇಶಿಸಿ 18 ವರ್ಷಗಳಲ್ಲಿ ಉಪಮುಖ್ಯಮಂತ್ರಿಯೂ ಆದ ಸಿದ್ದರಾಮಯ್ಯ ಅಪರೂಪದ ರಾಜಕಾರಣಿ. ಜನತಾದಳ ವಿಭಜನೆಯ ನಂತರ ಅವರು ಎಚ್.ಡಿ.ದೇವೇಗೌಡರ ಜೊತೆ ಸೇರಿ ಜಾತ್ಯಾತೀಯ ಜನತಾದಳ ಪಕ್ಷವನ್ನು ಸ್ಥಾಪಿಸಿದರು. 2004ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾದರು. ಅಷ್ಟೊತ್ತಿಗಾಗಲೇ ದೇವರಾಜ್ ಅರಸ್ ನಂತರದ ಹಿಂದುಳಿದ ನಾಯಕ ಎಂದು ಗುರುತಿಸಿ ಕೊಂಡಿದ್ದ ಸಿದ್ದರಾಮಯ್ಯ ಅಲ್ಪಸಂಖ್ಯಾತರು ಮತ್ತು ದಲಿತರನ್ನು ಸಂಘಟಿಸಲು ಮುಂದಾದರು. ಆಗ ಕರ್ನಾಟಕದಲ್ಲಿ ಮೊದಲ ಬಾರಿಗೆ ‘ಅಹಿಂದ’ ಎನ್ನುವ ವೇದಿಕೆ -ರಾಜಕೀಯ ಸಂಘಟನೆ ಸೃಷ್ಟಿಯಾಯಿತು. ಸಿದ್ದರಾಮಯ್ಯ ಅಹಿಂದ ನಾಯಕರಾಗಿ ರೂಪುಗೊಂಡ ಪರಿಣಾಮ ಜೆಡಿಎಸ್ ಪಕ್ಷದ ಅಗ್ರ ನಾಯಕ ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅಹಿಂದ ಸಮಾವೇಶದಲ್ಲಿ ಪಾಲ್ಗೊಂಡರು ಎಂಬ ನೆಪ ಇಟ್ಟುಕೊಂಡು ಸಿದ್ದರಾಮಯ್ಯನವರನ್ನು ದೇವೇಗೌಡ ಪಕ್ಷದಿಂದ ಉಚ್ಚಾಟಿಸಿದರು. ಆನಂತರ ಸಿದ್ದರಾಮಯ್ಯ ಅಖಿಲ ಭಾರತ ಪ್ರಗತಿಪರ ಜನತಾದಳ ಎನ್ನುವ ಹೊಸ ಪಕ್ಷ ಕಟ್ಟಿದರು, ಆದರೆ ಸಫಲರಾಗಲಿಲ್ಲ. ಸಮಾಜವಾದದ ಹಿನ್ನೆಲೆ ಮತ್ತು ರೈತ ಪರ ಹೋರಾಟಗಳ ಮುಖಾಂತರ ರಾಜಕೀಯ ಪ್ರವೇಶಿಸಿದ್ದ ಸಿದ್ದರಾಮಯ್ಯ ತಮ್ಮ ಜಾತ್ಯಾತೀತ ನಿಲುವಿಗೆ ಹೊಂದಿಕೊಳ್ಳುವ ಕಾಂಗ್ರೇಸ್ ಪಕ್ಷವನ್ನು ಸೇರಿದರು. ಜೆಡಿಎಸ್ ಬಿಟ್ಟು ಕಾಂಗ್ರೇಸ್ ಸೇರಿದ ಸಿದ್ದರಾಮಯ್ಯ 2007ರಲ್ಲಿ ಉಪಚುನಾವಣೆಯನ್ನೂ ಎದುರಿಸಿದರು.  ಈ ಉಪ ಚುನಾವಣೆ ಅವರ ರಾಜಕೀಯ ಜೀವನದ ಅತ್ಯಂತ ನಿರ್ಣಾಯಕ ಮತ್ತು ಕಷ್ಟದ ಚುನಾವಣೆ ಆಗಿತ್ತೆಂದು ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. 