ಕಾಂಗ್ರೆಸ್ ಪ್ರಣಾಳಿಕೆ `ವಿಷನ್-2025` ಅಭಿವೃದ್ಧಿ ಹಾದಿಯ ಮುನ್ನೋಟ: ಸಿದ್ದರಾಮಯ್ಯ
ರಾಜಕಾರಣಿಗಳೆಂದರೆ ಚುನಾವಣಾ ಕಾಲದಲ್ಲಿ ಒಂದಷ್ಟು ಸುಳ್ಳು ಭರವಸೆಗಳನ್ನು ನೀಡುತ್ತಾರೆ, ಅದರ ನಂತರ ಮರೆತುಬಿಡುತ್ತಾರೆ ಎನ್ನುವ ಕಾರಣಕ್ಕಾಗಿ ರಾಜಕಾರಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಪ್ರಣಾಳಿಕೆ ಬಗ್ಗೆ ರಾಜಕೀಯ ಪಕ್ಷಗಳ ಅಸಡ್ಡೆ, ನಿರ್ಲಕ್ಷ್ಯ ಪ್ರಜಾಪ್ರಭುತ್ವಕ್ಕೆ ಮಾರಕವೆಂದು ನನ್ನ ಅಭಿಪ್ರಾಯ.
ಬೆಂಗಳೂರು : ಪ್ರಣಾಳಿಕೆ ಎಂದರೆ ರಾಜಕೀಯ ಪಕ್ಷಗಳು ಮತ್ತು ಮತದಾರರ ನಡುವಿನ ಐದು ವರ್ಷಗಳ ಒಪ್ಪಂದ. ಹಾಗಾಗಿ 2025ರ ವರೆಗಿನ ನಮ್ಮ ಅಭಿವೃದ್ಧಿಯ ಹಾದಿ ಹೇಗಿರಬೇಕು ಎನ್ನುವುದನ್ನು ರಾಜ್ಯದ ಜನತೆಯೊಂದಿಗೆ ಚರ್ಚಿಸಿ ಮ್ಯಾನಿಫೆಸ್ಟೋ ತಯಾರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಫೇಸ್ ಬುಕ್ ಅಕೌಂಟ್ನಲ್ಲಿ ಪ್ರಣಾಳಿಕೆಯ ವಿಶೇಷತೆ ಮತ್ತು ಅದರ ಹಿಂದಿರುವ ಶ್ರಮದ ಬಗ್ಗೆ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ...
ವಿಷನ್ -2025
2018ರ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಜನರ ದ್ವನಿ. ನಮ್ಮ ಅಧಿಕಾರಿಗಳ ತಂಡ ಇಡೀ ರಾಜ್ಯ ಸುತ್ತಾಡಿ ಅಭಿವೃದ್ಧಿಯ ಪಾಲುದಾರರಾದ ರೈತರು, ಕಾರ್ಮಿಕರು, ಉದ್ಯಮಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಹೋರಾಟಗಾರರು, ಸಮಾಜಸೇವಕರು ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾದವರ ಜತೆ ಸಮಾಲೋಚನೆ ನಡೆಸಿ, 2025ರ ವರೆಗಿನ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯ ಹಾದಿ ಹೇಗಿರಬೇಕು ಎನ್ನುವುದನ್ನು ಅವರಲ್ಲಿ ಕೇಳಿದ್ದೇವೆ. ಅವರೆಲ್ಲರ ಜತೆ ಚರ್ಚೆ ನಡೆಸಿ ‘’ವಿಷನ್ -2025’’ ಎಂಬ ಮುನ್ನೋಟದ ದಸ್ತಾವೇಜು ತಯಾರಿಸಿದ್ದೇವೆ. ಇದರಲ್ಲಿರುವ ಬಹಳಷ್ಟು ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದೇವೆ. ನಮ್ಮ ಪಕ್ಷದ ಪ್ರಣಾಳಿಕೆಯ ಬಿಡುಗಡೆಯಾದ ನಂತರ ಅದರ ಬಗ್ಗೆ ವಿವರವಾಗಿ ಮಾತನಾಡುತ್ತೇನೆ. ನಮ್ಮ ಸರ್ಕಾರವನ್ನು ಕೊಂಡಾಡುತ್ತಿರುವಂತೆ ನಾವು ನುಡಿದಂತೆ ನಡೆದಿದ್ದೇವೆ ಮತ್ತು ಮುಂದೆಯೂ ನುಡಿದಂತೆ ನಡೆಯುತ್ತೇವೆ.
