ಸಿದ್ದರಾಮಯ್ಯನವರೇ ಕ್ಷೀರ ಭಾಗ್ಯ ಕೊಡುವ ಬದಲು ಉದ್ಯೋಗಭಾಗ್ಯ ಕೊಡಿ- ದೊಡ್ಡಣ್ಣ
ಚಿತ್ರದುರ್ಗದಲ್ಲಿ ನಡೆದ ಜೆಡಿಎಸ್, ಬಿಎಸ್ಪಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಹಿರಿಯ ನಟ ದೊಡ್ಡಣ್ಣ.
ಚಿತ್ರದುರ್ಗ: ಸಿದ್ದರಾಮಯ್ಯನವರೇ ಶಾದಿ ಭಾಗ್ಯ, ಕ್ಷೀರ ಭಾಗ್ಯ, ಅನ್ನ ಭಾಗ್ಯ ಕೊಡುವ ಬದಲು ಯುವಕರಿಗೆ ಉದ್ಯೋಗ ಭಾಗ್ಯ ಕೊಡಿ ಎನ್ನುವ ಮೂಲಕ ಹಿರಿಯ ನಟ ದೊಡ್ಡಣ್ಣ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಇಂದು(ಗುರುವಾರ) ಚಿತ್ರದುರ್ಗದಲ್ಲಿ ನಡೆದ ಜೆಡಿಎಸ್ ಹಾಗೂ ಬಿಎಸ್ಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ನಟ ದೊಡ್ಡಣ್ಣ, ಸಿದ್ದರಾಮಯ್ಯ ಸರ್ಕಾರದ ಶಾದಿ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್ ಅನ್ನು ಉಲ್ಲೇಖಿಸುತ್ತಾ ಸಿದ್ದರಾಮಯ್ಯನವರೇ ನಿಮ್ಮಲ್ಲಿ ನನ್ನದೊಂದು ಮನವಿ ಈ ಎಲ್ಲಾ ಭಾಗ್ಯಗಳನ್ನು ಕೊಡುವ ಬದಲು ಯುವಕರಿಗೆ ಉದ್ಯೋಗ ಭಾಗ್ಯ ನೀಡಿ ಎಂದರಲ್ಲದೇ, ನೀವು ಉದ್ಯೋಗ ಭಾಗ್ಯ ಕೊಟ್ಟಿದ್ದೆ ಆದರೆ ಎಲ್ಲಾ ಯುವಕರು ಶಾದಿ ಭಾಗ್ಯನೂ ಅವರೇ ಮಾಡಿಕೊಳ್ಳುತ್ತಾರೆ, ಕ್ಷೀರ ಭಾಗ್ಯನೂ ಅವರೇ ಕೊಡುತ್ತಾರೆ, ಅಷ್ಟೇ ಅಲ್ಲ ಶಕ್ತಿ ಭಾಗ್ಯನೂ ಕೊಡುತ್ತಾರೆ ಇದನ್ನು ತಾವು ಮನಗಾಣಬೇಕು ಎಂದು ತಿಳಿಸಿದರು.
ಇದೇ ಸಮಯದಲ್ಲಿ ಜಾತಿಯನ್ನು ವಿಂಗಡಿಸುವ ಈ ರಾಷ್ಟ್ರೀಯ ಪಕ್ಷಗಳನ್ನು ನೋಡಿ ನಮಗೆ ಅಸಹ್ಯವಾಗಿದೆ ಎಂದು ದೊಡ್ಡಣ್ಣ ವಿಷಾದ ವ್ಯಕ್ತಪಡಿಸಿದರು.