2008ರಲ್ಲಿ ಸಿದ್ದರಾಮಯ್ಯ ಮತ್ತೆ ಶಾಸಕರಾಗಿ ಅಯ್ಕೆಯಾದರಾದರೂ ಕಾಂಗ್ರೇಸ್  ಅಧಿಕಾರಕ್ಕೆ ಬಾರದ ಕಾರಣ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನ ಪಾತ್ರವನ್ನು ನಿರ್ವಹಿಸಿದರು. ವಿರೋಧ ಪಕ್ಷದ ನಾಯಕನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದರು. ವಿಧಾನಸಭೆಯಲ್ಲಿ ಅಕ್ರಮ ಗಣಿಗಾರಿಕೆಯ ವಿಷಯದ ಚರ್ಚೆ ತಾರಕ ಕ್ಕೇರಿದ್ದಾಗ ಕಾಂಗ್ರೇಸ್ ಹೈಕಮಾಂಡ್ ಅನ್ನಾಗಲಿ, ಪ್ರದೇಶ ಕಾಂಗ್ರೇಸ್ ಸಮಿತಿ ಅಧ್ಯಕ್ಷರನ್ನಾಗಲಿ, ಶಾಸಕರನ್ನಾಗಲಿ ಯಾರನ್ನೂ ಕೇಳದೆ ಅಕ್ರಮ ಗಣಿಗಾರಿಕೆ ವಿರುದ್ದ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಘೋಷಿಸಿದರು. ಈ ಪಾದಯಾತ್ರೆ ಸಿದ್ದರಾಮಯ್ಯ ರಾಜಕೀಯ ಜೀವನದ ಪ್ರಮುಖ ಮಜಲು. ಅಷ್ಟೇ ಅಲ್ಲ ಈ ಪಾದ ಯಾತ್ರೆ ಕರ್ನಾಟಕದಲ್ಲಿ ಸೊರಗಿದ್ದ ಕಾಂಗ್ರೆಸ್ಗೆ ರೂಪು ತಂದು ಕೊಟ್ಟಿತು. ಅದಾದ ನಂತರ ಕಾಂಗ್ರೇಸ್ ಪಕ್ಷ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಿತು. ಸ್ಪಷ್ಟ ಬಹುಮತಗಳಿಸಿದ ಕಾಂಗ್ರೇಸ್ ಪಕ್ಷದಿಂದ ಸಿದ್ದರಾಮಯ್ಯ ಮೇ 13, 2013ರಲ್ಲಿ ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅರ್ಧಗಂಟೆಯಲ್ಲೇ “ಅನ್ನಭಾಗ್ಯ” ಯೋಜನೆ ಘೋಷಿಸಿ, ಇಡೀ ದೇಶದಲ್ಲೇ ಆಕರ್ಷಿತರಾದರು. ಅನ್ನಭಾಗ್ಯ ಯೋಜನೆ ಬಗ್ಗೆ ಪಟ್ಟಭದ್ರ ಹಿತಾಸಕ್ತಿಗಳಿಂದ ಕಡುಟೀಕೆ ಬಂದರೂ ಒಂದಿನಿತೂ ಹಿಂದೆ ಸಾಗದ ಸಿದ್ದರಾಮಯ್ಯ ಕರ್ನಾಟಕವನ್ನು ಹಸಿವು ಮುಕ್ತ ಮಾಡುವುದು ತಮ್ಮ ಗುರಿ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು. ಇದಾದ ಮೇಲೆ ಕರ್ನಾಟಕದಲ್ಲಿ ಜಾತಿವಾರು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಜನಗಣತಿಗೆ ಚಾಲನೆ ನೀಡುವ ಐತಿಹಾಸಿಕ ದಿಟ್ಟತನವನ್ನು ಪ್ರದರ್ಶಿಸಿದರು.  