ಪ್ರಣಾಳಿಕೆ ನಮ್ಮ ಬದ್ಧತೆ
ಚುನಾವಣಾ ಪ್ರಣಾಳಿಕೆಯನ್ನು ನಮ್ಮ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ಕರಪತ್ರ ಎಂದೇ ತಿಳಿದುಕೊಂಡದ್ದು ಹೆಚ್ಚು. ಚುನಾವಣೆಯ ಅಬ್ಬರ ಇಳಿದ ನಂತರ ಪೋಸ್ಟರ್, ಬ್ಯಾನರ್, ಕರಪತ್ರಗಳಂತೆ ಪಕ್ಷಗಳ ಪ್ರಣಾಳಿಕೆಗಳೂ ಮೂಲೆ ಸೇರುತ್ತವೆ. ಇದರಿಂದ ನಮ್ಮ ಅಮಾಯಕ ಮತದಾರರು ಕೂಡಾ ತಮ್ಮ ನೂರೆಂಟು ತಾಪತ್ರಯಗಳ ನಡುವೆ ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳನ್ನು ಹಿಡಿದು ನಿಲ್ಲಿಸಿ ಪ್ರಣಾಳಿಕೆಯ ಬಗ್ಗೆ ಪ್ರಶ್ನಿಸುವ ಧೈರ್ಯವನ್ನೂ ತೋರುವುದಿಲ್ಲ. ಕೆಲವು ರಾಜಕೀಯ ಪಕ್ಷಗಳು ಪ್ರಣಾಳಿಕೆಯನ್ನೇ ಪ್ರಕಟಿಸುವುದಿಲ್ಲ. ಹಾಗಾಗಿ ಪ್ರಣಾಳಿಕೆ ನಮ್ಮ ಬದ್ಧತೆ. ವಚನ ಭ್ರಷ್ಟತೆಯ ಮೂಲಕ ಪ್ರಣಾಳಿಕೆಯ ಪಾವಿತ್ರ್ಯವನ್ನು ನಾವು ಹಾಳು ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜನತೆಯಲ್ಲಿ ವಿಶ್ವಾಸ ತುಂಬಲು ಪ್ರಜಾಪ್ರಭುತ್ವ ವಿರೋಧಿ ಸಂಪ್ರದಾಯ ಮುರಿಯಲು ನಿರ್ಧಾರ
ರಾಜಕಾರಣಿಗಳೆಂದರೆ ಚುನಾವಣಾ ಕಾಲದಲ್ಲಿ ಒಂದಷ್ಟು ಸುಳ್ಳು ಭರವಸೆಗಳನ್ನು ನೀಡುತ್ತಾರೆ, ಅದರ ನಂತರ ಮರೆತುಬಿಡುತ್ತಾರೆ ಎನ್ನುವ ಕಾರಣಕ್ಕಾಗಿ ರಾಜಕಾರಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಪ್ರಣಾಳಿಕೆ ಬಗ್ಗೆ ರಾಜಕೀಯ ಪಕ್ಷಗಳ ಅಸಡ್ಡೆ, ನಿರ್ಲಕ್ಷ್ಯ ಪ್ರಜಾಪ್ರಭುತ್ವಕ್ಕೆ ಮಾರಕವೆಂದು ನನ್ನ ಅಭಿಪ್ರಾಯ. ಪ್ರಜಾಪ್ರಭುತ್ವ ವಿರೋಧಿ ಸಂಪ್ರದಾಯ ಮುರಿಯಲೇಬೇಕೆಂದು ಕಳೆದ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ನಾನು ನಿರ್ಧರಿಸಿದೆ. ರಾಜಕಾರಣಿಗಳ ವಚನಭ್ರಷ್ಟತೆಯಿಂದ ಭ್ರಮನಿರಸನಕ್ಕೀಡಾದ ಜನತೆಯಲ್ಲಿ ವಿಶ್ವಾಸ ತುಂಬಲು ದೃಢ ನಿರ್ಧಾರ ಕೈಗೊಂಡಿದ್ದಾಗಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
165 ಭರವಸೆಗಳಲ್ಲಿ 158 ಭರವಸೆಗಳ ಈಡೇರಿಕೆ
