ಮೈಸೂರು: ವರುಣಾ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಿದಕ್ಕೆ ಕಾರ್ಯಕರ್ತರು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಲ್ಲಿ ಉಂಟಾಗಿರುವ ಅಸಮಾಧಾನವನ್ನು ತಣ್ಣಗಾಗಿಸಲು ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದು ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬರುವುದೊಂದೇ ನಮ್ಮ ಗುರಿ,  ಕಾರ್ಯಕರ್ತರು ಶಾಂತ ರೀತಿಯಲ್ಲಿ ಸಹಕರಿಸಬೇಕಾಗಿ ವಿನಂತಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING


ವಿಜಯೇಂದ್ರ ಯಡಿಯೂರಪ್ಪ ತಮ್ಮ ಫೇಸ್ ಬುಕ್ ಮೂಲಕ, ರಾಜ್ಯದ ಅಭಿವೃದ್ಧಿಗಾಗಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಿದೆ. ಇದೊಂದೇ ನಮ್ಮೆಲ್ಲರ ಗುರಿಯಾಗಿದ್ದು, ಇದಕ್ಕಾಗಿ ಒಗ್ಗಟ್ಟಿನಿಂದ ಶ್ರಮಿಸೋಣ. ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ. ಕಾರ್ಯಕರ್ತರು ಶಾಂತ ರೀತಿಯಲ್ಲಿ ಸಹಕರಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.


ನಂಜನಗೂಡಿನಲ್ಲಿ ನಡೆದ ವರುಣಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ವರುಣಾ ಕ್ಷೇತ್ರದಲ್ಲಿ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಘೋಷಿಸಿದ ಬೆನ್ನಲ್ಲೇ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆ ತಮ್ಮ ಸಹನೆ ಕಳೆದುಕೊಂಡ ಕಾರ್ಯಕರ್ತರು ವೇದಿಕೆ ಮೇಲಿದ್ದ ಕುರ್ಚಿಗಳನ್ನು ಎಸೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ನಂತರ ವಿಜಯೇಂದ್ರ ಅವರ ಕಾರಿಗೆ ಮುತ್ತಿಗೆ ಹಾಕಿ ವರುಣಾದಿಂದ ಸ್ಪರ್ಧಿಸುವಂತೆ ಪಟ್ಟು ಹಿಡಿದರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.