2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬದಾಮಿ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿ, ಕೇವಲ ಬದಾಮಿಯಿಂದ ಮಾತ್ರ ಜಯಗಳಿಸಿದರು.


* ಬಿ.ಎಸ್.ಯಡಿಯೂರಪ್ಪ 


ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಫೆಬ್ರವರಿ 27, 1943 ರಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಜನಿಸಿದರು. ವಿದ್ಯಾಭ್ಯಾಸದ ನಂತರ 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡರು. ಆನಂತರದಲ್ಲಿ ಕೆಲಸವನ್ನು ತೊರೆದು ಶಿಕಾರಿಪುರದಲ್ಲಿರುವ ಅವರ ಮಾವನ ರೈಸ್ ಮಿಲ್ನಲ್ಲಿ ಕೆಲಸಕ್ಕೆ ಸೇರಿದರು. 70ರ ದಶಕದಲ್ಲಿ ರಾಜಕೀಯ ಪ್ರವೇಶ ಮಾಡಿದರು. ನಂತರ ಕರ್ನಾಟಕದ ವಿಧಾನ ಸಭಾ ಕ್ಷೇತ್ರದಿಂದ ಮತ್ತು ಲೋಕಸಭಾ ಕ್ಷೇತ್ರಗಳಿಗೆ ಹಲವು ಬಾರಿ ಆಯ್ಕೆಯಾಗಿದ್ದಾರೆ. 


ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರ ಸ್ವಾಮಿ ನಂತರ ನವೆಂಬೆರ್ 12, 2007ರಲ್ಲಿ  ಬಿ.ಎಸ್.ಯಡಿಯೂರಪ್ಪ ಕೇವಲ 7 ದಿನಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಿತು.  ಮೇ 30, 2008 ರಂದು ಬಿ.ಎಸ್.ಯಡಿಯೂರಪ್ಪ ಮತ್ತೆ ಅಧಿಕಾರವಹಿಸಿಕೊಂಡರು. ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿ ಎನಿಸಿಕೊಂಡರು. ಲೋಕಾಯುಕ್ತ ನ್ಯಾಯಾಲಯವು 2011 ರಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ಭೂಮಿ ಹೊಂದಿರುವ ಪ್ರಕರಣದಲ್ಲಿ ಯಡಿಯೂರಪ್ಪಗೆ ಬಂಧನದ ವಾರೆಂಟ್ ಹೊರಡಿಸಿತು. ಅಕ್ಟೋಬರ್ 15, 2011 ರ ಸಂಜೆ ಯುಡಿಯೂರಪ್ಪ ಅವರನ್ನು ಬಂಧಿಸಿದರು. 23 ದಿನಗಳ ನಂತರ ನವೆಂಬರ್ 8, 2011 ರಂದು ಜಾಮೀನು ಪಡೆದು ಜೈಲಿನಿಂದ ಹೊರಬಂದರು. ಬಿಜೆಪಿ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು ಜುಲೈ 31, 2011ರಲ್ಲಿ ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರು ನವೆಂಬರ್ 30, 2012 ರಂದು ಶಾಸನ ಸಭೆ ಮತ್ತು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವದ ಸ್ಥಾನದಿಂದ ರಾಜೀನಾಮೆ ನೀಡಿದರು. 2012ರಲ್ಲಿ ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ) ಸ್ಥಾಪಿಸಿದರು. 2013 ರಲ್ಲಿ ಕೆಜೆಪಿ ಪಕ್ಷದಿಂದ ಶಿಕಾರಿಪುರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾದರು. 2014ರಲ್ಲಿ ಬಿಜೆಪಿ ಪಕ್ಷದೊಂದಿಗೆ ಮತ್ತೆ ಮೈತ್ರಿ ಮಾಡಿಕೊಂಡರು. 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ನಂತರ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.


ಮೇ. 12, 2018 ರಂದು ನಡೆದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎದುರಿಸಿತು. ಆದರೆ ಯಾವ ಪಕ್ಷಕ್ಕೂ ನಿರ್ದಿಷ್ಟ ಬಹುಮತ ಸಿಗದೆ ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಯಿತು. ರಾಜ್ಯಪಾಲ ವಜುಬಾಯ್ ವಾಲಾ ಹೆಚ್ಚು ಮತ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದರು. ಇದೀಗ ಮತ್ತೆ ರಾಜ್ಯದಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಮೇ.17ರಂದು  ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಬಹುಮತ ಸಾಬೀತುಪಡಿಸಲಾಗದೆ ಕೇವಲ ಮೂರೇ ಮೂರು ದಿನಗಳಲ್ಲಿ ರಾಜೀನಾಮೆ ನೀಡಿದರು. ಬಳಿಕ ಮತ್ತೆ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ 26 ಜುಲೈ 2019ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ 26 ಜುಲೈ 2021ರಂದು ಮತ್ತೆ ಅಧಿಕಾರ ತ್ಯಾಗ ಮಾಡಿ, ತಮ್ಮದೇ ಪಕ್ಷದವರಾದ ಬಸವರಾಜ್ ಬೊಮ್ಮಾಯಿ ಅವರಿಗೆ ಅಧಿಕಾರವನ್ನು ಅಸ್ತಾಂತರಿಸಿದರು. 