ಕಳೆದ ಬಾರಿ ನಾನು ಅಧಿಕಾರಕ್ಕೆ ಬಂದಾಗ ಸರ್ಕಾರ ಮೊದಲು ಕೆಲಸ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಬೇಕು, ಪ್ರಚಾರವೇನಿದ್ದರೂ ಆ ಮೇಲೆ ಎನ್ನುವುದು ನನ್ನ ಸ್ಪಷ್ಟ ನಿಲುವಾಗಿತ್ತು. ಈ ಬದ್ಧತೆಯ ಕಾರಣದಿಂದಾಗಿಯೇ ಚುನಾವಣಾ ಕಾಲದಲ್ಲಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಕಳೆದ ಐದು ವರ್ಷಗಳಲ್ಲಿ ಈಡೇರಿಸಿದ್ದೇವೆ. ಇದನ್ನು ದಾಖಲೆ ಸಹಿತ ನಿಮ್ಮ ಮುಂದಿಡಬಲ್ಲೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಚನಪಾಲನೆಯೇ ನಿಜವಾದ ರಾಜಧರ್ಮ
ಸಂಸದೀಯ ವ್ಯವಸ್ಥೆಯಲ್ಲಿ ಪ್ರಜೆಗಳ ವಿಶ್ವಾಸವೇ ಚುನಾಯಿತ ಸರ್ಕಾರದ ಬುನಾದಿ. ರಾಜಕೀಯ ಅಧಿಕಾರ ಎನ್ನುವುದು ಪ್ರಜಾಪ್ರತಿನಿಧಿಗಳ ವಿಶೇಷ ಅಧಿಕಾರ ಅಲ್ಲ. ಅದು ಜನತೆಯ ಸೇವೆಗೆ ಸಂವಿಧಾನ ಮಾಡಿಕೊಟ್ಟಿರುವ ಅವಕಾಶ. ಚುನಾವಣಾ ಕಾಲದಲ್ಲಿ ಮತದಾರರಿಗೆ ನೀಡಿದ್ದ ವಚನಪಾಲನೆಯೇ ನಿಜವಾದ ರಾಜಧರ್ಮ ಎಂದು ನಂಬಿದವನು ನಾನು. ಪ್ರಾಮಾಣಿಕವಾಗಿ ಅದನ್ನು ಪಾಲಿಸುತ್ತಾ ಬಂದಿದ್ದೇನೆ.
ರಾಜ್ಯದ ಜನತೆಯ ಅಭಿವೃದ್ಧಿಯೇ ನಮ್ಮ ಧ್ಯೇಯ
ಮುಖ್ಯಮಂತ್ರಿಯಾಗಿ ನಾನು ಆರು ಮುಂಗಡಪತ್ರಗಳನ್ನು ಮಂಡಿಸಿದ್ದೇನೆ. ಪ್ರತಿಯೊಂದು ಮುಂಗಡಪತ್ರ ತಯಾರಿಗೆ ಕನಿಷ್ಠ 20ರಿಂದ 30 ದಿನಗಳನ್ನು ಸಚಿವ ಸಂಪುಟದ ಸಹದ್ಯೋಗಿಗಳ ಜತೆ ಸಮಾಲೋಚನೆಯಲ್ಲಿ ಕಳೆದಿದ್ದೇನೆ. ಮೊದಲ ಮುಂಗಡಪತ್ರದಿಂದ ಆರನೇ ಮುಂಗಡಪತ್ರದ ವರೆಗೆ ಎಲ್ಲದರಲ್ಲಿಯೂ ಹಂತಹಂತವಾಗಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಮುಂದಿಟ್ಟು ಕಾರ್ಯಕ್ರಮಗಳನ್ನು ರೂಪಿಸಿ ಹಣಕಾಸನ್ನು ಒದಗಿಸಿದ್ದೇನೆ. ಇದರಿಂದಾಗಿಯೇ ನಮ್ಮೆಲ್ಲ ಕಾರ್ಯಕ್ರಮಗಳು ಶೇಕಡಾ 90ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅನುಷ್ಠಾನಗೊಂಡಿವೆ. ಮುಂದೆಯೂ ಇದೇ ರೀತಿ ಉತ್ತಮ ಸರ್ಕಾರ ಆಡಳಿತ ನೀಡುವುದೇ ನಮ್ಮ ಧ್ಯೇಯ.