ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದರೆ ಪ್ರತಿಭಟನೆ - ಸಿದ್ದರಾಮಯ್ಯ
ರಾಜ್ಯಪಾಲರು ಸಂಖ್ಯಾಬಲದ ಆಧಾರದ ಮೇಲೆ ಸರ್ಕಾರ ರಚಿಸಲು ಅವಕಾಶ ಕೊಡಬೇಕು. ಇಲ್ಲವಾದರೆ ಅದು ಸಂವಿಧಾನ ವಿರೋಧಿಯಾಗುತ್ತೆ- ಸಿದ್ದರಾಮಯ್ಯ
ಬೆಂಗಳೂರು: ಬಹುನಿರೀಕ್ಷಿತ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕದ ಪಣತೊಟ್ಟು, ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕೆಂದು ತೀರ್ಮಾನಿಸಿದ್ದ ಬಿಜೆಪಿ 104 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ಸಂಖ್ಯೆ 113ನ್ನು ತಲುಪದೇ ಅತಂತ್ರ ಸ್ಥಿತಿಯಲ್ಲಿದೆ. ಆದಾಗ್ಯೂ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ರಾಜ್ಯಪಾಲ ವಜುಬಾಯಿ ವಾಲಾ ಅವರನ್ನು ಭೇಟಿಯಾಗಿ, ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ತಮಗೇ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಇವೆಲ್ಲದರ ನಡುವೆ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ ಬಿಜೆಪಿ ಅತಿದೊಡ್ಡ ಪಕ್ಷವಾಗಿರುವುದರಿಂದ ರಾಜ್ಯಪಾಲರು ನಮಗೆ ಸರ್ಕಾರ ರಚಿಸುವ ಅವಕಾಶ ನೀಡಲಿದ್ದಾರೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಇಂದು ಬೆಳಿಗ್ಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ಅಂತಿಮವಾಗಿಲ್ಲ. ಸಂಜೆ ಮತ್ತೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ಕೈ ನಾಯಕರನ್ನು ಅಂತಿಮಗೊಳಿಸಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯಪಾಲರು ಸಂಖ್ಯಾಬಲದ ಆಧಾರದ ಮೇಲೆ ಸರ್ಕಾರ ರಚಿಸಲು ಅವಕಾಶ ಕೊಡಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚನೆಗೆ ಸಾಕಷ್ಟು ಸಂಖ್ಯಾ ಬಲವಿದೆ. ಸಂಖ್ಯಾಬಲದ ಆಧಾರದ ಮೇಲೆ ಸರ್ಕಾರ ರಚಿಸಲು ಅವಕಾಶ ನೀಡದಿದ್ದರೆ ಅದು ಸಂವಿಧಾನ ವಿರೋಧಿಯಾಗುತ್ತದೆ ಎಂದು ತಿಳಿಸಿದರು.
ಒಂದುವೇಳೆ ಬಿಜೆಪಿಗೆ ಸರ್ಕಾರ ರಚಿಸಲು ಆವಕಾಶ ನೀಡಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಎಚ್ಚರಿಸಿದರು. ರಾಜ್ಯಪಾಲರು ಸಂವಿಧಾನ ನಿಯಮಾವಳಿಯಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.