* ಬಸವರಾಜ್ ಬೊಮ್ಮಾಯಿ :
ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ್ ಬೊಮ್ಮಾಯಿ ಬಿ.ಎಸ್. ಯಡಿಯೂರಪ್ಲ್ಪ ಅವರ ನಂತರ ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇವರ ಪೂರ್ಣ ಹೆಸಲು ಬಸವರಾಜ ಸೋಮಪ್ಪ ಬೊಮ್ಮಾಯಿ. 1960ರ ಜನವರಿ 28 ರಂದು ಜನಿಸಿದ ಬಸವರಾಜ್ ಎಸ್. ಬೊಮ್ಮಾಯಿ  ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.  ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ 100% ಕೊಳವೆ ಈರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿ ಯಶಸ್ವಿ ಜಲಸಂಪನ್ಮೂಲ ಸಚಿವರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.  


ಜನತಾದಳದಿಂದ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ ಬಸವರಾಜ್ ಎಸ್. ಬೊಮ್ಮಾಯಿ 1998 ಹಾಗೂ 2004ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆದರೂ. 2008ರಲ್ಲಿ ಜನತಾದಳ ತೊರೆದು ಬಿಜೆಪಿ ಸೇರ್ಪಡೆಗೊಂಡ ಇವರು ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ  ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡರು. ಗಮನಾರ್ಹವಾಗಿ ಇದೇ ಕ್ಷೇತ್ರದಿಂದ ಇವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.  ಜೆ. ಹೆಚ್. ಪಟೇಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವ ಹೊಂದಿದ್ದ ಬಸವರಾಜ್ ಬೊಮ್ಮಾಯಿ ಬಿ‌ಎಸ್‌ವೈ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ನಂತರ 28 ಜುಲೈ 2021 ರಿಂದ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 


* ಸಿದ್ದರಾಮಯ್ಯ: 


ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೀವನಗಾಥೆಯೆಂದರೆ ಕೇವಲ ಸ್ವಂತ ಪರಿಶ್ರಮದಿಂದ ಯಶಸ್ಸಿನ ಎತ್ತರಕ್ಕೆ ಏರಿದ ಈ ನಾಡಿನ ಸಾಮಾನ್ಯ ಮನುಷ್ಯರ ಬದುಕಿನ ಕತೆ. ಸಿದ್ದರಾಮಯ್ಯನವರು ಹುಟ್ಟಿದ್ದು ಈ ನಾಡಿನ ಸಾವಿರಾರುಹಳ್ಳಿಗಳಲ್ಲೊಂದಾದ ಕುಗ್ರಾಮದಲ್ಲಿ. ಹೆತ್ತವರೇನು ಪ್ರಭಾವಿಗಳಲ್ಲ, ಅವರದ್ದು ಸಾಮಾನ್ಯ ರೈತ ಕುಟುಂಬ. ಹಳ್ಳಿಗಾಡಿನ ಬದುಕಿನ ಎಲ್ಲ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿಮೆಟ್ಟಿನಿಂತು ಸಾಧನೆಯ ಶಿಖರ ಏರಿದ ಸಿದ್ದರಾಮಯ್ಯನವರ ಬಾಳದಾರಿ ಇಂತಹದ್ದೇ ಹಿನ್ನೆಲೆಯಿಂದ ಬಂದವರಿಗೆ ಮಾರ್ಗದರ್ಶನ ಮಾತ್ರವಲ್ಲ ಸ್ಪೂರ್ತಿಯೂ ಹೌದು. 


