ನವದೆಹಲಿ: ಪಕ್ಷದಲ್ಲಿ ಟಿಕೆಟ್ ವಂಚಿತರ ಪಕ್ಷಾಂತರ ಪರ್ವ ಕಾಂಗ್ರೆಸ್ ಗೆ ತಲೆನೋವಾಗಿ ಪರಿಣಮಿಸಿದ್ದು, ಬಂಡಾಯ ಶಮನಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಬಂಡಾಯ ಶಮನ ಮಾಡದಿದ್ದರೆ ಚುನಾವಣೆ ವೇಳೆ ಪಕ್ಷಕ್ಕೆ ಹಿನ್ನೆಡೆಯಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ರಾಹುಲ್ ಗಾಂಧಿಗೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಬಂಡಾಯ ಶಮನಕ್ಕೆ ರಾಹುಲ್ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಪುಲಕೇಶಿನಗರದ ಟಿಕೆಟ್ ವಂಚಿತ ಪ್ರಸನ್ನಕುಮಾರ್ ಹಾಗೂ ಜಿಗಳೂರಿನ ಎ.ಎಲ್. ಪುಷ್ಪ
ಸೇರಿದಂತೆ ಇತರ ಬಂಡಾಯ ಅಭ್ಯರ್ಥಿಗಳನ್ನು ದೆಹಲಿಗೆ ಕರೆಸಿ ರಾಹುಲ್ ಮಾತುಕತೆ ನಡೆಸುವ ಸಾಧ್ಯತೆ ಇದೆ.


ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಟ ಶಶಿಕುಮಾರ್ ಗುರುವಾರ ಜೆಡಿಎಸ್ ಸೇರ್ಪಡೆಗೊಂಡರು. ಇನ್ನು ಐದು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಶ್ರೀ ಎನ್.ವೈ. ಗೋಪಾಲಕೃಷ್ಣ , ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಛಲವಾದಿ ನಾರಾಯಣ ಸ್ವಾಮಿ ಹಾಗೂ ಕೆಪಿಸಿಸಿ ವಕ್ತಾರರಾದ ಶ್ರೀಮತಿ ಪೂರ್ಣಿಮಾ ಮಲ್ಲೇಶ್ ಅವರು  ತಮ್ಮ ಅಪಾರ ಬೆಂಬಲಿಗರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ   ಸಮ್ಮುಖದಲ್ಲಿ  ಇಂದು ಬಿಜೆಪಿಗೆ ಸೇರ್ಪಡೆಯಾದರು. ಹೀಗೆ ಪಕ್ಷದಲ್ಲಿ ಟಿಕೆಟ್ ವಂಚಿತರ ಪಕ್ಷಾಂತರ ಪರ್ವ ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.