ದಲಿತ ಸಿಎಂಗಾಗಿ ಸ್ಥಾನ ಬಿಟ್ಟುಕೊಡಲು ಸಿದ್ಧ : ಸಿದ್ದರಾಮಯ್ಯ
ಪಕ್ಷದ ಹೈಕಮ್ಯಾಂಡ್ ಆದೇಶಿಸಿದರೆ ದಲಿತ ಮುಖ್ಯಮಂತ್ರಿಗಾಗಿ ತಮ್ಮ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು : ದಲಿತ ಮುಖ್ಯಮಂತ್ರಿ ವಿಚಾರವಾಗಿ ಕಾಂಗ್ರೆಸ್ ಹೈಕಮ್ಯಾಂಡ್ ನಿರ್ಧರಿಸಿದರೆ ಆ ನಿರ್ಧಾರಕ್ಕೆ ತಾವು ಬದ್ಧ, ದಲಿತ ಮುಖ್ಯಮಂತ್ರಿಗಾಗಿ ತಮ್ಮ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣೆ ನಂತರ ಮೈಸೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರು, ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಈ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಸ್ಥಾನಗಳಿಸಲಿದೆ. ಮುಂದಿನ ಸರ್ಕಾರವನ್ನೂ ನಾವೇ ರಚನೆ ಮಾಡುತ್ತೇವೆ. ಒಂದು ವೇಳೆ ದಲಿತ ಮುಖ್ಯಮಂತ್ರಿ ಬಗ್ಗೆ ಹೈಕಮ್ಯಾಂಡ್ ನಿರ್ಧರಿಸಿದರೆ ಆ ನಿರ್ಧಾರಕ್ಕೆ ತಾವು ಸದಾ ಬದ್ಧರಾಗಿರುವುದಾಗಿ ಸಿದ್ಧರಾಮಯ್ಯ ಹೇಳಿದರು.
ಕಾಂಗ್ರೆಸ್ಗೆ 120ಕ್ಕೂ ಅಧಿಕ ಸ್ಥಾನ; ಸರ್ಕಾರ ರಚನೆ ನಿಶ್ಚಿತ
ಚುನಾವಣೋತ್ತರ ಸಮೀಕ್ಷೆಗಳು ಏನೇ ಹೇಳಬಹುದು. ಆದರೆ ಕಾಂಗ್ರೆಸ್ 120ಕ್ಕೂ ಹೆಚ್ಚು ಸ್ಥಾನಗಳ ಗೆಲುವು ಸಾಧಿಸಲಿದೆ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 7 ದಿನ ಮತ್ತು ವರುಣ ಕ್ಷೇತ್ರದಲ್ಲಿ 3 ದಿನ ಮಾತ್ರ ಪ್ರಚಾರ ಮಾಡಿದೆ. ಆ ಎರಡೂ ಕ್ಷೇತ್ರಗಳಲ್ಲೂ ಗೆಲುವು ಖಚಿತ. ಇನ್ನು, ಡಿ.13ರಿಂದ ರಾಜ್ಯಾದ್ಯಂತ ಒಟ್ಟು 185 ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು, ಮತದಾರರ ನಾಡಿಮಿಡಿತ ಅರಿತಿದ್ದೇನೆ. ಹಾಗಾಗಿ ನಾವೇ ಗೆಲ್ತೀವಿ" ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
5 ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ
ಕಳೆದ 5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ರಾಯದ ಜನತೆ ನನ್ನ ಕಾರ್ಯ ಮೆಚ್ಚಿದ್ದಾರೆ. ಹಾರೈಸಿದ್ದಾರೆ. ಈ 5 ವರ್ಷಗಳಲ್ಲಿ ಶಾಸಕರಾಗಲೀ, ಸಂಸದರಾಗಲೀ ಯಾರೂ ನನ್ನ ವಿರುದ್ಧ ಮಾತನಾಡಿಲ್ಲ. ಎಲ್ಲರೂ ನನ್ನ ಕಾರ್ಯಗಳಿಗೆ, ರಾಜ್ಯದ ಉತ್ತಮ ಆಡಳಿತಕ್ಕೆ ಶ್ರಮಿಸಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದ. ಮುಂದಿನ ದಿನಗಳಲ್ಲೂ ಎಲ್ಲರ ಸಹಕಾರ, ಆಶೀರ್ವಾದ ದೊರೆಯಲಿದೆ ಎಂಬ ಭರವಸೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.