ಸಿದ್ದರಾಮಯ್ಯ ಅವರ ಹುಟ್ಟೂರು ಮೈಸೂರು ಜಿಲ್ಲೆ ವರುಣಾ ಹೋಬಳಿಯ ಸಿದ್ದರಾಮನ ಹುಂಡಿ ಗ್ರಾಮ, ಜನನ 1948ರ ಆಗಸ್ಟ್ 12. ಇವರದ್ದು ಕೃಷಿ ಪ್ರಧಾನ ಕುಟುಂಬ. ಅಂದಿನ ಕಾಲದಲ್ಲಿಎಸ್.ಎಸ್.ಎಲ್.ಸಿ ಪಾಸು ಮಾಡುವುದೇ ಕಠಿಣವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕುಟುಂಬದಲ್ಲಿ ಪದವಿ ಪಡೆದ ಮೊದಲಿಗರಾದರು.
ಭಾಷಣ ಮಾಡುವುದರಲ್ಲಿ ಸಿದ್ದರಾಮಯ್ಯ ಅವರದ್ದು ಎತ್ತಿದ ಕೈ. ಶಾಲಾ-ಕಾಲೇಜು ದಿನಗಳಲ್ಲಿ ಉತ್ತಮ ಭಾಷಣಕಾರರಾಗಿ ಹೊರಹೊಮ್ಮುವ ಮೂಲಕ ಸಿದ್ದರಾಮಯ್ಯ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.


2013ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಮಾತ್ರ ಶ್ರಮಿಸದೆ ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಪಕ್ಷದ ಭಾರೀ ಗೆಲುವಿಗೆ ಕಾರಣರಾದರು. 2013 ಮೇ 13 ರಂದು ಈ ನಾಡಿನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ನವರ ಮುಂದೆ ಹಲವಾರು ಸವಾಲುಗಳಿದ್ದವು.  ಹಲವಾರು ಸಂದರ್ಭಗಳಲ್ಲಿ ಅವರೇ ಹೇಳಿಕೊಂಡಿರುವಂತೆ ಕೋಮು ಸೌಹಾರ್ದತೆಗೆ ಹೆಸರಾಗಿದ್ದ ಕರ್ನಾಟಕದಲ್ಲಿ ಕೋಮು ಸೌಹಾರ್ದತೆಯ ವಾತಾವರಣ ಕಲುಷಿತವಾಗಿತ್ತು.  ಆರ್ಥಿಕ ಶಿಸ್ತಿಗೆ ಬದ್ಧವಾಗಿದ್ದ ಕರ್ನಾಟಕದಲ್ಲಿ ವಿತ್ತೀಯ ಶಿಸ್ತು ಅಪಾಯದ ಅಂಚಿನಲ್ಲಿತ್ತು.  ದಕ್ಷ ಆಡಳಿತಕ್ಕೆ ಹೆಸರಾಗಿದ್ದ ಕರ್ನಾಟಕದ ಖ್ಯಾತಿ ಮಸುಕಾಗುತ್ತಿತ್ತು.  ರಾಜ್ಯದ ಸ್ಥಿರ ರಾಜಕೀಯ ಅಸ್ಥಿರತೆಯ ಅಂಚಿಗೆ ಬಂದು ನಿಂತಿತ್ತು.


2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ‘ಕೆಲಸ ಮಾಡಿದ್ದೇವೆ ಕೂಲಿ ಕೊಡಿ’ ಎಂದು ರಾಜ್ಯದ ಮತದಾರರ ಮುಂದೆ ಬೊಗಸೆಯೊಡ್ಡಿ ಕೇಳಿದ್ದರು. ಅನ್ನ,ಹಾಲು, ಅಕ್ಷರು, ನೀರು, ಮನೆ, ಔಷಧಿ ಕೊಟ್ಟವರನ್ನು ಜನ ಮರೆಯುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಆ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು. 80 ಸ್ಥಾನಗಳಲ್ಲಿಯಷ್ಟೇ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ ಬಿಜೆಪಿಗಿಂತ ಶೇಕಡಾ ಎರಡರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ನೀಡಿದ್ದರು. ಇದೀಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ಸಂಪೂರ್ಣ ಬಹುಮತ ನೀಡಿದ್ದು ಮತ್ತೆ ಸಿದ್ದರಾಮಯ್ಯ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ 20 ಮೇ 2023ರಂದು ಪಡಗ್ರಹಣ ಮಾಡಲಿದ್ದಾರೆ. 


ಇದನ್ನೂ ಓದಿ- ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ: ನಿಮ್ಮ ಜಿಲ್ಲೆಯ ಫಲಿತಾಂಶ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.