ರಾಜ್ಯದಲ್ಲಿ ಸರ್ವಾಧಿಕಾರ ಅಂತ್ಯವಾಗಲಿದೆ: ಕೇಂದ್ರ ಸಚಿವ ಸದಾನಂದಗೌಡ
ಇದು ರಾಜ್ಯದ ದುಷ್ಟ ಶಕ್ತಿಗಳ ವಿರುದ್ಧದ ಕನ್ನಡಿಗರ ಗೆಲುವು.
ಬೆಂಗಳೂರು: "ಬಿ ಎಸ್ ಯಡಿಯೂರಪ್ಪ ಎಂಬ ನಾನು ರಾಜ್ಯದ ಜನರ ಹಿತದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ದೇವರ ಹೆಸರಿನಲ್ಲಿ ಮತ್ತು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ" ಎನ್ನುವ ಮೂಲಕ ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಕರ್ನಾಟಕದ ಸುವರ್ಣ ದಿನಗಳು ಆರಂಭವಾಗಿದೆ. ಈ ಐತಿಹಾಸಿಕ ದಿನದಂದು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದು ರಾಜ್ಯದ ದುಷ್ಟ ಶಕ್ತಿಗಳ ವಿರುದ್ಧದ ಕನ್ನಡಿಗರ ಗೆಲುವು ಎಂದಿದ್ದಾರೆ.
ಅಧಿಕಾರ ದಾಹದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಬಿಎಸ್ವೈ ಅವರು ಮುಖ್ಯಮಂತ್ರಿಯಾಗುವುದನ್ನೂ ತಡೆಯಲು ಯತ್ನಿಸಿದರೂ, ಕರ್ನಾಟಕ ರಾಜ್ಯದ ಜನತೆ ಯಡಿಯೂರಪ್ಪ ಅವರ ಕೈ ಹಿಡಿದಿದ್ದಾರೆ. ಸರ್ವಾಧಿಕಾರ ಅಂತ್ಯವಾಗಲಿದೆ. ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ನಂತರ ಶ್ರೀ @ ಬಿಎಸ್ವೈ ಅವರಿಗೆ ಅಭಿನಂದನೆಗಳು. ಕನ್ನಡಿಗರಿಗೆ ಅವರ ಬದ್ಧತೆಯು ಶಾಶ್ವತವಾಗಿದೆ ಎಂದು ಬಿಎಸ್ವೈ ನಮ್ಮ ಸಿಎಂ ಹ್ಯಾಷ್ ಟ್ಯಾಗ್ ಹಾಕಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.